ADVERTISEMENT

ಹೆಬ್ರಿ | ಕೊಚ್ಚಿಹೋದ ಕಾಲುಸಂಕ: ಸಂಪರ್ಕ ಕಡಿತ

ಮುದ್ರಾಡಿ ಗ್ರಾಮದ ಕಬ್ಬಿನಾಲೆಯ ಮತ್ತಾವಿಗೆ ಹೋಗಲು ಹಾಕಿರುವ ಮರದ ಸಂಕ, ಮಲೆಕುಡಿಯ ಕುಟುಂಬಗಳಿಗೆ ಸಮಸ್ಯೆ

ಸುಕುಮಾರ್ ಮುನಿಯಾಲ್
Published 9 ಅಕ್ಟೋಬರ್ 2024, 7:24 IST
Last Updated 9 ಅಕ್ಟೋಬರ್ 2024, 7:24 IST
ಹೆಬ್ರಿಯ ಮುದ್ರಾಡಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬಿನಾಲೆಯ ಮತ್ತಾವಿಗೆ ಹೋಗಲು ಹಾಕಿರುವ ಮರದ ಕಾಲು ಸಂಕ (ಪಾಪು) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. 
ಹೆಬ್ರಿಯ ಮುದ್ರಾಡಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬಿನಾಲೆಯ ಮತ್ತಾವಿಗೆ ಹೋಗಲು ಹಾಕಿರುವ ಮರದ ಕಾಲು ಸಂಕ (ಪಾಪು) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.    

ಹೆಬ್ರಿ: ಭಾನುವಾರ ಸುರಿದ ಭಾರಿ ಮಳೆಗೆ ಮುದ್ರಾಡಿ ಗ್ರಾಮದ ಕಬ್ಬಿನಾಲೆಯ ಮತ್ತಾವಿಗೆ ಹೋಗಲು ಹಾಕಿರುವ ಮರದ ಕಾಲು ಸಂಕ (ಪಾಪು) ನೀರಿನಲ್ಲಿ ಕೊಚ್ಚಿಹೋಗಿ ಮತ್ತಾವು ಸಂಪರ್ಕ ಕಡಿತಗೊಂಡಿದೆ.

ಇಲ್ಲಿನ ಸಮಸ್ಯೆಯ ಬಗ್ಗೆ ಮೂಲಸೌಕರ್ಯ, ಗ್ರಾಮದ ಅಭಿವೃದ್ಧಿಗೆ ಒತ್ತಾಯಿಸಿ 2005ರ ಜುಲೈ 28ರಂದು ಮತ್ತಾವು ಬಳಿ ಗ್ರೆನೇಡ್‌ ನೆಲಬಾಂಬ್ ಸ್ಫೋಟಿಸಿ ನಕ್ಸಲರು ರಾಜ್ಯದ ಗಮನ ಸೆಳೆದಿದ್ದರು. ಕಬ್ಬಿನಾಲೆ ನಕ್ಸಲ್ ಬಾಂಬ್ ದಾಳಿಗೆ 19 ವರ್ಷಗಳು ಕಳೆದಿವೆ. ಆದರೆ ಮತ್ತಾವಿನ ಸೇತುವೆ ಕನಸು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.

ಈ ಭಾಗದಲ್ಲಿ 11 ಮಲೆಕುಡಿಯ ಕುಟುಂಬಗಳು ವಾಸಿಸುತ್ತಿವೆ. ಈ‌ ಕುಟುಂಬಗಳು ಕಬ್ಬಿನಾಲೆ ಹೆಬ್ರಿ ಮುನಿಯಾಲು ಸಂಪರ್ಕಿಸಬೇಕಾದರೆ ಈ ಮರದ ಕಾಲುಸಂಕ ಮೂಲಕವೇ ನಿತ್ಯ ದಾಟಬೇಕು. 3 ವರ್ಷಗಳಲ್ಲಿ ಮಳೆಗಾಲದಲ್ಲಿ 4 ಬಾರಿ ಮರದ ಕಾಲುಸಂಕಗಳು ಕಬ್ಬಿನಾಲೆ ನದಿ ಹರಿವಿಗೆ ಕೊಚ್ಚಿಕೊಂಡು ಹೋಗಿವೆ.

ADVERTISEMENT

ಸಂಪರ್ಕವಿಲ್ಲ: ಕಬ್ಬಿನಾಲೆ ನದಿ ಸೆಳೆತಕ್ಕೆ ಮರದ ಸೇತುವೆ ಕೊಚ್ಚಿಕೊಂಡು ಹೋದರೆ 3 ತಿಂಗಳು ಪೇಟೆಯ ಸಂಪರ್ಕವಿಲ್ಲ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿದು ಬರುವ ಕಬ್ಬಿನಾಲೆ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತದೆ.‌ ಮರದ ಕಾಲು ಸಂಕದ ಮೇಲೆ ಸಾಗಲು ಕಬ್ಬಿಣದ ಸರಿಗೆ ಹಿಡಿದು ಸಾಗಬೇಕು. ಸೇತುವೆ ಗಟ್ಟಿಯಾಗಿಸಲು ಕಬ್ಬಿಣದ ಸರಿಗೆಯಿಂದ ಮರಕ್ಕೆ ಬಿಗಿಯಲಾಗಿದೆ. ಗರ್ಭಿಣಿ ಮಹಿಳೆಯರು, ಅನಾರೋಗ್ಯ ಸಮಸ್ಯೆ ಉಂಟಾದರೆ ಹೋಗುವುದೇ ಸವಾಲಾಗಿದೆ.

ಪ್ರಯತ್ನಗಳು ನಡೆಯುತ್ತಿವೆ: ಮತ್ತಾವು ಮರದ ಕಾಲುಸಂಕ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ಬಂದಿದೆ. ಇಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಬಹಳ ಸಮಯದಿಂದ ಪ್ರಯತ್ನಗಳು ನಡೆಯುತ್ತಿವೆ. ಕೆಆರ್‌ಡಿಎಲ್ ಮೂಲಕ ತಗಲುವ ವೆಚ್ಚದ ಬಗ್ಗೆ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಅಂದಾಜು ಪಟ್ಟಿ ಸಿಕ್ಕಿದ ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಗೆ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆ ಸಲ್ಲಿಸುತ್ತೇವೆ. ಶೀಘ್ರದಲ್ಲೇ ಕ್ರಮ ಜರುಗುವ ಬಗ್ಗೆ ವಿಶ್ವಾಸವಿದೆ ಎಂದು ಐಟಿಡಿಪಿ ಉಡುಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ತಿಳಿಸಿದರು.

ಹೆಬ್ರಿಯ ಮುದ್ರಾಡಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬಿನಾಲೆಯ ಮತ್ತಾವಿಗೆ ಹೋಗಲು ಹಾಕಿರುವ ಮರದ ಕಾಲು ಸಂಕ (ಪಾಪು) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. 
ಸಮಸ್ಯೆಯ ಬಗ್ಗೆ ಅರಿವಿದೆ. ಮತ್ತಾವು ಪ್ರದೇಶ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವುದರಿಂದ ವನ್ಯಜೀವಿ ಡಿಸಿಎಫ್ ಜೊತೆ ಚರ್ಚಿಸಿ ತಾತ್ಕಾಲಿಕ ಕಾಲುಸಂಕ ನಿರ್ಮಿಸಿ ಕೊಡುವ ಬಗ್ಗೆ ಚರ್ಚಿಸಲಾಗುವುದು.
–ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ
ಮತ್ತಾವಿನ 11 ಮಲೆಕುಡಿಯ ಕುಟುಂಬಗಳಿಗೆ ಈ ಸೇತುವೆಯೇ ಆಧಾರ. ಅದಷ್ಟು ಬೇಗ ಸರ್ವ ಋತು ಸೇತುವೆ ನಿರ್ಮಾಣಗೊಳ್ಳಬೇಕು. ವಾಹನಗಳು ಮನೆತನಕ ಸಾಗಬೇಕು.
–ಗಂಗಾಧರ ಗೌಡ ಈದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.