ADVERTISEMENT

‘ವಿಚಾರಗಳ ಮೂಲಕವೇ ಸಮಾಜ ಪರಿವರ್ತನೆ’

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಕೋಟ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 7:16 IST
Last Updated 21 ಆಗಸ್ಟ್ 2024, 7:16 IST
ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.   

ಉಡುಪಿ: ‘ರಕ್ತ ಕ್ರಾಂತಿ ಇಲ್ಲದೆ, ತಮ್ಮ ವಿಚಾರಗಳ ಮೂಲಕವೇ ಸಮಾಜ ಪರಿವರ್ತನೆಗೆ ಕಾರಣರಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಲ್ಪೆಯ ಬಿಲ್ಲವ ಸಮಾಜ ಸೇವಾ ಸಂಘದ ಸಹಕಾರದೊಂದಿಗೆ ಮಲ್ಪೆಯ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶತಮಾನದ ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಜನರಿಗೆ ನ್ಯಾಯ ಒದಗಿಸಿಕೊಟ್ಟವರು ನಾರಾಯಣ ಗುರುಗಳು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸವಾಗಬೇಕು ಎಂದರು.

ADVERTISEMENT

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಕೇರಳದಲ್ಲಿ ಕಮ್ಯುನಿಸ್ಟರ ನಡುವೆ ಸನಾತನ ಸಂಸ್ಕೃತಿಯನ್ನು ಪಸರಿಸಿದ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಕರಾವಳಿ ಭಾಗದಲ್ಲೂ ಬಡ ಜನರ ಉದ್ಧಾರಕ್ಕೆ ಅವರು ಭದ್ರ ಬುನಾದಿ ಹಾಕಿ ಕೊಟ್ಟರು. ಅವರ ಪುತ್ಥಳಿಯನ್ನು ವಿಧಾನಸಭೆಯ ಆವರಣದಲ್ಲಿ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಸಂಶೋಧನಾ ವಿದ್ಯಾರ್ಥಿ ಶ್ರೇಯಸ್‌ ಕೋಟ್ಯಾನ್‌ ಅವರು ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದರು.

ನಗರಸಭಾ ಸದಸ್ಯೆ ಎಡ್ಲೀನ್‌ ಕರ್ಕಡ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಕಾಲೇಜಿನ ಪ್ರಾಂಶುಪಾಲ ವರ್ಗೀಸ್‌ ಪಿ., ಉಡುಪಿ ತಹಶೀಲ್ದಾರ್‌ ಗುರುಪ್ರಸಾದ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ, ಸಂಧ್ಯಾ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ಉಪ್ಪೂರು ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಿತು.

ನಾರಾಯಣ ಗುರು ಜಯಂತಿ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

‘ನಾರಾಯಣ ಗುರುಗಳ ಹೋರಾಟ ಸ್ಮರಣೀಯ’

ಪಡುಬಿದ್ರಿ: ಕಾಪು ತಾಲ್ಲೂಕು ಆಡಳಿತ ಸೌಧದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ‘ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ನಾರಾಯಣ ಗುರುಗಳು ನಡೆಸಿದ ಹೋರಾಟ ಸ್ಮರಣೀಯ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಪು ತಹಶೀಲ್ದಾರ್ ಪ್ರತಿಭಾ ಆರ್, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಜೀವನದುದ್ದಕ್ಕೂ ಪಾಲಿಸೋಣ ಎಂದರು.

ಪತ್ರಕರ್ತ ರಾಕೇಶ್ ಕುಂಜೂರು, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನಾದರ್ಶ ಮತ್ತು ಸಂದೇಶದ ಕುರಿತಾಗಿ ಉಪನ್ಯಾಸ ನೀಡಿದರು.

ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಉಪ ತಹಶೀಲ್ದಾರ್ ದೇವಕಿ ಸ್ವಾಗತಿಸಿದರು. ಪುರಸಭಾ ಸದಸ್ಯ ಅನಿಲ್ ಕುಮಾರ್ ವಂದಿಸಿದರು. ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ ಆರ್.ಟಿ ನಿರೂಪಿಸಿದರು.

ಗಣ್ಯರ ಜನ್ಮದಿನೋತ್ಸವ

ಹೆಬ್ರಿ: ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು, ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನೋತ್ಸವ ಮಂಗಳವಾರ ಆಚರಿಸಲಾಯಿತು.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್‌ ಕೆ ಅಡ್ಯಂತಾಯ, ವಕ್ತಾರ ನಿತೀಶ ಎಸ್‌.ಪಿ., ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಬಿ. ಸುರೇಶ್‌, ಕನ್ಯಾನ ಸಂತೋಷ ನಾಯಕ್‌, ಪ್ರಮುಖರಾದ ಹರೀಶ ಶೆಟ್ಟಿ ನಾಡ್ಪಾಲು, ಸಂದೀಪ್‌ ನಾಯ್ಕ್ ಚಾರ, ನಿಲೇಶ್‌ ಪೂಜಾರಿ,‌ ಪರೀಕ್ಷಿತ್‌ ಪೂಜಾರಿ ಹೆಬ್ರಿ, ರಾಘವ ನಾಯ್ಕ್‌ ಇದ್ದರು.

ತಾಲ್ಲೂಕು ಆಡಳಿತ: ಹೆಬ್ರಿ ತಹಶೀಲ್ದಾರ್‌ ಎಸ್.ಎ.ಪ್ರಸಾದ್‌ ಅವರು ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಹೆಬ್ರಿ ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಟಿ.ಎಂ., ಕ್ರೈಂ ಸಬ್‌ ಇನ್‌ಸ್ಪೆಕ್ಟರ್‌ ಮಹಾಂತೇಶ್‌ ಜಾಬಗೌಡ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಎಸ್‌ ಬಂಗೇರ, ಬಿಲ್ಲವ ಸಮಾಜದ ಗಣ್ಯರಾದ ಮುದ್ರಾಡಿ ಮಂಜುನಾಥ ಪೂಜಾರಿ, ಶೀನಾ ಪೂಜಾರಿ ಹೆಬ್ರಿ, ವರಂಗ ವಿಠ್ಠಲ ಪೂಜಾರಿ, ಶಿವಪುರ ರಮೇಶ ಪೂಜಾರಿ, ಪ್ರಭಾಕರ ಪೂಜಾರಿ, ಶಿವರಾಮ ಪೂಜಾರಿ ನಾಡ್ಪಾಲು, ಜಯಕರ ಪೂಜಾರಿ ಹೆಬ್ರಿ, ಅಣ್ಣಪ್ಪ ಪೂಜಾರಿ ಇದ್ದರು.

‘ಸಮಾನತೆ ಸಂದೇಶ ಸಾರಿದ್ದ ನಾರಾಯಣ ಗುರು ಸ್ಮರಣೀಯರು’

ಕುಂದಾಪುರ: ‘ಸಮಾನತೆ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಮುಖಿ ಕೆಲಸ ಮಾಡುವವರಿಗೆ ಆದರ್ಶ’ ಎಂದು ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶೋಷಿತ ವರ್ಗದವರಿಗೆ ಶಕ್ತಿ ತುಂಬಿದ ಮಹಾನ್‌ ಮಾನವತಾವಾದಿ ನಾರಾಯಣ ಗುರುಗಳು’ ಎಂದರು

ಕುಂದಾಪುರ ಬಿಲ್ಲವ ಮಹಾಜನ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ಕೆ.ಮಹೇಶ್‌ ಚಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್‌ ಕೆ.ಜಿ, ಬಿಲ್ಲವ ಸಮಾಜ ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ ಮಾಣಿ ಗೋಪಾಲ ಕುಂದಾಪುರ, ನಾರಾಯಣ ಗುರು ಯುವಕ ಮಂಡಲ ಅಧ್ಯಕ್ಷ ಸಂದೇಶ್ ಕುಂದಾಪುರ ಇದ್ದರು.

ತಹಶೀಲ್ದಾರ್ ಎಚ್‌.ಎಸ್‌. ಶೋಭಾಲಕ್ಷ್ಮಿ ಸ್ವಾಗತಿಸಿದರು. ಉಪ ತಹಶೀಲ್ದಾರ್ ವಿನಯ್ ನಿರೂಪಿಸಿದರು. ಗಣೇಶ ಅರಸಮ್ಮನಕಾನು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.