ಉಡುಪಿ: ಬ್ಯಾಂಕ್‌ಗಳ ವಿಲೀನಕ್ಕೂ ಮುಂಚಿತವಾಗಿ ಸಾಧಕ ಬಾಧಕಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಆರ್ಥಿಕ ವ್ಯವಸ್ಥೆಗೆ ಪೆಟ್ಟುಕೊಟ್ಟಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಟೀಕಿಸಿದರು.
ಶನಿವಾರ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ‘ಕರಾವಳಿಯ ಹೆಮ್ಮೆಯ ಬ್ಯಾಂಕ್‌ಗಳಾದ ಸಿಂಡಿಕೇಟ್, ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ನಿರ್ಧಾರ ಖಂಡನೀಯ. ಹಿಂದೆ, ಇಂದಿರಾಗಾಂಧಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜನರ ಬಳಿಗೆ ತಲುಪಿಸಿದರು. ಈಗ ಬಿಜೆಪಿ ಸರ್ಕಾರ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಜನರಿಂದ ದೂರವಾಗಿಸುತ್ತಿದೆ’ ಎಂದು ಟೀಕಿಸಿದರು.
‘ಹಿಂದೆ, ಆರ್‌ಬಿಐ ಡಿವಿಡೆಂಟ್ ರೂಪದಲ್ಲಿ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಿತ್ತು. ಆದರೆ, ಈ ಬಾರಿ ನಿಯಮಗಳನ್ನು ಗಾಳಿಗೆ ತೂರಿ ₹1.76 ಲಕ್ಷ ಕೋಟಿ ಮೀಸಲು ನಿಧಿಯನ್ನೇ ನೀಡಿದೆ’ ಎಂದು ಟೀಕಿಸಿದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಬ್ಯಾಂಕಿಂಗ್ ಕ್ಷೇತ್ರವನ್ನು ನಾಶಮಾಡುವ ಪಿತೂರಿ ನಡೆಯುತ್ತಿದೆ. ಬಿಜೆಪಿ ವಿರೋಧ ಪಕ್ಷಗಳನ್ನು ಹಗುರವಾಗಿ ಪರಿಗಣಿಸಿದೆ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸರ್ವಾಧಿಕಾರಿತನ ಒಳ್ಳೆಯದಲ್ಲ ಎಂದರು.
‘ಬಿಜೆಪಿ ಸರ್ಕಾರ ನೆರೆ ಸಂತ್ರಸ್ತರಿಗೆ ಸ್ಪಂದಿಸಲು ವಿಫಲವಾಗಿದೆ. ರಾಜ್ಯ ಸರ್ಕಾರ ₹ 50 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದೆ. ಆದರೆ, ವಾಸ್ತವವಾಗಿ ₹ 5 ಲಕ್ಷ ಕೋಟಿಯಷ್ಟು ಹಾನಿಯಾಗಿದೆ. ಸಂತ್ರಸ್ತರಿಗೆ ಬಿಡಿಗಾಸು ಕೊಟ್ಟು ಸರ್ಕಾರ ಕೈತೊಳೆದುಕೊಂಡಿದೆ. ರಾಜ್ಯಕ್ಕೆ ದೊಡ್ಡ ವಿಪತ್ತು ಎದುರಾದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ’ ಎಂದು ಟೀಕಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಗಫೂರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.