ADVERTISEMENT

ಕುಂದಾಪುರ | ಸಹಕಾರ ಸಂಘದಿಂದ ಶವ ದಹನ ಸಂಚಾರಿ ಯಂತ್ರ: ರಾಜ್ಯದಲ್ಲೇ ಮೊದಲು

ರಾಜ್ಯದಲ್ಲೇ ಮೊದಲ ಪ್ರಯೋಗ: ಸಂಘ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 11:32 IST
Last Updated 18 ಜನವರಿ 2023, 11:32 IST
ಮುದೂರು ವ್ಯವಸಾಯ ಸಹಕಾರಿ ಸಂಘ ಖರೀದಿಸಿರುವ ಶವ ದಹನ ಸಂಚಾರಿ ಯಂತ್ರ
ಮುದೂರು ವ್ಯವಸಾಯ ಸಹಕಾರಿ ಸಂಘ ಖರೀದಿಸಿರುವ ಶವ ದಹನ ಸಂಚಾರಿ ಯಂತ್ರ   

ಕುಂದಾಪುರ (ಉಡುಪಿ ಜಿಲ್ಲೆ): ಕೊಲ್ಲೂರು ಸಮೀಪದ ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ‘ಶವ ದಹನ ಸಂಚಾರಿ ಯಂತ್ರ‘ ಖರೀದಿಸಿದೆ.

ಮುದೂರು ಗ್ರಾಮದಲ್ಲಿ ಸಾವಿರಾರು ಎಕರೆ ಭೂಮಿ ಇದ್ದರೂ, ಹಿಂದೂ ರುದ್ರಭೂಮಿ ಇಲ್ಲ. ಭೂ ಮಾಲೀಕರು ತಮ್ಮ ಜಾಗದಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದರೆ, ಜಮೀನು ಇಲ್ಲದವರು ಸುಮಾರು 50 ಕಿ.ಮೀ ದೂರದ ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆಯ ಹಿಂದೂ ರುದ್ರಭೂಮಿಗೆ ಶವ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡುತ್ತಿದ್ದರು.

2022ರ ಮೇ 22ರಂದು ಮುದೂರು ಗ್ರಾಮದ ಉದಯನಗರದ ಗುಂಡಿನ ಹೊಳೆಯ ಕೈಲಾಸ ಎನ್ನುವವರು ಮೃತಪಟ್ಟಿದ್ದರು. ಸಾರ್ವಜನಿಕ ಜಾಗ ದೊರಕದೆ, ಮೃತರ ಮನೆಯ ಜಾಗದಲ್ಲಿಯೇ ಶವಸಂಸ್ಕಾರ ನಡೆಸಲಾಗಿತ್ತು.

ADVERTISEMENT

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಘವು, ಕೇರಳದಲ್ಲಿ ಚಾಲ್ತಿಯಲ್ಲಿರುವ ‘ಶವ ದಹನ ಸಂಚಾರಿ ಯಂತ್ರ’ದ ಮಾಹಿತಿ ಪಡೆದು, ಅದನ್ನು ಖರೀದಿಸಿದೆ.

ಕೇರಳದ ಸ್ಟಾರ್ ಚೇರ್ ಕಂಪನಿ ನಿರ್ಮಿಸಿರುವ 7 ಅಡಿ ಉದ್ದ ಹಾಗೂ 4 ಅಡಿ ಅಗಲದ ಸ್ಟೀಲ್‌ನ ಉರುವಲು ಒಲೆಯಂತೆ ಕಾಣುವ ಯಂತ್ರದಲ್ಲಿ ಅಡುಗೆ ಅನಿಲ ಬಳಸಿ ದಹನ ಕ್ರಿಯೆ ನಡೆಸಲಾಗುತ್ತದೆ. ಒಂದು ಶವ ದಹಿಸಲು ಎರಡು ಗ್ಯಾಸ್ ಸಿಲಿಂಡರ್ ಬೇಕಾಗಬಹುದು. ಈ ಯಂತ್ರಕ್ಕೆ ₹4.80ಲಕ್ಷ ವೆಚ್ಚ ಮಾಡಿದ್ದು, ಸಂಘದ ಮರಣ ನಿಧಿಯಿಂದ ಶವ ಸಂಸ್ಕಾರ ಯಂತ್ರದ ಸಾಗಣೆ, ಗ್ಯಾಸ್ ಸಹಿತ ಇತರ ಖರ್ಚು ನಿಭಾಯಿಸಲಾಗುತ್ತಿದೆ ಎಂದು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯ್‌ ಶಾಸ್ತ್ರಿ ಹೇಳಿದರು.

ಮೃತರ ಮನೆಯ ಬಳಿಯೇ ಸಂಪ್ರದಾಯಬದ್ಧವಾಗಿ ಶವ ಸಂಸ್ಕಾರ ಮಾಡಲು ಇದರಿಂದ ಸಾಧ್ಯ ಎಂದರು.

‘ಹಿಂದುಳಿದವರೇ ಹೆಚ್ಚು ವಾಸವಾಗಿರುವ ಈ ಪರಿಸರದಲ್ಲಿ ಸಾವು ಸಂಭವಿಸಿದರೆ ಶವ ಸಂಸ್ಕಾರಕ್ಕಾಗಿ ದೂರದ ಕುಂದಾಪುರಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಈಗ ಸಮಸ್ಯೆ ಪರಿಹಾರದ ಜೊತೆ, ಆರ್ಥಿಕ ಹೊರೆಯೂ ತಗ್ಗಿದೆ’ ಎಂದು ಮುಖಂಡ ವಾಸುದೇವ ಮುದೂರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.