ಉಡುಪಿ: ಎರ್ನಾಕುಲಂ- ನಿಜಾಮುದ್ದೀನ್ ಮಾರ್ಗದಲ್ಲಿ ಸಂಚರಿಸುವ ಮಂಗಳಾ ಲಕ್ಷದೀಪ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು.
ಮಧ್ಯರಾತ್ರಿ 1.20ರ ಸುಮಾರಿಗೆ ರೈಲು ಬೈಂದೂರಿನ ಬಿಜೂರು ನಿಲ್ದಾಣ ಬಿಟ್ಟ ಕೆಲವೇ ಕ್ಷಣಗಳಲ್ಲಿ ಬಿ 4 ಎಂಬ ಹವಾನಿಯಂತ್ರಿತ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಪ್ರಯಾಣಿಕರೊಬ್ಬರು ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿ ತಕ್ಷಣ ಸಿಬ್ಬಂದಿಗೆ ಮಾಹಿತಿ ನೀಡಿದರು.
ಎಚ್ಚೆತ್ತ ಅಧಿಕಾರಿಗಳು ಬೆಂಕಿ ನಂದಿಸುವ ಉಪಕರಣಗಳ ಸಹಾಯದಿಂದ ಬೆಂಕಿಯನ್ನು ನಂದಿಸಿದರು.
ಬಳಿಕ ಸೇನಾಪುರ ನಿಲ್ದಾಣಕ್ಕೆ ರೈಲನ್ನು ತಂದು ಬೆಂಕಿಗೆ ಆಹುತಿಯಾದ ಕೋಚ್ ಅನ್ನು ಪ್ರತ್ಯೇಕಿಸಿ ಮಂಗಳೂರಿನಲ್ಲಿ ಹೊಸ ಎಸಿ ಬೋಗಿಯನ್ನು ಅಳವಡಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು ಎಂದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ಬೆಂಕಿ ಅವಘಡದಲ್ಲಿ ಪ್ರಯಾಣಿಕರ ಪ್ರಾಣಕ್ಕೆ ಹಾನಿಯಾಗಿಲ್ಲ. ಸುದ್ದಿ ತಿಳಿದ ತಕ್ಷಣ ಅಗತ್ಯ ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಗಿತ್ತು. ಗೋವಾ, ಮಂಗಳೂರು, ಉಡುಪಿ ವಿಭಾಗಗಳ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವಘಡದ ಮಾಹಿತಿ ಪಡೆದುಕೊಂಡಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.