ಉಡುಪಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ನಿಯಮಗಳನ್ನು ರೂಪಿಸಿದ್ದು ಸಾರ್ವಜನಿಕರು, ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘಟಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭ ಕೋವಿಡ್ 19 ನಿಯಂತ್ರಣಕ್ಕೆ ಅನುಸರಿಸಬೇಕಾದ ಸೂಚನೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಜ.1ರ ಮಧ್ಯರಾತ್ರಿ 1ಗಂಟೆಯ ಒಳಗೆ ಸಂಭ್ರಮಾಚರಣೆ ಮುಕ್ತಾಯವಾಗಬೇಕು.
ಒಳಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳು, ಪಬ್, ರೆಸ್ಟೊರೆಂಟ್, ಕ್ಲಬ್, ರೆಸಾರ್ಟ್‌ಗಳಲ್ಲಿ ಸಾಮರ್ಥ್ಯಕ್ಕೆ ಮೀರುವಷ್ಟು ಜನರನ್ನು ಸೇರಿಸುವಂತಿಲ್ಲ. ವಿದ್ಯುತ್ ಅವಘಡಗಳು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.
ಹೋಟೆಲ್, ರೆಸ್ಟೊರೆಂಟ್, ಹೋಂಸ್ಟೇ, ಪಿ.ಜಿಗಳಲ್ಲಿ ಸಾರ್ವಜನಿಕರಿಗೆ ಹೊಸ ವರ್ಷದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ಸ್ಥಳೀಯ ಠಾಣೆಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಕಾರ್ಯಕ್ರಮಗಳ ಆಯೋಜಕರು ಭದ್ರತೆ ಹಾಗೂ ಸುವ್ಯವಸ್ಥೆಗೆ ಸ್ವಯಂಸೇವಕರನ್ನು ನಿಯೋಜಿಸಬೇಕು. ಮಹಿಳಾ ಭದ್ರತಾ ಸಿಬ್ಬಂದಿಯೂ ಇರಬೇಕು.
ವಾಹನಗಳ ಪಾರ್ಕಿಂಗ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಬಾರದು. ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು.
ಬಸ್ ನಿಲ್ದಾಣ, ಬೀಚ್, ಫುಟ್‌ಪಾತ್, ಉದ್ಯಾನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡಿ ಆಚರಣೆಯಲ್ಲಿ ಭಾಗಿಯಾಗುವಂತಿಲ್ಲ.
ಹೊಸ ವರ್ಷದ ನೆಪದಲ್ಲಿ ಸಾರ್ಜನಿಕರೊಂದಿಗೆ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ನ್ಯಾಯಾಲಯದ ಆದೇಶದಂತೆ ಶಬ್ದಮಾಲಿನ್ಯವಾಗದಂತೆ ಲೌಡ್ ಸ್ಪೀಕರ್‌ಗಳನ್ನು ಬಳಸಬೇಕು.
ಸಂಭ್ರಮದ ಹೆಸರಿನಲ್ಲಿ ಅಕ್ಕಪಕ್ಕದ ಮನೆಯಲ್ಲಿರುವ ಹಾಗೂ ಅಪಾರ್ಟ್‌ಗಳಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ತೊಂದರೆ ನೀಡಬಾರದು. ರಾತ್ರಿಯ ಹೊತ್ತು ಕುಡಿದು ವಾಹನ ಚಾಲನೆ ಮಾಡಬಾರದು ಎಂದು ಎಸ್‌ಪಿ ಸೂಚನೆ ನೀಡಿದ್ದಾರೆ.
ಜಿಲ್ಲೆಗೆ ಪ್ರವಾಸಿಗರ ಲಗ್ಗೆ
ಹೊಸ ವರ್ಷಾಚರಣೆಗೆ ಉಡುಪಿ ಜಿಲ್ಲೆಗೆ ಭಾರಿ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಉಡುಪಿಯ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಆನೆಗುಡ್ಡೆ, ಕುಂಭಾಶಿ, ಹಟ್ಟಿಯಂಗಡಿ ಸಿದ್ದಿ ವಿನಾಯಕ ದೇವಸ್ಥಾನ, ಮಲ್ಪೆ ಬೀಚ್, ಸೇಂಟ್ ಮೇರಿಸ್ ಐಲ್ಯಾಂಡ್, ಕಾಪು, ಪಡುಬಿದ್ರಿ, ಮರವಂತೆ ಕಡಲ ತೀರಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಶಾಲಾ ಪ್ರವಾಸಕ್ಕಾಗಿ ಉಡುಪಿಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಸಂಚಾರ ದಟ್ಟಣೆ ಎದುರಾಗಿದೆ. ಮಲ್ಪೆ–ಉಡುಪಿ ರಸ್ತೆಯಲ್ಲಿ ಅತಿಯಾದ ವಾಹನಗಳ ದಟ್ಟಣೆ ಎದುರಾಗಿದ್ದು ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿ ಕಿರಿಕಿರಿ ಎದುರಿಸುವಂತಾಗಿದೆ. ನಗರದಲ್ಲಿ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸ್ಥಳ ಇಲ್ಲವಾಗಿದ್ದು ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ.
‘ದರ ದುಪ್ಪಟ್ಟು’
ರಜೆಯ ಮಜಾ ಅನುಭವಿಸಲು ಜಿಲ್ಲೆಗೆ ಪ್ರವಾಸಿಗರು ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಬಹುತೇಕ ವಸತಿ ಗೃಹಗಳು, ಹೋಂಸ್ಟೇ, ರೆಸಾರ್ಟ್‌ಗಳು ಗ್ರಾಹಕರಿಂದ ತುಂಬಿವೆ. ಮುಂಗಡ ಬುಕ್ಕಿಂಗ್ ಮಾಡದವರು ವಾಸ್ತವ್ಯಕ್ಕೆ ಸ್ಥಳಾವಕಾಶ ಸಿಗದೆ ಪರದಾಡುವಂತಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರೆಸಾರ್ಟ್, ಹೋಂಸ್ಟೇ, ಲಾಡ್ಜ್‌ಗಳಲ್ಲಿ ಕೊಠಡಿಗಳ ದರ ದುಪ್ಪಟ್ಟು ಏರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.