ಉಡುಪಿ: ಪಶ್ಚಿಮ ಘಟ್ಟದ ದಟ್ಟಾರಣ್ಯದ ಮಡಿಲಿನಲ್ಲಿ ಅಡಿಕೆ ಗಿಡಗಳಿಂದ ಆವೃತವಾಗಿರುವ ಪುಟ್ಟ ಮಣ್ಣಿನ ಗೋಡೆಯ ಮನೆಯಲ್ಲಿ ಎಲ್ಲೆಲ್ಲೂ ನೀರವ ಮೌನ. ಕೋಳಿ, ನಾಯಿಗಳನ್ನು ಬಿಟ್ಟರೆ ಅಲ್ಲಿ ಮನುಷ್ಯರ ಸುಳಿವೇ ಇಲ್ಲ...
ನಕ್ಸಲ್ ನಾಯಕ ಕೂಡ್ಲು ವಿಕ್ರಂ ಗೌಡ ಉಸಿರು ಚೆಲ್ಲಿದ್ದು ಇದೇ ಮನೆಯಲ್ಲಿ. ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಪೀತುಬೈಲ್‌ನಲ್ಲಿರುವ ಈ ಮನೆಗೆ ತಲುಪಬೇಕಾದರೆ ದುರ್ಗಮ ಅರಣ್ಯ ಹಾದಿ ಸವೆಸಲೇಬೇಕು.
ಮನೆಯ ಬಳಿ ತಲುಪುತ್ತಿದ್ದಂತೆ ಪೊಲೀಸರು ಹಾಕಿರುವ ಎಚ್ಚರಿಕೆಯ ಪಟ್ಟಿಗಳು ಕಣ್ಣಿಗೆ ರಾಚುತ್ತವೆ. ಮನೆಯ ಜಗಲಿಯಲ್ಲಿ ವಿಕ್ರಂ ನೆಲಕ್ಕೊರಗಿದ ಜಾಗದಲ್ಲಿ ಬಂದೂಕಿನ ಗುಂಡುಗಳು ನೆಲವನ್ನು ಕೊರೆದ ಗುರುತುಗಳು ಇನ್ನೂ ಮಾಯವಾಗಿಲ್ಲ. ತುಳಸಿ ಕಟ್ಟೆ, ಮನೆ ಮುಂಭಾಗದ ಅಡಿಕೆ ಗಿಡ, ತೆಂಗಿನ ಮರಗಳಲ್ಲೂ ಗುಂಡುಗಳು ಹೊಕ್ಕಿರುವ ರಂಧ್ರಗಳು ಘಟನೆಯ ಕರಾಳತೆಗೆ ಸಾಕ್ಷಿಯಾಗಿವೆ.
ಎನ್‌ಕೌಂಟರ್ ನಡೆದ ಬಳಿಕ ವಿಧಿ ವಿಜ್ಞಾನ ತಜ್ಞರ ತಂಡದ ಪರಿಶೀಲನೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೇ ಘಟನಾ ಸ್ಥಳಕ್ಕೆ ತೆರಳಲು ಮಾಧ್ಯಮದವರಿಗೆ ಅನುಮತಿ ನೀಡಲಾಗಿತ್ತು.
ಮನೆಯ ಬಾಗಿಲುಗಳು ತೆರದ ಸ್ಥಿತಿಯಲ್ಲಿದ್ದು, ಹಲವು ದಿನಗಳಿಂದ ಇಲ್ಲಿ ಜನ ವಾಸ ಇಲ್ಲದ್ದು ಎದ್ದು ತೋರಿತು. ಮನೆಯ ಒಳಗೂ ಹೊರಗೂ ಪೊಲೀಸರು ತನಿಖೆಯ ಭಾಗವಾಗಿ ಹಾಕಿರುವ ಗುರುತುಗಳು ಇನ್ನೂ ಹಾಗೆಯೇ ಇವೆ.
ಮನೆಯ ಹಿಂಭಾಗದಿಂದ ಮೇಲಕ್ಕೆ ಹತ್ತಿ ಹೋದರೆ ನೇರವಾಗಿ ಪಶ್ಚಿಮ ಘಟ್ಟದ ದಟ್ಟಾರಣ್ಯಕ್ಕೆ ತಲುಪಬಹುದು. ಮೂಲ ಸೌಲಭ್ಯ ಕಾಣದ ಪೀತುಬೈಲ್‌ನ ಈ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಸೋಲಾರ್‌ನಿಂದಾಗಿ ಈ ಮನೆಗಳಲ್ಲಿ ಬೆಳಕು ಮೂಡಿದೆ. ಟಿ.ವಿ. ಸೇರಿದಂತೆ ಯಾವುದೇ ಆಧುನಿಕ ವಿದ್ಯುನ್ಮಾನ ಸಾಧನಗಳು ಈ ಮನೆಯಲ್ಲಿ ಕಣ್ಣಿಗೆ ಬೀಳುವುದಿಲ್ಲ.
ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಕೇವಲ ಮೂರು ಮನೆಗಳಷ್ಟೇ ಇವೆ. ಆದರೆ ಅವುಗಳಲ್ಲಿ ಜನರು ಇರಲಿಲ್ಲ. ಹಲವು ದಿನಗಳಿಂದ ಆಹಾರ ಸಿಗದೆ ಹಸಿವಿನಿಂದ ಕಂಗೆಟ್ಟಿರುವ ನಾಯಿಗಳು, ಕೋಳಿಗಳು ಎಲ್ಲೆಂದರಲ್ಲಿ ಓಡಾಡಿಕೊಂಡಿವೆ.
ಜಯಂತ ಗೌಡ ಎಂಬುವವರ ಮನೆಯ ಅಂಗಳದಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಈ ಮನೆಗಳ ನಿವಾಸಿಗಳೆಲ್ಲ ಈಗ ದೂರದ ಸಂಬಂಧಿಗಳ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
‘ಈ ಪ್ರದೇಶಕ್ಕೆ ವಿಕ್ರಂ ಬರುತ್ತಾನೆಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ, ಆತನನ್ನು ಹತ್ಯೆ ಮಾಡಲಾಗಿದೆ. ಶರಣಾಗು ಎಂದು ಸೂಚಿಸಿದರೂ ಆತ ಗುಂಡು ಹಾರಿಸಿದ್ದ‘ ಎಂಬುದು ನಕ್ಸಲ್ ನಿಗ್ರಹ ಪಡೆಯ ವಿವರಣೆಯಾಗಿದೆ.
ಮೂಲಸೌಕರ್ಯಗಳಿಂದ ವಂಚಿತವಾಗಿರುವ ಈ ಪ್ರದೇಶದ ಜನರಿಗಾಗಿ ಸೇತುವೆಯೊಂದನ್ನು ನಕ್ಸಲ್ ನಿಗ್ರಹ ಪಡೆಯು ನಿರ್ಮಿಸಿಕೊಟ್ಟಿದೆ. ಈ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆದಿದ್ದವು ಎಂದು ಮೂಲಗಳು ಹೇಳಿವೆ.
ಪೀತುಬೈಲಿನ ನಿವಾಸಿಗಳು ಕೃಷಿ ಹಾಗೂ ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುವವರು. ಜೊತೆಗೆ ಕಾಡಿನಲ್ಲಿ ಸಿಗುವ ಕಾಡುತ್ಪತ್ತಿಗಳು ಕೂಡ ಅವರ ಬದುಕಿಗೆ ಆಸರೆಯಾಗಿವೆ. ಎನ್‌ಕೌಂಟರ್ ನಡೆದಿರುವುದರಿಂದ ಅಲ್ಲಿನ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
‘ಅರಣ್ಯ ಇಲಾಖೆ ಕಿರುಕುಳಕ್ಕೆ ನಕ್ಸಲನಾದ'
’ವಿಕ್ರಂ ಗೌಡ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನೋಡಿದ್ದೆ. ಒಳ್ಳೆಯ ಹುಡುಗ. ಸಾಯುವ ಹಾಗೆ ಮಾಡಿದ್ದೇ ಅರಣ್ಯ ಇಲಾಖೆಯವರು. ಅವನಿಗೆ ಶೂ ಹಾಕಿಕೊಂಡು ಮೆಟ್ಟಿದ್ದಾರೆ ಹೊಡೆದಿದ್ದಾರೆ. ಮನೆಯಲ್ಲಿ ಅನ್ನವನ್ನು ಚೆಲ್ಲಿ ಹಿಂಸೆ ಕೊಟ್ಟಿದ್ದಾರೆ‘ ಎಂದು ಕಬ್ಬಿನಾಲೆಯ ಕುಚ್ಚೂರು ದರ್ಖಾಸ್ ನಿವಾಸಿ ಸದಾಶಿವ ಗೌಡ ಅವರು ವಿಕ್ರಂ ಕುರಿತ ನೆನಪುಗಳನ್ನು ಮೆಲುಕು ಹಾಕಿದರು. ‘ವಿಕ್ರಂ ಗೌಡ ಸಾವಿನಲ್ಲಿ ನೋವಿದೆ. ಆತ ನಮ್ಮ ಜಾತಿಯ ಮಗ. ನಕ್ಸಲರ ಕುರಿತು ಸ್ಥಳೀಯರಿಗೆ ಯಾವುದೇ ಮಾಹಿತಿ ಇರಲಿಲ್ಲ. ಸೋಲಾರ್‌ನರು ಎಂದು ಹೇಳಿ ಎಎನ್‌ಎಫ್‌ನವರು ಈ ಮಾರ್ಗವಾಗಿ ಓಡಾಡುತ್ತಿದ್ದರು’ ಎಂದರು. ಇಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಆಗುವುದಿಲ್ಲ. ಮಳೆಗಾಲದಲ್ಲಿ ನಮ್ಮ ಕಷ್ಟ ಹೇಳತೀರದು ಎಂದು ಅವರು ಅಳಲು ತೋಡಿಕೊಂಡರು. ‘ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಮಗೆ ತೊಂದರೆಯಾಗಬಹುದೆಂಬ ಭಯ ಈಗ ಕಾಡುತ್ತಿದೆ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಬೇಲಿ ಹಾಕುವ ಕೆಲಸ ಹಿಂದೆ ನಡೆದಿತ್ತು. ಆಗ ನಾವು ವಿರೋಧಿಸಿದ್ದೆವು’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.