ADVERTISEMENT

ಜುಲೈ 14ರಂದು ನಿರ್ಮಲಾ ಸೀತಾರಾಮನ್‌ ಉಡುಪಿಗೆ

ಪ್ರಬುದ್ಧರ ಗೋಷ್ಠಿಯಲ್ಲಿ ಭಾಗವಹಿಸುವ ಕೇಂದ್ರ ಸಚಿವೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 13:15 IST
Last Updated 12 ಜುಲೈ 2023, 13:15 IST
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಉಡುಪಿ ನಗರ ಮಂಡಲದ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ‘ಮಹಾ ಸಂಪರ್ಕ ಅಭಿಯಾನ’ದ ಕರಪತ್ರ ಬಿಡುಗಡೆಗೊಳಿಸಿದರು
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಉಡುಪಿ ನಗರ ಮಂಡಲದ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ‘ಮಹಾ ಸಂಪರ್ಕ ಅಭಿಯಾನ’ದ ಕರಪತ್ರ ಬಿಡುಗಡೆಗೊಳಿಸಿದರು   

ಉಡುಪಿ: ಜುಲೈ 14ರಂದು ಬೆಳಿಗ್ಗೆ 11 ಗಂಟೆಗೆ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆ ಬಿಂಬಿಸುವ ಹಾಗೂ ಪ್ರಬುದ್ಧರ ಗೋಷ್ಠಿ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಉಡುಪಿ ನಗರ ಮಂಡಲದ ಸಭೆಯಲ್ಲಿ ಭಾಗವಹಿಸಿ ‘ಮಹಾ ಸಂಪರ್ಕ ಅಭಿಯಾನ’ದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಮಹಾ ಸಂಪರ್ಕ ಅಭಿಯಾನದಡಿ ಮಂಡಲ ವ್ಯಾಪ್ತಿಯಲ್ಲಿ ಹಿರಿಯ ಬಿಜೆಪಿಗರ ಸಮಾವೇಶ, ವ್ಯಾಪಾರಿಗಳ ಸಮಾವೇಶ, ಮಂಡಲ ಕಾರ್ಯಕಾರಿಣಿ ಸಭೆ ಆಯೋಜಿಸುವ ಜತೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚುರಪಡಿಸಲು ಮನೆ ಮನೆ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಂಡಲ ವ್ಯಾಪ್ತಿಯಲ್ಲಿ 100 ವೃತ್ತಿಪರರು ಮತ್ತು ಸಾಮಾಜಿಕ ಪ್ರಮುಖರ ತಂಡ ರಚನೆ, ಬೂತ್‌ವಾರು 100 ಸಕ್ರಿಯ ಕಾರ್ಯಕರ್ತರ ತಂಡ ರಚನೆ, ಮಂಡಲ ಪದಾಧಿಕಾರಿಗಳ ಸೌಹಾರ್ದ ಕೂಟ ಆಯೋಜನೆ ಹಾಗೂ ಸೋಷಿಯಲ್ ಮೀಡಿಯಾ ತಂಡ ಸಕ್ರಿಯಗೊಳಿಸುವುದು ಪ್ರಮುಖವಾಗಿರಲಿದ್ದು ಜುಲೈನಲ್ಲಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು ಎಂದರು.

ADVERTISEMENT

ಬಿಜೆಪಿ ಕಾರ್ಯಕರ್ತರ ಆಧಾರಿತ ರಾಜಕೀಯ ಪಕ್ಷವಾಗಿದ್ದು ಪಕ್ಷ ನೀಡುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸುವ ಕಾರ್ಯಕ್ಷಮತೆ, ಸಾಮರ್ಥ್ಯ ಕಾರ್ಯಕರ್ತರಲ್ಲಿದೆ. ಬೂತ್ ಮಟ್ಟದಲ್ಲಿ ಸದೃಢವಾಗಿ ಪಕ್ಷ ಸಂಘಟನೆ ಮೂಲಕ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಉಡುಪಿಯಲ್ಲಿ ಬಿಜೆಪಿ ಗೆಲುವಿಗೆ ಸಂಘಟಿತ ಶ್ರಮ ಹಾಕಬೇಕು ಎಂದು ಕರೆ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಅಧಿಕಾರದ ಆಸೆಗೆ ಚುನಾವಣೆ ಸಂದರ್ಭ ಘೋಷಿಸಿದ್ದ ಉಚಿತಗಳ ಗ್ಯಾರಂಟಿಗಳಲ್ಲಿ ಯಾವುದನ್ನೂ ಯಥಾವತ್ತಾಗಿ ಜಾರಿಗೊಳಿಸದೆ ದಿನಕ್ಕೊಂದು ಷರತ್ತು ವಿಧಿಸುತ್ತಿದೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಬಿಜೆಪಿ ಸರ್ಕಾರದ ಜನಪರ ಯೋಜನೆ ಕೈಬಿಟ್ಟು ಕರಾವಳಿಯ ಜಿಲ್ಲೆಗಳಿಗೆ ತಾರತಮ್ಯ ಎಸಗಲಾಗಿದೆ. ರಾಜ್ಯದಲ್ಲಿ ಒಂದು ವರ್ಗದ ತುಷ್ಟೀಕರಣ ಹಾಗೂ ಹಿಂದೂ ವಿರೋಧಿ ನೀತಿ ಮಿತಿ ಮೀರುತ್ತಿದೆ ಎಂದು ಆರೋಪಿಸಿದರು.

ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ‘ಮಹಾ ಸಂಪರ್ಕ ಅಭಿಯಾನದಡಿ ಮನೆ ಮನೆ ಸಂಪರ್ಕ ಸಹಿತ ಪಕ್ಷ ನೀಡಿರುವ ಚಟುವಟಿಕೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವುದರ ಜತೆಗೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆಯಲು ಶ್ರಮಿಸೋಣ’ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಶ್ರೀಶ ನಾಯಕ್ ಪೆರ್ಣಂಕಿಲ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಂ. ಅಂಚನ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಉಡುಪಿ ನಗರ ಉಪಾಧ್ಯಕ್ಷ ವಿಜಯ ಕೊಡವೂರು, ಕೃಷ್ಣಪ್ಪ ಜತ್ತನ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ದಿನೇಶ್ ಅಮೀನ್, ಮುಖಂಡರಾದ ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ, ರಾಜೇಂದ್ರ ಪಂದುಬೆಟ್ಟು, ಆನಂದ್ ಸುವರ್ಣ, ಲಕ್ಷ್ಮಿ ಕಿನ್ನಿಮುಲ್ಕಿ, ಶ್ರೀಲತ, ಸಂತೋಷ್ ಆಚಾರ್ಯ, ರೋಷನ್ ಶೆಟ್ಟಿ ಇದ್ದರು.

ಬಿಜೆಪಿ ಮಹಾ ಸಂಪರ್ಕ ಅಭಿಯಾನ ಬೂತ್‌ವಾರು ಸಕ್ರಿಯ ಕಾರ್ಯಕರ್ತರ ತಂಡ ರಚನೆ ಮುಂಬರುವ ಚುನಾವಣೆಗಳಲ್ಲಿ ಗೆಲ್ಲುವ ತಂತ್ರಗಾರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.