ಉಡುಪಿ: 2021ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಮೇ 26ಕ್ಕೆ ಖಗ್ರಾಸ ಚಂದ್ರಗ್ರಹಣ, ನ 19ಕ್ಕೆ ಪಾರ್ಶ್ವ ಚಂದ್ರಗ್ರಹಣ, ಜೂನ್ 10ಕ್ಕೆ ಕಂಕಣ ಸೂರ್ಯ ಗ್ರಹಣ, ಡಿ 4ಕ್ಕೆ ಖಗ್ರಾಸ ಸೂರ್ಯ ಗ್ರಹಣಗಳು ಸಂಭವಿಸುತ್ತವೆ. ಆದರೆ, ಭಾರತದಲ್ಲಿರುವವರಿಗೆ ಈ ಗ್ರಹಣಗಳು ಗೋಚರಿಸುವುದಿಲ್ಲ ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
2021ರ ಮತ್ತೊಂದು ವಿಶೇಷ ಎಂದರೆ ನಾಲ್ಕು ಸೂಪರ್ ಮೂನ್‌ಗಳು ಕಾಣಲಿದ್ದು, ಮಾರ್ಚ್ 28, ಏ.27, ಮೇ 26, ಜೂನ್ 24 ರಂದು ಗೋಚರಿಸಲಿವೆ. ಸೂಪರ್ ಮೂನ್‌ಗಳು ಹುಣ್ಣಿಮೆಯಲ್ಲಿ ಕಾಣಿಸಲಿದ್ದು, ಅಂದು ಚಂದ್ರ ಸುಮಾರು 25 ಅಂಶ ದೊಡ್ಡದಾಗಿ ಕಾಣಲಿದ್ದಾನೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಸಂಭವಿಸುವ 15 ಉಲ್ಕಾಪಾತಗಳಲ್ಲಿ ಈ ವರ್ಷ ಕೆಲವು ಪ್ರಮುಖವಾಗಿದ್ದು, ಜ.4 ರ ಕ್ವಾಡ್ರಂಟಿಡ್ ಉಲ್ಕಾಪಾತ, ಆ.12ರ ಪರ್ಸಿಡ್ ಉಲ್ಕಾಪಾತ ಹಾಗೂ ಡಿ.14ರ ಜಿಮಿನಿಡ್ ಉಲ್ಕಾಪಾತಗಳನ್ನು ಕಣ್ತುಂಬಿಕೊಳ್ಳಬಹುದು.
ಗುರು ಹಾಗೂ ಶನಿ ಗ್ರಹಗಳು ವರ್ಷಕ್ಕೊಮ್ಮೆ ಚೆಂದವಾಗಿ ದೊಡ್ಡದಾಗಿ ಕಾಣಲಿವೆ. ಆ.2 ರಂದು ಶನಿಗ್ರಹ ಹಾಗೂ ಆ.20ರಂದು ಗುರುಗ್ರಹ ರಾತ್ರಿಯಿಡೀ ಗೋಚರಿಲಿವೆ. ಕಾಣಲಿವೆ. ಏ.27ರಂದು ಮಂಗಳನನ್ನು ಚಂದ್ರ ಅಡ್ಡವಾಗಿ ಮರೆಮಾಚುವ ಕೌತುಕ ನಡೆಯಲಿದೆ.
ಫೆಬ್ರವರಿ ಮೊದಲ ವಾರದವರೆಗೆ ಬೆಳಗಿನ ಜಾವ ಕಾಣುವ ಶುಕ್ರ ಗ್ರಹ, ಏ.21ರಿಂದ ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ಗೋಚರಿಸಲಿದೆ. 584 ದಿನಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ದೊಡ್ಡದಾಗಿ ಕಾಣುವ ಶುಕ್ರ ಗ್ರಹ, ಅ.29ರಂದು 47 ಡಿಗ್ರಿ ಎತ್ತರದಲ್ಲಿ ಪಶ್ಚಿಮ ಆಕಾಶದಲ್ಲಿ ಕಾಣಲಿದೆ.
ಬುಧ ನೋಡಲು ಬಲು ಕಷ್ಟ:
ವರ್ಷದಲ್ಲಿ ಹೆಚ್ಚೆಂದರೆ ಆರು ಬಾರಿ ಕಾಣುವ ಬುಧ ಗ್ರಹ ಜ.24, ಮೇ 17, ಸೆ.14 ಸಂಜೆಯ ಸೂರ್ಯಾಸ್ತದ ಕೆಲ ನಿಮಿಷಗಳಲ್ಲಿ ಪಶ್ಚಿಮ ಆಕಾಶದಲ್ಲಿ ಕಂಡರೆ, ಮಾರ್ಚ್ 6, ಜುಲೈ 4 ಹಾಗೂ ಅ.25ರಲ್ಲಿ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಲು ಸಿಗುತ್ತದೆ.
ಸೂರ್ಯನ ಸುತ್ತ ಧೀರ್ಘ ವೃತ್ತಾಕಾರದಲ್ಲಿ ಸುತ್ತುವ ಭೂಮಿಯು ಜ.2ರಂದು ಸಮೀಪದಲ್ಲಿದ್ದರೆ, ಜುಲೈ 6ರಂದು ದೂರದಲ್ಲಿ ಇರುತ್ತದೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.