ಹೆಬ್ರಿ: ಮುಂಗಾರು ಮಳೆ ಭೂಮಿಗೆ ಬಿದ್ದ ಬಳಿಕ ಕಲ್ಲಣಬೆ ನೆಲದೊಳಗೆ ಮೊಳಕೆಯೊಡೆದು ಬರುತ್ತದೆ. ಈ ಬಾರಿ ಮೇ ಅಂತ್ಯಕ್ಕೆ ಮಳೆ ಆರಂಭವಾಗಿದ್ದು, ಕಲ್ಲಣಬೆಗಳು ಮೊಳಕೆಯೊಡೆದಿವೆ.
ಅಣಬೆ ಪ್ರಿಯರಿಗೆ ಸುಗ್ಗಿ: ಹಳ್ಳಿಗಳಲ್ಲಿ ಅಣಬೆ ಪ್ರಿಯರು ಚೂಪಾದ ಕೋಲು, ಕತ್ತಿ, ಚೀಲ ಹಿಡಿದುಕೊಂಡು ಗುಡ್ಡ ಪ್ರದೇಶಗಳಲ್ಲಿ ಕಲ್ಲಣಬೆ ಹುಡುಕುವ ದೃಶ್ಯ ಸಾಮಾನ್ಯವಾಗಿರುತ್ತದೆ. ಅವಿಭಜಿತ ಕಾರ್ಕಳ ತಾಲ್ಲೂಕಿನ ಎಳ್ಳಾರೆ, ಶಿರ್ಲಾಲು, ಕೆರ್ವಾಶೆ, ಮಿಯ್ಯಾರು, ಹೊಸ್ಮಾರು, ಈದು ಬಜಗೋಳಿ, ಮುನಿಯಾಲು, ಮುದ್ರಾಡಿ, ನಾಡ್ಪಾಲು ಹೆಬ್ರಿಯಲ್ಲಿ ಹಳ್ಳಿ ಮಂದಿ ಕಾಡಿನ ಅಂಚಿನ ಭಾಗಗಳಲ್ಲಿ ಗುಂಪಾಗಿ ಸೇರಿಕೊಂಡು ಹುಡುಕುತ್ತಾ ಸಾಗುತ್ತಿರುವುದು ಕಂಡುಬರುತ್ತಿದೆ. ಮನೆ ಬಳಕೆಗಲ್ಲದೆ ಮಾರಾಟಕ್ಕೂ ಕಲ್ಲಣಬೆ ಹುಡುಕುತ್ತಿರುವುದು ಕಾಣಸಿಗುತ್ತಿದೆ.
ಬಲು ದುಬಾರಿ: ಕಳೆದ ಬಾರಿ ಕಲ್ಲಣಬೆ ಒಂದು ಸೇರಿಗೆ ₹800ರಿಂದ ₹1 ಸಾವಿರದಂತೆ ಮಾರಾಟವಾಗುತಿತ್ತು. ಈ ಬಾರಿ ಮಳೆ ತಡವಾದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕಲ್ಲಣಬೆ ಸಿಗುತ್ತಿಲ್ಲ. ಸೇರಿಗೆ ₹1 ಸಾವಿರದಿಂದ ₹1.5 ಸಾವಿರಕ್ಕೆ ಮಾರಾಟವಾಗುತ್ತಿದೆ.
ದಾಖಲೆ ಉಷ್ಣತೆ: ಕಳೆದೆರಡು ವರ್ಷಗಳಲ್ಲಿ ಬೇಸಿಗೆಯಲ್ಲೆ ಸಾಕಷ್ಟು ಮಳೆ ಸುರಿದಿದ್ದರಿಂದ ಮಳೆಗಾಲ ಶುರುವಾಗುವ ಮೊದಲೇ ಕಲ್ಲಣಬೆ ಮಾರುಕಟ್ಟೆ ಪ್ರವೇಶಿಸಿತ್ತು. ಭೂಮಿ ತಂಪಾದರೆ ಮಾತ್ರ ಕಲ್ಲಣಬೆ ಹುಟ್ಟುತ್ತವೆ. ಆದರೆ ಈ ಬಾರಿ ಉಷ್ಣತೆ ಅಧಿಕವಾಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಕಲ್ಲಣಬೆ ಸಿಗುತ್ತಿಲ್ಲ.
ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು: ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲಣಬೆ ರುಚಿ ಸವಿದಿರುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಮುಂಬೈ, ಬೆಂಗಳೂರು ನಗರಗಳಲ್ಲಿ ವಾಸಿಸುವ ಕರಾವಳಿಯ ಮಂದಿ ₹2 ಸಾವಿರ ನೀಡಿ ಬುಕಿಂಗ್ ಮಾಡಲು ಸಿದ್ಧರಿರುತ್ತಾರೆ. ಅದರೆ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಬುಕಿಂಗ್ ಮಾಡುತ್ತಿಲ್ಲ ಎಂದು ಕಾರ್ಕಳದ ವ್ಯಾಪಾರಿ ಮಹಾವೀರ ಜೈನ್ ಹೇಳಿದರು.
ಈ ಬಾರಿ ಕಳೆದ ವಾರದಲ್ಲಿ ಒಂದು ಬಾರಿ ಕಲ್ಲಣಬೆ ಮಾರಾಟಕ್ಕೆ ಬಂದಿದೆ. ಸೇರು ಒಂದಕ್ಕೆ ₹15 ಸಾವಿರಕ್ಕೆ ಮಾರಾಟವಾಗಿದೆ. ಲಭ್ಯತೆ ಹೆಚ್ಚಾದರೆ ದರ ಇಳಿಯಬಹುದು ಬೇಡಿಕೆ ಹೆಚ್ಚಿದ್ದರೆ ಏರಿಕೆಯಾಗಬಹುದುಶಾಶ್ವತ್ ಪೂಜಾರಿ
ಅತಿ ರುಚಿಕರವಾದ ಕಲ್ಲಣಬೆಯಲ್ಲಿ ಪೌಷ್ಟಿಕಾಂಶ ಹೇರಳವಾಗಿದೆ. ರಾಸಾಯನಿಕ ಹೊಂದಿರದ ಪ್ರಕೃತಿಯ ಆಹಾರ. ಈ ಬಾರಿ ದುಬಾರಿಯಾಗಿದ್ದರೂ ಮೊದಲೇ ಬುಕಿಂಗ್ ಮಾಡಿಕೊಂಡಿದ್ದೇವೆರಕ್ಷಿತಾ ಕೋಟ್ಯಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.