ಉಡುಪಿ:ಶ್ರೀಕೃಷ್ಣಮಠದಲ್ಲಿ ಸಂಪ್ರದಾಯದಂತೆ ಶಯನಿ ಏಕಾದಶಿಯ ಪ್ರಯುಕ್ತ ಶುಕ್ರವಾರ ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿತು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಕಿರಿಯ ಮಠಾಧೀಶರಾದ ಈಶಪ್ರಿಯ ತೀರ್ಥರು, ಪಲಿಮಾರು ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರ ತೀರ್ಥರು ಮಠಕ್ಕೆ ಬಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು.
ಬೆಳಿಗ್ಗಿನಿಂದಲೇ ಸರದಿ ಸಾಲಿನಲ್ಲಿ ನಿಂತು ತೋಳಿಗೆ, ಎದೆಯ ಭಾಗಕ್ಕೆ ಹಾಗೂ ಹೊಟ್ಟೆಯ ಮೇಲೆ ಭಕ್ತರು ಶಂಕ ಹಾಗೂ ಚಕ್ರದ ಮುದ್ರೆ ಹಾಕಿಸಿಕೊಂಡರು.
ಏನಿದು ತಪ್ತ ಮುದ್ರಾಧಾರಣೆ:
‘ತಪ್ತ ಮುದ್ರಾಧಾರಣೆ’ ಎಂದರೆ ವೈಷ್ಣವ ಧೀಕ್ಷಾ ಪ್ರಧಾನ. ಭಗವಂತನ ಚಿಹ್ನೆಗಳಾದ ಶಂಖ ಹಾಗೂ ಚಕ್ರವನ್ನು ದೇಹದ ಮೇಲೆ ಮುದ್ರೆ ಹಾಕಿಸಿಕೊಂಡರೆ ದೇಹವನ್ನು ಭಗವಂತನಿಗೆ ಅಂಕಿತಗೊಳಿಸುವುದು ಎಂದರ್ಥ ಎನ್ನುತ್ತಾರೆ ವಿದ್ವಾಂಸರಾದ ಕೊರ್ಲಹಳ್ಳಿ ವೆಂಕಟೇಶ್ ಆಚಾರ್ಯ.
ಸುದರ್ಶನ ಚಕ್ರ ಸಕಲ ಅನಿಷ್ಠಗಳನ್ನು ಹಾಗೂ ರೋಗ ರುಜಿನಗಳನ್ನು ಪರಿಹರಿಸುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಶಂಖ ಸಂಪತ್ತಿನ ದ್ಯೋತಕವಾಗಿರುವುದರಿಂದ, ಎರಡೂ ಚಿಹ್ನೆಗಳನ್ನು ಧರಿಸುವುದರಿಂದ ಕಷ್ಟಗಳು ದೂರವಾಗಿ ಐಶ್ವರ್ಯ ಸಿದ್ಧಿಸುತ್ತದೆ. ಬೌದ್ಧಿಕ ಹಾಗೂ ಭೌತಿಕ ಸಂಪತ್ತು ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆಅವರು.
ಮುದ್ರಾಧಾರಣೆಯಿಂದ ಸಕಲ ಪಾಪ ಪರಿಹಾರವಾಗುತ್ತದೆ. ಜತೆಗೆ, ಮುಂದೆ ಪಾಪಗಳನ್ನು ಮಾಡದಂತೆ ಮನುಷ್ಯನಿಗೆ ಸದಾ ಜಾಗೃತೆಯಿಂದ ಇರುವಂತೆ ಮಾಡುತ್ತದೆ ಎಂದರು.
ಮೂರು ಬಾರಿ ಮುದ್ರಾಧಾರಣೆ:
ಚಾತುರ್ಮಾಸ್ಯದ ಸಂದರ್ಭ ಮೂರು ಬಾರಿ ತಪ್ತ ಮುದ್ರಾಧಾರಣೆ ಮಾಡಲಾಗುತ್ತದೆ. ಆಷಾಡಶುದ್ಧ ಪ್ರಥಮ ಏಕಾದಶಿ ದಿನವಾದ ಶುಕ್ರವಾರ ದೇವರು ಯೋಗನಿದ್ರೆಗೆ ಜಾರುವ ದಿನ. ಹಾಗಾಗಿ, ಈ ದಿನ ಮುದ್ರಾಧಾರಣೆಗೆ ವಿಶೇಷ ಮಹತ್ವ.
2 ತಿಂಗಳ ಬಳಿಕಬಾದ್ರಪದ ಶುದ್ಧ ಏಕಾದಶಿಯಲ್ಲಿ ದೇವರು ಮಗ್ಗಲು ಬದಲಿಸುವ ಸಂದರ್ಭ 2ನೇ ಮುದ್ರಾಧಾರಣೆ ನಡೆಯುತ್ತದೆ. ಕಾರ್ತಿಕ ಶುದ್ಧ ಏಕಾದಶಿಯಲ್ಲಿ ದೇವರು ನಿದ್ದೆಯಿಂದ ಏಳುವ ಸಮಯದಲ್ಲಿ ಮೂರನೇ ಮುದ್ರಾಧಾರಣೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ದೇಹ ಹಾಗೂ ಮನಸ್ಸಿನ ಶುದ್ಧೀಕರಣಕ್ಕೆ ತಪ್ತದಾರಣೆ ಅಗತ್ಯ. ಬಲಭುಜಕ್ಕೆ ಸುದರ್ಶನ ಚಕ್ರ, ಎಡಭುಜದಲ್ಲಿ ಶಂಕ ಮುದ್ರೆ ಹಾಕಲಾಗುತ್ತದೆ. ಕೆಲವರಿಗೆ ಎದೆಯ ಮೇಲೆ, ಹೊಟ್ಟೆಯ ಮೇಲೆ ಸೇರಿ ಪಂಚ ಮುದ್ರೆ ಹಾಕಿಕೊಳ್ಳುವ ರೂಢಿ ಇದೆ. ಬ್ರಾಹ್ಮಣೇತರರೂ ಮುದ್ರಾಧಾರಣೆ ಮಾಡಬಹುದು ಎಂದು ತಿಳಿಸಿದರು.
ತಾಮ್ರದ ಅಚ್ಚುಗಳನ್ನು ಕಾಸಿ ದೇಹಕ್ಕೆ ತಾಗಿಸುವುದರಿಂದ ಮಳೆಗಾಲದ ರೋಗ ರುಜಿನಗಳು ಬರುವುದಿಲ್ಲ; ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ವೈಜ್ಞಾನಿಕವಾಗಿಯೂ ತಪ್ತ ಮುದ್ರಾಧಾರಣೆ ಮಹತ್ವ ಪಡೆದುಕೊಂಡಿದೆ ಎಂದು ಕೊರ್ಲಹಳ್ಳಿ ವೆಂಕಟೇಶ್ ಆಚಾರ್ಯ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.