ADVERTISEMENT

ಉಡುಪಿ | ಕಾಲೇಜಿನ ಶೌಚಾಲಯದಲ್ಲಿ ವಿಡಿಯೊ: ಸಾಕ್ಷ್ಯಗಳು ಲಭ್ಯವಿಲ್ಲ –ಎಸ್‌ಪಿ

ಮುಸ್ಲಿಂ ವಿದ್ಯಾರ್ಥಿನಿಯರಿಂದ ತಪ್ಪೊಪ್ಪಿಗೆ, ಮೂವರ ಅಮಾನತು: ಆಡಳಿತ ಮಂಡಳಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 9:56 IST
Last Updated 25 ಜುಲೈ 2023, 9:56 IST
   

ಉಡುಪಿ: ‘ನಗರದ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ನಡೆಸಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಹಂಚಿ ಕೊಂಡಿರುವ ಬಗ್ಗೆ ಯಾವುದೇ ಸಾಕ್ಷ್ಯ ಲಭ್ಯವಾ ಗಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಹೇಳಿದರು.

‘ಘಟನೆ ನಡೆದ ಬಳಿಕ ಕಾಲೇಜಿಗೆ ತೆರಳಿ ವಿಡಿಯೊ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ಪರಿಶೀಲಿಸಲಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ಹಾಗೂ ಫೋಟೊ ಲಭ್ಯವಾಗಿಲ್ಲ. ಸಂತ್ರಸ್ತೆ ಯಾಗಲೀ, ಕಾಲೇಜು ಆಡಳಿತ ಮಂಡಳಿಯಾಗಲಿ ದೂರು ನೀಡಿಲ್ಲ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಳ್ಳಲು ವಿಡಿಯೊ ಸಾಕ್ಷ್ಯಗಳು ಲಭ್ಯವಿಲ್ಲ, ಸಾಕ್ಷ್ಯಗಳಿದ್ದವರು ಪೊಲೀಸ್ ಇಲಾಖೆಗೆ ನೀಡಿದರೆ ತನಿಖೆ ನಡೆಸುತ್ತೇವೆ’ ಎಂದು ಎಸ್‌ಪಿ ಹೇಳಿದರು.

‘ಸಹಪಾಠಿಗಳು ತಮಾಷೆಗೆ ವಿಡಿಯೊ ಮಾಡಿ ನಂತರ ಡಿಲೀಟ್ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದರಿಂದ ಕಾಲೇಜು ಆಡಳಿತ ಮಂಡಳಿಯ ಹಂತದಲ್ಲಿಯೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಉಡುಪಿಯ ಕಾಲೇ ಜಿನ ಮಹಿಳಾ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡಲಾಗಿದೆ ಎಂದು ನಕಲಿ ವಿಡಿಯೊ ಹರಿಬಿಡಲಾಗಿದೆ. ಹಳೆಯ ವಿಡಿಯೊ ವನ್ನು ಎಡಿಟ್ ಮಾಡಿ, ಧ್ವನಿ ಸೇರಿಸಿ ಉಡುಪಿ ಕಾಲೇಜಿನಲ್ಲಿ ನಡೆದಿರುವ ಘಟನೆ ಎಂದು ಬಿಂಬಿಸಲಾಗುತ್ತಿದ್ದು ಸತ್ಯಾಸತ್ಯತೆ ಅರಿಯದೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಬಾರದು’ ಎಂದು ಎಸ್‌ಪಿ ಎಚ್ಚರಿಕೆ ನೀಡಿದರು.

ADVERTISEMENT

ಯಾರಿಗೂ ಬೆದರಿಕೆ ಹಾಕಿಲ್ಲ: ಘಟನೆ ಸಂಬಂಧ ರಶ್ಮಿ ಸಾಮಂತ್ ಎಂಬವರು ಟ್ವೀಟ್ ಮಾಡಿದ್ದರಿಂದ ಅವರ ಖಾತೆ ಪರಿಶೀಲಿಸಲಾಗಿದೆ. ಕುಟುಂಬದ ಸದ ಸ್ಯರ ಬಳಿ ಮಾಹಿತಿ ಪಡೆಯಲಾಗಿದೆ. ದುರುದ್ದೇಶಪೂರಿತವಾಗಿ ಯಾರ ಬಳಿಯೂ ಮಾಹಿತಿ ಪಡೆದಿಲ್ಲ, ಬೆದರಿಕೆ ಯನ್ನೂ ಹಾಕಿಲ್ಲ ಎಂದು ಎಸ್‌ಪಿ ಸ್ಪಷ್ಟನೆ ನೀಡಿದರು.

ಆಡಳಿತ ಮಂಡಳಿ ಹೇಳಿದ್ದೇನು: ‘ಕಾಲೇ ಜಿನ ಶೌಚಾಲಯದೊಳಗೆ ಮೊಬೈಲ್‌ ಇಟ್ಟು ಚಿತ್ರೀಕರಣ ನಡೆಸಿರುವ ವಿಚಾರ ತಿಳಿಯುತ್ತಿದ್ದಂತೆ ವಿಚಾರಣೆ ನಡೆಸಲಾಗಿದ್ದು ತಮಾಷೆಗಾಗಿ ವಿಡಿಯೊ ಮಾಡಿರುವುದಾಗಿ, ಮತ್ತೆ ಇಂತಹ ಕೃತ್ಯ ಎಸಗುವುದಿಲ್ಲ ಎಂದು ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರೆ. ನಿಯಮಗಳ ಪ್ರಕಾರ ಮೂವರನ್ನೂ ಅಮಾನತು ಮಾಡಲಾಗಿದೆ’ ಎಂದು ನೇತ್ರಜ್ಯೋತಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

‘ಆರೋಪಿತ ವಿದ್ಯಾರ್ಥಿನಿಯರ ಮೊಬೈಲ್‌ ಪರಿಶೀಲಿಸಲಾಗಿದ್ದು ಘಟನೆಯ ವಿಡಿಯೊಗಳು ಲಭ್ಯವಾಗಿಲ್ಲ. ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸುವಂತೆ ಮೌಖಿಕವಾಗಿ ತಿಳಿಸಲಾಗಿದೆ’ ಎಂದು ಅವರು ತಿಳಿಸಿದರು.

‘ವಿಡಿಯೊ ಮಾಡಿರುವ ವಿಚಾರ ತಿಳಿದ ಕೂಡಲೇ ಸಂತ್ರಸ್ತೆ ಸ್ನೇಹಿತೆಯರ ಮೊಬೈಲ್‌ನಿಂದ ದೃಶ್ಯಾವಳಿಯನ್ನು ಡಿಲೀಟ್ ಮಾಡಿಸಿದ್ದಾರೆ. ತಮ್ಮ ಭವಿಷ್ಯ ಹಾಗೂ ಸಹಪಾಠಿಗಳ ಭವಿಷ್ಯದ ದೃಷ್ಟಿಯಿಂದ ಪೊಲೀಸ್ ಠಾಣೆಗೆ ದೂರು ನೀಡದಿರಲು ನಿರ್ಧರಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ರಶ್ಮಿ ಸಾಮಂತ್‌ ಕುಟುಂಬಸ್ಥರನ್ನು ಭೇಟಿ ಮಾಡಿದ ಶಾಸಕ ಯಶ್‌ಪಾಲ್‌

ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್‌ ಅವರ ಮನೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿನೀಡಿ ಕುಟುಂಬದ ಸದಸ್ಯರ ಜತೆ ಚರ್ಚಿಸಿದರು.

ಬಳಿಕ ಮಾತನಾಡಿ, ‘ಉಡುಪಿ‌ಯ ನೇತ್ರ ಜ್ಯೋತಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೊಗಳನ್ನು ಚಿತ್ರೀಕರಿಸಿ ಸಮಾಜಘಾತುಕ ಶಕ್ತಿಗಳ ಕೈಗೆ ಕೊಟ್ಟು ವಿದ್ಯಾರ್ಥಿನಿಯ ಜೀವನ ಹಾಳು ಮಾಡುವ ಪ್ರಯತ್ನದಲ್ಲಿ ಭಾಗಿಯಾಗಿರುವ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಕ್ರಮಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು ಸಂತ್ರಸ್ತೆಗೆ ನ್ಯಾಯ ಕೊಡಿಸುತ್ತೇನೆ. ಪ್ರಕರಣದ ಬಗ್ಗೆ ಧ್ವನಿ ಎತ್ತಿದ ರಶ್ಮಿ ಸಾಮಂತ್‌ ಅವರಿಗೆ ಪೊಲೀಸ್ ಇಲಾಖೆ ಕಿರುಕುಳ ನೀಡಿರುವ ಬಗ್ಗೆ ವರದಿ ಕೇಳಲಾಗಿದೆ. ರಶ್ಮಿ ಹಾಗೂ ಅವರ ಕುಟುಂಬಕ್ಕೆ ತೊಂದರೆ ಕೊಟ್ಟರೆ ಸುಮ್ಮನಿ ರುವುದಿಲ್ಲ’ ಎಂದು ತಿಳಿಸಿದರು.

ಟ್ವೀಟ್‌ನಲ್ಲಿ ಏನಿದೆ?
‘ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮೆರಾ ಇರಿಸಿ ನೂರಾರು ಹಿಂದೂ ಯುವತಿಯರ ಚಿತ್ರೀಕರಣ ಮಾಡಿರುವವರ ವಿರುದ್ಧ ಯಾರೂ ಮಾತನಾಡುತ್ತಿಲ್ಲ. ವಿಡಿಯೊ ಹಾಗೂ ಫೋಟೋಗಳು ನಿರ್ದಿಷ್ಟ ಸಮುದಾಯದ ಗ್ರೂಪ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ‘1992ರಲ್ಲಿ ನಗ್ನ ವಿಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬ್ಲಾಕ್‌ ಮೇಲ್ ಮಾಡಿ ನೂರಾರು ಯುವತಿಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಅಜ್ಮೀರ್‌ನಲ್ಲಿ ನಡೆದ ಕೃತ್ಯ ಉಡುಪಿಯಲ್ಲೂ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.