ಉಡುಪಿ: ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ.
ಸೋಮವಾರ ರಾತ್ರಿ ಐದು ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ಬಂದಿದ್ದ ವೇಳೆ ಎಎನ್ಎಫ್ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ವಿಕ್ರಂ ಹತನಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಕ್ಸಲರು ಆಹಾರ ಸಾಮಗ್ರಿ ಖರೀದಿಗೆ ಬಂದಿದ್ದಾಗ ಎನ್‌ಕೌಂಟರ್ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಕ್ರಂ ಗೌಡ ಮೂಲತಃ ಹೆಬ್ರಿಯವನಾಗಿದ್ದು, ಶೃಂಗೇರಿ, ಕಾರ್ಕಳ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದೂ ಹೇಳಲಾಗಿದೆ.
ಕೇರಳದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಚುರುಕುಗೊಂಡ ಬಳಿಕ ನಕ್ಸಲರು ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದತ್ತ ಮುಖಮಾಡಿದ್ದರು ಎನ್ನಲಾಗಿದೆ. ಉಳಿದ ನಕ್ಸಲರಿಗಾಗಿ ಶೋಧಕಾರ್ಯ ತೀವ್ರಗೊಂಡಿದೆ.
ಎನ್‌ಕೌಂಟರ್ ನಡೆದ ಸ್ಥಳ ದಟ್ಟ ಅರಣ್ಯ ಪ್ರದೇಶವಾಗಿದ್ದು, ಕಬ್ಬಿನಾಲೆ ಬಸ್ ನಿಲ್ದಾಣದಿಂದ ಏಳು ಕಿ.ಮೀ. ದೂರದಲ್ಲಿದೆ.
ಕಾರ್ಕಳದ ಈದು ಪ್ರದೇಶದಲ್ಲಿ ಈಚೆಗೆ ನಕ್ಸಲರು ಕಾಣಿಸಿಕೊಂಡಿರುವ ಬಗ್ಗೆ ವರದಿಯಾದ ಬಳಿಕ ನಕ್ಸಲ್ ನಿಗ್ರಹ ಪಡೆಯವರು ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.