ಕುಂದಾಪುರ: ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ಭೇಟಿ ಮಾಡಿದ ಸಂಸದ ಬಿ.ವೈ. ರಾಘವೇಂದ್ರ, ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣ ಮಾಡಲು ಮನವಿ ಮಾಡಿದರು.
ಸುಮಾರು 1200 ವರ್ಷಗಳ ಇತಿಹಾಸವಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತರ ಬರುತ್ತಾರೆ. ದಿನವೊಂದಕ್ಕೆ 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ಜೊತೆಗೆ ಸೌಪರ್ಣಿಕಾ ನದಿ ಸ್ವಚ್ಛತೆ, ಶಂಕರಾಚಾರ್ಯ ಥೀಮ್ ಪಾರ್ಕ್, ಮಲ್ಟಿ ಲೆವೆಲ್ ಪಾರ್ಕಿಂಗ್, ವಿಮಾನ, ರೈಲ್ವೆ, ಬಸ್ಸು ಹಾಗೂ ಬಂದರು ಸಂಪರ್ಕ, ಕೇಬಲ್ ಕಾರ್, ಬೈಂದೂರು ಕ್ಷೇತ್ರದ ಇತಿಹಾಸ ಪ್ರಸಿದ್ಧ ದೇವಸ್ಥಾಗಳ ರಸ್ತೆ ಸಂಪರ್ಕ, ಕಡಲ ತೀರ ಹಾಗೂ ಜಲಪಾತಗಳ ಅಭಿವೃದ್ಧಿ, ಪಂಚಗಂಗಾವಳಿ ನದಿ ಅಭಿವೃದ್ಧಿ ಸಹಿತ ಹಲವು ಯೋಜನೆಗಳನ್ನೊಳಗೊಂಡ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಯೋಜನೆಯ ಅನುಷ್ಠಾನದಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಉದ್ಯಮಿ ವೆಂಕಟೇಶ್ ಕಿಣಿ ಇದ್ದರು.
ಸಂಸದರು ಹಾಗೂ ಶಾಸಕರು ಪ್ರಾಸ್ತಾವ ಮಾಡಿರುವ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಯೋಜನೆ ಬಗ್ಗೆ ಕೇಂದ್ರ ಹಣಕಾಸು ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರು ಕಚೇರಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.