ADVERTISEMENT

ಉಡುಪಿ: ಸರ್ಕಾರಿ ಆಸ್ಪತ್ರೆಗೆ ಬೇಕಿದೆ ಮಾನವ ಸಂಪನ್ಮೂಲದ ಬಲ

ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

ನವೀನ್‌ಕುಮಾರ್ ಜಿ
Published 24 ಜೂನ್ 2024, 5:35 IST
Last Updated 24 ಜೂನ್ 2024, 5:35 IST
ಉಡುಪಿ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡ
ಉಡುಪಿ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡ   

ಉಡುಪಿ: ತಜ್ಞ ವೈದ್ಯರ ಕೊರತೆ, ಅಗತ್ಯಕ್ಕೆ ತಕ್ಕಷ್ಟು ನರ್ಸಿಂಗ್‌ ಸಿಬ್ಬಂದಿ ಇಲ್ಲದಿರುವುದು, ಐಸಿಯುನಲ್ಲಿ ಸಮರ್ಪಕವಾಗಿ ಸಿಗದ ಬೆಡ್‌, ಆಗಾಗ ಕೈ ಕೊಡುವ ಸರ್ವರ್‌... ಇದು ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಹೈರಾಣಾಗಿಸಿರುವ ಸಮಸ್ಯೆಗಳು.

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿದ್ದರೂ ಅದಕ್ಕೆ ತಕ್ಕಂತೆ ಸಿಬ್ಬಂದಿ ನೇಮಿಸಲು ಸಂಬಂಧಪಟ್ಟವರು ಮುಂದಾಗದಿರುವುದು ಸಮಸ್ಯೆಗೆ ಕಾರಣವಾಗಿದೆ.

ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯು 124 ಬೆಡ್‌ಗಳ ಸಾಮರ್ಥ್ಯ ಹೊಂದಿದ್ದು, ರೋಗಿಗಳು ಅಧಿಕ ಸಂಖ್ಯೆಯಲ್ಲಿ ಬರುವಾಗ ಇಲ್ಲಿ ಸದಾ ಬೆಡ್‌ ಸಮಸ್ಯೆ ಉಂಟಾಗುತ್ತಿದೆ. ಜಿಲ್ಲಾಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ ನಡೆಯುತ್ತಿದ್ದರೂ ಅದು ಪೂರ್ಣಗೊಳ್ಳಲು ಇನ್ನೂ ತಿಂಗಳುಗಳೇ ಬೇಕು.

ADVERTISEMENT

ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕಾಯಂ ತಜ್ಞ ವೈದ್ಯರಿಲ್ಲದಿರುವುದರಿಂದ ನ್ಯಾಷನಲ್‌ ಹೆಲ್ತ್ ಮಿಷನ್ ಯೋಜನೆ ಅಡಿ (ಎನ್‌ಎಚ್‌ಎಂ) ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ಹಾಗೂ ನರ್ಸಿಂಗ್‌ ಸಿಬ್ಬಂದಿ ನೇಮಕ ಮಾಡಲಾಗಿದೆ. ಇನ್ನು ಕೆಲವು ವೈದ್ಯರ ಸೇವೆಯನ್ನು ನಿಯೋಜನೆ ಮೇಲೆ ಪಡೆಯಲಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಮೂರು ಅರಿವಳಿಕೆ ತಜ್ಞರ ಹುದ್ದೆಗಳಿದ್ದು, ಕಾಯಂ ಆಗಿ ಒಬ್ಬರಷ್ಟೇ ಇದ್ದಾರೆ. ಶಿರ್ವ ಮತ್ತು ಹೆಬ್ರಿಯ ಆಸ್ಪತ್ರೆಗಳಲ್ಲಿ ಇಬ್ಬರು ನಿಯೋಜನೆ ಮೂಲಕ ಕೆಲಸ ನಿರ್ವಹಿಸುತ್ತಿದ್ದಾರೆ. ಜನರಲ್‌ ಸರ್ಜನ್ ಹುದ್ದೆ ಕೂಡ ಖಾಲಿ ಇದ್ದು, ಕಾರ್ಕಳದಿಂದ ವೈದ್ಯರನ್ನು ಈ ಹುದ್ದೆಗೆ ನಿಯೋಜನೆ ಮೇಲೆ ಕರೆಸಲಾಗಿದೆ.

ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು 70 ಬೆಡ್‌ಗಳ ಸಾಮರ್ಥ್ಯ ಹೊಂದಿದೆ. ಆದರೆ, ಇಲ್ಲಿ ಕಾಯಂ ಆಗಿ ಕಾರ್ಯ ನಿರ್ವಹಿಸುವ ಹೆರಿಗೆ ತಜ್ಞರಿಲ್ಲ. ಮೂವರು ಹೆರಿಗೆ ತಜ್ಞರನ್ನು ಎನ್‌ಎಚ್‌ಎಂ ಅಡಿಯಲ್ಲಿ ನೇಮಕ ಮಾಡಲಾಗಿದೆ. ಈ ಆಸ್ಪತ್ರೆಗೆ ಕಾಯಂ ಹೆರಿಗೆ ತಜ್ಞರನ್ನು ನೇಮಕ ಮಾಡಬೇಕೆಂದು ಸಾರ್ವಜನಿಕರು ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ.

ಮೇಲ್ದರ್ಜೆಗೇರದ ಹೆಬ್ರಿ ಆಸ್ಪತ್ರೆ: ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಯೇ ಹೆಚ್ಚು ವಾಸಿಸುತ್ತಿರುವ ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಕೂಗು ಹಲವು ಕಾಲದಿಂದ ಕೇಳಿ ಬರುತ್ತಿದೆ.

ಒಳರೋಗಿ ಮತ್ತು ಹೊರ ರೋಗಿಗಳ ವಿಭಾಗಕ್ಕೆ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಭೇಟಿ ನೀಡುತ್ತಾರೆ. ಆಸ್ಪತ್ರೆಗೆ ಬೃಹತ್‌ ಕಟ್ಟಡವಿದೆ, ಆದರೆ ಸಮುದಾಯ ಆರೋಗ್ಯ ಕೇಂದ್ರವಾಗಿರುವ ಕಾರಣದಿಂದ ಹೆಚ್ಚಿನ ಸೌಲಭ್ಯಗಳ, ನುರಿತ ವೈದ್ಯರ ಕೊರತೆ ಇದೆ. ಆಸ್ಪತ್ರೆಯು ಈಗ ಹೆಬ್ರಿ ತಾಲ್ಲೂಕು ಕೇಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಸಕಲ ವ್ಯವಸ್ಥೆಯ ಸುಸಜ್ಜಿತ ಕಟ್ಟಡಲ್ಲಿದೆ.

ಹೆಬ್ರಿ ತಾಲ್ಲೂಕು ಆಗಿ 5 ವರ್ಷ ಕಳೆದಿದೆ. ಆದರೆ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಇನ್ನೂ ಆಗಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್‌ ಅವರು ಶಾಸಕ ಸುನಿಲ್‌ ಕುಮಾರ್‌ ಅವರ ಮನವಿ ಮೇರೆಗೆ ಆಸ್ಪತ್ರೆಯನ್ನು ಶೀಘ್ರ  ಮೇಲ್ದರ್ಜೆಗೇರಿಸುವುದಾಗಿ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೂ ಸ್ಥಳೀಯ ನಾಯಕರು ಈಗಾಗಲೇ ಮನವಿ ಮಾಡಿದ್ದಾರೆ. ಆದರೆ ಈ ತನಕ ಯಾವುದೇ ಪ್ರಕ್ರಿಯೆ ಆಗಿಲ್ಲ.

ಕಾಪು ಆಸ್ಪತ್ರೆಯದ್ದೂ ಅದೇ ಪಾಡು: ಕಾಪು ತಾಲ್ಲೂಕಾಗಿ ಏಳು ವರ್ಷ ಕಳೆದರೂ ಇಲ್ಲಿನ ಆಸ್ಪತ್ರೆ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರದೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೆ ಉಳಿದಿದೆ.

ನೂರಾರು ಸಂಖ್ಯೆಯಲ್ಲಿ ರೋಗಿಗಳು ಇಲ್ಲಿಗೆ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅತಿ ಹೆಚ್ಚು ಅಪಘಾತಗಳು ನಡೆಯುವ ಕಾಪುವಿನಲ್ಲಿ ತುರ್ತು ಚಿಕಿತ್ಸೆಗೆ ಸರಿಯಾದ ಆಸ್ಪತ್ರೆಗಳು ಇಲ್ಲದೆ ಜನರು ಸರ್ಕಾರಿ ಆಸ್ಪತ್ರೆಯನ್ನೇ ಆಶ್ರಯಿಸಬೇಕಾಗಿದೆ. ಆದರೆ, ಇಲ್ಲಿ ತುರ್ತು ಸಂದರ್ಭಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಕಾಡುತ್ತದೆ. ಈ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

‌‘ತುರ್ತು ಸಂದರ್ಭಗಳಲ್ಲಿ ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕ ಆಗಬೇಕಾಗಿದೆ. ಈ ಬಗ್ಗೆ ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಈ ವ್ಯವಸ್ಥೆ ಆಗಬೇಕಿದೆ’ ಎನ್ನುತ್ತಾರೆ ಕಾಪು ಪುರಸಭಾ ಸದಸ್ಯ ಅರುಣ್ ಪಾದೂರು.

ಕುಂದಾಪುರ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಹೊರರೋಗಿ ಮತ್ತು ಒಳರೋಗಿ ವಿಭಾಗಕ್ಕೆ ಪ್ರತಿನಿತ್ಯ ಸಾಕಷ್ಟು ಜನರು ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಆದರೆ ಸ್ಟಾಫ್‌ ನರ್ಸ್‌, ತಾಂತ್ರಿಕ ಸಿಬ್ಬಂದಿ ಕೊರತೆ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.

ಸಾರ್ವಜನಿಕರ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲ. ಭದ್ರತಾ ಸಿಬ್ಬಂದಿಯೂ ಸೇವೆ. ಪೊಲೀಸ್‌ ಔಟ್‌ಪೋಸ್ಟ್‌ನ ಅಗತ್ಯವಿದೆ. ಜನರಲ್‌ ಆಸ್ಪತ್ರೆಯಲ್ಲಿ ಕೇವಲ 100 ಬೆಡ್‌ಗಳ ಸಾಮರ್ಥ್ಯ ಇರುವುದರಿಂದ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ.

ಈಚೆಗೆ ತುರ್ತು ನಿಗಾ ಘಟಕದ ಕೆಲಸ ಪೂರ್ಣಗೊಂಡಿದೆ ಆದರೆ ಕೆಲಸವು ಗುಣಮಟ್ಟದಿಂದ ಕೂಡಿಲ್ಲ ಮತ್ತು ತುರ್ತು ನಿಗಾ ಘಟಕಕ್ಕೆ ಹೆಚ್ಚಿನ ಸಂಖ್ಯೆಯ ಹಾಸಿಗೆಗಳ ಅಗತ್ಯವಿದೆ ಎಂದು ಜನರು ಹೇಳಿದ್ದಾರೆ.

ಅಡುಗೆಮನೆ ನವೀಕರಿಸಬೇಕು, ಬಡಿಸುವ ಆಹಾರದ ಗುಣಮಟ್ಟವನ್ನು ಸುಧಾರಿಸಬೇಕು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಟ್ರಾಲಿಗಳಲ್ಲಿ ಪ್ರತ್ಯೇಕವಾಗಿ ಬಡಿಸಬೇಕು ಎಂಬುದಾಗಿಯೂ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.

ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಫಿಸಿಷಿಯನ್, ಆರ್ಥೋಪೆಡಿಕ್ ಸರ್ಜನ್, ಹೆರಿಗೆ ತಜ್ಞರು, ಸ್ತ್ರೀರೋಗ ತಜ್ಞರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.

ಕ್ಯಾಜುವಲ್ಟಿ ಆಫೀಸರ್ ಎರಡು ಹುದ್ದೆ ಖಾಲಿಯಿದೆ. ಅಂಬುಲೆನ್ಸ್‌ ಇದ್ದರೂ ಚಾಲಕರಿಲ್ಲ. ಆಸ್ಪತ್ರೆಯಲ್ಲಿ ಎರಡು ಐಸಿಯು ಘಟಕಗಳಿದ್ದು ಒಂದನ್ನು ಕೊರೊನಾ ಸಂದರ್ಭದಲ್ಲಿ ವಿಶೇಷವಾಗಿ ರೂಪಿಸಲಾಗಿತ್ತು. ಆದರೆ  ಸಾಕಷ್ಟು ಸಿಬ್ಬಂದಿ ಇಲ್ಲದಿರುವ ಕಾರಣ ಒಂದು ಘಟಕವನ್ನು ಮುಚ್ಚಲಾಗಿದೆ. ಗ್ರೂಪ್ ‘ಡಿ’ ನೌಕರರ ಕೊರತೆ ಕೂಡ ಎದ್ದು ಕಾಣುತ್ತಿದೆ.

ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಔಷಧಿ ಊಟೋಪಚಾರ ನೀಡುತ್ತಿದ್ದಾರೆ.

–ಶ್ಯಾಮು ಮೇಸ್ತ್ರಿ ಕುಕ್ಕುಂದೂರು ಕಾರ್ಕಳ

ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ಒದಗಿಸಲು ಮೇಲಧಿಕಾರಿಗಳಿಗೆ ತಿಳಿಸಿದರೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸೂಚನೆ ನೀಡುತ್ತಾರೆ.

– ಡಾ. ಶಶಿಕಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಕಾರ್ಕಳ

ವೈದ್ಯಕೀಯ ಸಲಕರಣೆ ಒದಗಿಸಲು ಮನವಿ

ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಸಿಬ್ಬಂದಿ ಕೊರತೆ ಇದ್ದರೂ ಇರುವ ಮಾನವ ಸಂಪನ್ಮೂಲ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ಅತ್ಯುತ್ತಮ ಸೇವೆ ನೀಡುತ್ತಿದ್ದೇವೆ. ಹೊಸ ಜಿಲ್ಲಾಸ್ಪತ್ರೆಯ ಕಟ್ಟಡ ಕಾಮಗಾರಿ 5ರಿಂದ 6 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈಗಿರುವ ಸಿಬ್ಬಂದಿ ಕೊರತೆ‌ ನೀಗಿಸುವುದಲ್ಲದೆ ಹೊಸ ಆಸ್ಪತ್ರೆಯ ಅಗತ್ಯಕ್ಕೆ ತಕ್ಕಂತೆ ತಜ್ಞ ವೈದ್ಯರು ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಉಡುಪಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಚ್‌. ಅಶೋಕ್‌ ತಿಳಿಸಿದರು.

ಆಸ್ಪತ್ರೆ ಸುಸಜ್ಜಿತ: ಸಿಬ್ಬಂದಿ ಕೊರತೆ

ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತವಾಗಿದ್ದರೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.‌ ನೇತ್ರ ತಜ್ಞರು ಹೆರಿಗೆ ತಜ್ಞರು ಮಕ್ಕಳ ವೈದ್ಯರು ಇದ್ದರೂ ಬಾಕಿ ಉಳಿದ ಸಿಬ್ಬಂದಿ ಕೊರತೆ ಇದೆ. 200ಕ್ಕಿಂತಲೂ ಅಧಿಕ ರೋಗಿಗಳು ಪ್ರತಿದಿನ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನೌಷಧಿ ಕೇಂದ್ರವೂ ಆಸ್ಪತ್ರೆ ಬಳಿ ಇರುವುದು ರೋಗಿಗಳಿಗೆ ವರದಾನವಾಗಿದೆ. ಹತ್ತಾರು ಗ್ರಾಮಗಳಿಗೆ ಏಕೈಕ ಸಮುದಾಯ ಕೇಂದ್ರವಾದ ಈ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದ ಕೊರತೆ ಇದೆ.  ಹಲವಾರು ವರ್ಷಗಳ ಬೇಡಿಕೆಯ ಪರಿಣಾಮ ಡಯಾಲಿಸಿಸ್ ಯಂತ್ರ ಪ್ರಧಾನಮಂತ್ರಿ ಆರೋಗ್ಯ ವ್ಯವಸ್ಥೆಯಡಿ ಮಂಜೂರಾಗಿದ್ದರೂ ಅದನ್ನು ಅಳವಡಿಸಲು ‍‍‍‍₹7ಲಕ್ಷದಿಂದ ₹8 ಲಕ್ಷ ಅನುದಾನದ ಅಗತ್ಯವಿದೆ. ಆದ್ದರಿಂದ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಇಕ್ಕಟ್ಟಾದ ಕಟ್ಟಡದಲ್ಲಿ ಆಸ್ಪತ್ರೆ

ಬೈಂದೂರು ತಾಲ್ಲೂಕು ಗ್ರಾಮೀಣ ಭಾಗವಾದ ಮಲೆನಾಡು ಹಾಗೂ ಕರಾವಳಿ ಪ್ರದೇಶವನ್ನು ಒಳಗೊಂಡಿದ್ದು ಸುಮಾರು 52 ಸೆಂಟ್ಸ್ ಜಾಗದಲ್ಲಿ ಇಕ್ಕಟ್ಟಾದ ಕಟ್ಟಡದಲ್ಲಿ ಸುಮಾರು 30 ಹಾಸಿಗೆಯ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ ಪ್ರತಿದಿನ ಸರಾಸರಿ ಇನ್ನೂರಕ್ಕೂ ಅಧಿಕ ಜನರು ಹೊರರೋಗಿ ಹಾಗೂ ದಿನವೊಂದಕ್ಕೆ 10ರಿಂದ 12 ಮಂದಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಸಂಪೂರ್ಣ ಚಿಕಿತ್ಸೆ ಉಚಿತವಾದ್ದರಿಂದ ಹೊರರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇಲ್ಲಿ ವೈದ್ಯರ ಕೊರತೆ ಇದೆ. ಹೆಚ್ಚಿನ ವೈದ್ಯರ ಅವಶ್ಯಕತೆಯಿದ್ದು ಹಿರಿಯ ಆರೋಗ್ಯ ಸಹಾಯಕರು ಸ್ಟಾಫ್ ನರ್ಸ್ ಗ್ರೂಪ್ ‘ಡಿ’ ನೌಕರರು ಸೇರಿದಂತೆ ವಿವಿಧ ಹುದ್ದೆಗಳು ಇನ್ನೂ ಖಾಲಿ ಇವೆ. ಬೈಂದೂರು ವ್ಯಾಪ್ತಿಯ ಹಳ್ಳಿಹೊಳೆ ಆಲೂರು ಕೊಲ್ಲೂರು ಶಿರೂರು ನಾಡ ಕಿರಿಮಂಜೇಶ್ವರ ಮರವಂತೆ ಖಂಬದಕೋಣೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ಬಹುತೇಕ ಕೇಂದ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಿದೆ. ಆಶಾ ಕಾರ್ಯಕರ್ತೆಯರ ಪರಿಶ್ರಮ ಹೊರತುಪಡಿಸಿದರೆ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಕೇವಲ ಜ್ವರ ತಲೆನೋವು ಚಿಕ್ಕಪುಟ್ಟ ಚಿಕಿತ್ಸೆ ಕೊಡಲು ಮೀಸಲಾಗಿದ್ದು ಹೆಚ್ಚಿನ ತಪಾಸಣೆ ಮಾಡಬೇಕಾದರೆ ಖಾಸಗಿ ಕೇಂದ್ರಗಳಿಗೆ ತೆರಳಬೇಕಾಗಿದೆ ಎಂದು ಜನರು ದೂರುತ್ತಾರೆ. ಈಗಾಗಲೇ ಬೈಂದೂರು ತಾಲ್ಲೂಕು ಆಡಳಿತ ಸೌಧದ ಹತ್ತಿರ ಸುಮಾರು 100 ಹಾಸಿಗೆಯ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕಾಗಿ 2.14 ಎಕರೆ ಜಾಗ ಗುರುತಿಸಿ ಆಸ್ಪತ್ರೆಯ ನೀಲನಕ್ಷೆ ತಯಾರಿಸಿ ವರದಿ ಕಳುಹಿಸಲಾಗಿದೆ. ಇದಕ್ಕೆ ಮಂಜೂರಾತಿ ಇನ್ನಷ್ಟೇ ದೊರೆಯಬೇಕಿದೆ.

ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕಿಲ್ಲ ತಾಲ್ಲೂಕಾಸ್ಪತ್ರೆ ಭಾಗ್ಯ

ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಿಶಾಲವಾದ ಕಟ್ಟಡವಿದ್ದು ತಾಲ್ಲೂಕು ಆಸ್ಪತ್ರೆಗೆ ಬೇಕಾದ ಸ್ಥಳಾವಕಾಶ ಇದ್ದರೂ ತಾಲ್ಲೂಕಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಲ್ಲ. 30 ಬೆಡ್‌ಗಳ ಈ ಆಸ್ಪತ್ರೆಯಲ್ಲಿ ಆರೋಗ್ಯಾಧಿಕಾರಿಯೊಬ್ಬರು ಪೂರ್ಣ ಕಾಲಿಕವಾಗಿ ಸೇವೆ ನೀಡಲು ಲಭ್ಯರಿರುತ್ತಾರೆ. ಸುತ್ತಮುತ್ತಲಿನ ಶಿರ್ವ ಕುತ್ಯಾರು ಮಜೂರು ಇನ್ನಂಜೆ ಬೆಳ್ಳೆ ಸೇರಿದಂತೆ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅನುಕೂಲಕರವಾಗಿರುವ ಈ ಆಸ್ಪತ್ರೆಯಲ್ಲಿ ಒಳರೋಗಿಗಳ ಸಂಖ್ಯೆ ಅಷ್ಟಕಷ್ಟೆ. ಹೊರರೋಗಿಗಳು ಸುತ್ತಮುತ್ತಲಿನ ಹಳ್ಳಿಗಳಿಂದ ಬಂದು ಸಣ್ಣಪುಟ್ಟ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಮಕ್ಕಳ ತಜ್ಞರು ಸ್ತ್ರೀ ರೋಗ ತಜ್ಞರಿಲ್ಲ. 8 ಮಂದಿ ಬದಲು 4 ಮಂದಿ ಮಹಿಳಾ ಆರೋಗ್ಯ ಸಹಾಯಕಿಯರಿದ್ದಾರೆ. ಪುರುಷ ಆರೋಗ್ಯ ಸಹಾಯಕರಿಲ್ಲ. ಇಲ್ಲಿನ ಅರಿವಳಿಕೆ ತಜ್ಞರು ಉಡುಪಿ ಮಹಿಳಾ ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಬೆಡ್‌ಗಳ ಸಮಸ್ಯೆ

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಇರುವುದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯ ಇರುವವರನ್ನು ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಅಲ್ಲಿಗೆ ಸಾಕಷ್ಟು ರೋಗಿಗಳು ಬರುವುದರಿಂದ ಬೆಡ್‌ಗಳ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಆಯುಷ್ಮಾನ್‌ ಯೋಜನೆಯ ಸೇವೆಯನ್ನು ಕೆಎಂಸಿಯ ಜೊತೆಗೆ ಇತರ ಆಸ್ಪತ್ರೆಗಳಿಗೂ ವಿಸ್ತರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು ಹೇಳಿದರು.

ಜಾಗದ ಕೊರತೆ

ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲು ಕನಿಷ್ಠ ಒಂದೂವರೆ ಎಕರೆ ಜಾಗದ ಅವಶ್ಯಕತೆ ಇದೆ. ಈಗಿರುವಲ್ಲಿ ಅಷ್ಟು ಜಾಗ ಇಲ್ಲದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಇದಕ್ಕಾಗಿ ಸೂಕ್ತ ಜಾಗವನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮಾತುಕತೆ ನಡೆಸಲಿದ್ದೇನೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ

ಬೈಂದೂರು ಆಸ್ಪತ್ರೆಯಲ್ಲಿ ಪ್ರತಿದಿನ 200ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ಸೇವೆ ನೀಡಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಇನ್ನಷ್ಟು ಸೇವೆ ಇಲ್ಲಿನ ಜನರಿಗೆ ದೊರೆಯಲಿದೆ ಎನ್ನುತ್ತಾರೆ ಬೈಂದೂರು ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಸಿ.

ಕಾಯಂ ಆರೋಗ್ಯಾಧಿಕಾರಿ ನೇಮಿಸಿ

ಕಾಪು ಉಡುಪಿ ಬ್ರಹ್ಮಾವರ ಈ ಮೂರು ತಾಲ್ಲೂಕುಗಳಿಗೂ ಒಬ್ಬರೇ ತಾಲ್ಲೂಕು ಆರೋಗ್ಯಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ತಾಲ್ಲೂಕಿಗೆ ಕಾಯಂ ಆರೋಗ್ಯಾಧಿಕಾರಿಗಳನ್ನು ನೇಮಿಸಿದ್ದಲ್ಲಿ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಸಕಾಲಿಕ ಸೇವೆ ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂತೋಷ್ ಶೆಟ್ಟಿ ಪಂಜಿಮಾರು.

ಪೂರಕ ಮಾಹಿತಿ: ವಾಸುದೇವ್‌ ಭಟ್‌, ಶೇಷಗಿರಿ ಭಟ್‌, ಕೆ.ಸಿ.ರಾಜೇಶ್‌, ಅಬ್ದುಲ್‌ ಹಮೀದ್‌, ಪ್ರಕಾಶ್‌ ಸುವರ್ಣ ಕಟಪಾಡಿ, ಸುಕುಮಾರ್‌ ಮುನಿಯಾಲ್‌, ವಿಶ್ವನಾಥ ಆಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.