ADVERTISEMENT

ಅಮ್ಮನನ್ನೂ ನೋಡಲು ಬರಲಿಲ್ಲ: ನಕ್ಸಲ್‌ ವಿಕ್ರಂ ಗೌಡನ ತಮ್ಮನ ನೋವು

ಸುಕುಮಾರ್ ಮುನಿಯಾಲ್
Published 21 ನವೆಂಬರ್ 2024, 18:55 IST
Last Updated 21 ನವೆಂಬರ್ 2024, 18:55 IST
ವಿಕ್ರಂ ಗೌಡ 
ವಿಕ್ರಂ ಗೌಡ    

ಹೆಬ್ರಿ (ಉಡುಪಿ): ‘ಅಮ್ಮ ಯಾವಾಗಲೂ ಅಣ್ಣನ ನೆನಪಲ್ಲೇ ಕೊರಗುತ್ತಿದ್ದರು. ಅಮ್ಮ ತೀರಿಹೋಗಿ ಒಂಬತ್ತು ವರ್ಷಗಳು ಕಳೆದಿವೆ. ಅಮ್ಮನ ಕೊನೆಯ ದಿನಗಳ ವೇಳೆ ಇರಲಿ, ಅಂತಿಮ ದರ್ಶನಕ್ಕೂ ಅಣ್ಣ ಬರಲಿಲ್ಲ...’ ಎಂದು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ನಕ್ಸಲ್‌ ನಾಯಕ ವಿಕ್ರಂ ಗೌಡನ ತಮ್ಮ ಸುರೇಶ್‌ ಗೌಡ ಕಣ್ಣೀರಾದರು.

‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ ಸುರೇಶ್‌ ಗೌಡ, ತಮ್ಮ ಅಣ್ಣ ಹಾಗೂ ಮನೆತನದ ಸ್ಥಿತಿಗತಿ ಬಗ್ಗೆ ಹೇಳಿದ್ದು ಹೀಗೆ.

ನಾನು ಕೂಡ ಹಲವು ವರ್ಷಗಳ ಹಿಂದೆ ಮನೆ ಬಿಟ್ಟು ಮುದ್ರಾಡಿಯಲ್ಲಿ ವಾಸವಾಗಿದ್ದೇನೆ. ಅಣ್ಣ ಮನೆ ಬಿಟ್ಟು ಹೋಗುವಾಗ ಮನೆಯಲ್ಲಿ ನಾನು ಇರಲಿಲ್ಲ. ಮನೆ ಬಿಟ್ಟ ನಂತರ ಅವನ ಜೊತೆ ಯಾವುದೇ ಸಂಪರ್ಕ ಇರಲಿಲ್ಲ. ಅಲ್ಲಿ ಇಲ್ಲಿ ಬಂದು ಹೋಗುತ್ತಿದ್ದ ಎಂಬ ಮಾಹಿತಿಗಳು ಮಾತ್ರ ನಮಗೆ ಗೊತ್ತಾಗುತ್ತಿದ್ದವು.

ADVERTISEMENT

ಬಾಲ್ಯದಲ್ಲಿ ಬಹಳಷ್ಟು ಕಷ್ಟಗಳು ನಮ್ಮನ್ನು ಕಾಡುತ್ತಿದ್ದರಿಂದ, ಬೇಗನೆ ಶಾಲೆಯನ್ನು ಬಿಟ್ಟೆವು. ಅಣ್ಣ ಒಂದು ಕಡೆಯಲ್ಲಿ, ನಾನು ಇನ್ನೊಂದು ಕಡೆಯಲ್ಲಿದ್ದೆ.

ಕುಟುಂಬ ಮುನ್ನಡೆಸುವ ಹೊಣೆ ನಮ್ಮ ಮೇಲಿತ್ತು. ಕೆಲಸ ಅರಸಿ ಮುಂಬೈಗೆ ಹೋದೆ. ಅಣ್ಣ, ಅಮ್ಮ ಮತ್ತು ಅಕ್ಕ ಮನೆಯಲ್ಲಿ ಇದ್ದರು. ಮೃದು ಸ್ವಭಾವದ ಅಣ್ಣ ವಿಕ್ರಂ ಒಳ್ಳೆಯವನು. ನಮ್ಮನ್ನೆಲ್ಲ ಅಂದು ಚೆನ್ನಾಗಿ ನೋಡಿಕೊಂಡಿದ್ದ. ಕುಟುಂಬಕ್ಕೆ ಜಾಗ ಇತ್ತು. ಅಣ್ಣನೂ ಸ್ವಂತ ಜಾಗ ಮಾಡಿದ್ದನು. ಅವನು ಎಲ್ಲಿಗೆ, ಯಾಕೆ, ಹೇಗೆ ಹೋದ ಎಂಬ ಮಾಹಿತಿಯೇ ನಮಗೆ ಅಂದು ಗೊತ್ತಾಗಿಲ್ಲ.

ಅಣ್ಣ ನಕ್ಸಲ್‌ ಆಗಿದ್ದಾನೆ ಎಂದು ನಮ್ಮ ಕುಟುಂಬಕ್ಕೆ ಪೊಲೀಸರಿಂದಲೇ ತಿಳಿಯಿತು. ಯಾಕೆ ನಕ್ಸಲ್‌ ಆದ ಗೊತ್ತಿಲ್ಲ. ನಕ್ಸಲರಿಗೆ ಶರಣಾಗಲು ಅವಕಾಶವಿದೆ ಎಂದು ಗೊತ್ತಿದೆ. ಅಣ್ಣ ಶರಣಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.

ನಮ್ಮನ್ನೆಲ್ಲ ನೋಡಬೇಕಾಗಿದ್ದ ಅಣ್ಣ ಈಗ ನಮ್ಮೊಂದಿಗೆ ಇಲ್ಲ. ಸ್ವಂತ ಮನೆ ಕಟ್ಟಬೇಕು ಎಂಬ ಅಣ್ಣನ ಆಸೆ ಈಡೇರಬೇಕು, ನಮ್ಮ ಕುಟುಂಬದ ಕನಸಿನ ಮನೆ ಪೂರ್ಣ ಮಾಡುವ ಹೊಣೆ ಅಕ್ಕ ಸುಗುಣಾ ಹೊತ್ತಿದ್ದಾಳೆ. ಅಕ್ಕನ ಕುಟುಂಬವೂ ತೀವ್ರ ಸಂಕಷ್ಟದಲ್ಲಿದೆ.

ಕೂಲಿ ಕೆಲಸ, ಹೋಟೆಲ್‌ ಕೆಲಸ ಮಾಡಿ ಸ್ವಂತ ಮನೆ ನಿರ್ಮಿಸಿಕೊಳ್ಳಬೇಕು.  ತಂಗಿಗೆ ಮದುವೆ ಮಾಡಿ ಒಳ್ಳೆಯ ಜೀವನ ಮಾಡುವ ಆಸೆಯನ್ನು ಅಣ್ಣ ಹೊಂದಿದ್ದ. ಈಗ ಹೀಗಾಗಿದೆ. ಇನ್ನು ನಾವೆಲ್ಲರೂ ಹೊಸ ಜೀವನ ನಡೆಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.