ADVERTISEMENT

ಎಚ್ಚರ ತಪ್ಪಿದರೆ ಬ್ಯಾಂಕ್‌ ಖಾತೆಗೆ ಕನ್ನ

ಎಟಿಎಂ ಪಿನ್‌, ಬ್ಯಾಂಕ್ ಖಾತೆ ವಿವರ ಬಹಿರಂಗ ಬೇಡ: ಎಸ್‌ಪಿ ಲಕ್ಷ್ಮಣ ನಿಂಬರಗಿ

ಬಾಲಚಂದ್ರ ಎಚ್.
Published 22 ಡಿಸೆಂಬರ್ 2018, 10:30 IST
Last Updated 22 ಡಿಸೆಂಬರ್ 2018, 10:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಬುದ್ಧಿವಂತರ ಜಿಲ್ಲೆಯಲ್ಲಿ ಬುದ್ಧಿವಂತರನ್ನೇ ವಂಚಿಸುವ ಜಾಲವೊಂದು ಸಕ್ರಿಯವಾಗಿದೆ. ನಾಗರಿಕರು ಸ್ವಲ್ಪ ಎಚ್ಚರ ತಪ್ಪಿದರೂ ಬ್ಯಾಂಕ್‌ ಖಾತೆಗೆ ಕನ್ನ ಬೀಳುವ ಸಾಧ್ಯತೆಗಳಿವೆ. ಈಚೆಗೆ ನಡೆದ ಕೆಲವು ಆನ್‌ಲೈನ್‌ ವಂಚನೆ ಪ್ರಕರಣಗಳು ಇದಕ್ಕೆ ನಿದರ್ಶನ.

‘ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ, ನಿಮ್ಮ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿದೆ, ಪಿನ್‌ ನಂಬರ್ ನೀಡಿದರೆ ಅನ್‌ಬ್ಲಾಕ್‌ ಮಾಡಿಕೊಡುತ್ತೇವೆ. ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದ್ದು, ಚಾಲೂ ಮಾಡಲು ಖಾತೆಯ ವಿವರ ನೀಡಿ, ಹೀಗೆ ಗ್ರಾಹಕರನ್ನು ಮರಳುಮಾಡುವ ವಂಚಕರು ಕ್ಷಣಾರ್ಧದಲ್ಲಿ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಂತೆಕಟ್ಟೆಯ ಫ್ಲಾವಿಯಾ ಡಯಾಸ್ ಜಿಯಾನ್ ಎಂಬುವರ ಖಾತೆಯಿಂದ ವಂಚಕರು ₹ 77 ಸಾವಿರ ದೋಚಿದ್ದಾರೆ. ಎಟಿಎಂ ಕಾರ್ಡ್‌ ಫ್ಲಾವಿಯಾ ಅವರ ಬಳಿಯೇ ಇದ್ದರೂ, ಹಣ ಕಳೆದುಕೊಂಡಿರುವುದು ವಿಶೇಷ. ಈ ಪ್ರಕರಣದಲ್ಲಿ ಖಾತೆದಾರರ ಅರವಿಗೆ ಬಾರದಂತೆ 15 ಬಾರಿ ಎಟಿಎಂನಿಂದ ಹಣ ತೆಗೆದುಕೊಳ್ಳಲಾಗಿದೆ.

ADVERTISEMENT

ವಂಚನೆ ಹೇಗೆ ನಡೆದಿರಬಹುದು ಎಂದು ಸೆನ್‌ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್ ಸೀತಾರಾಮ್ ಮಾಹಿತಿ ನೀಡಿದರು. ಗ್ರಾಹಕರು ಬಿಲ್ ಪಾವತಿ ಮಾಡುವಾಗ ನಕಲಿ ಎಟಿಎಂ ಸ್ವೈಪಿಂಗ್ ಮೆಷಿನ್ ಬಳಸಲಾಗುತ್ತದೆ. ಮೆಷಿನ್‌ಗೆ ಕಾರ್ಡ್‌ ಉಜ್ಜಿದಾಗ ಪಾಸ್‌ವರ್ಡ್‌, ಸಿವಿವಿ ಸೇರಿದಂತೆ ಸಂಪೂರ್ಣ ಡಾಟಾವನ್ನು ಕಳವು ಮಾಡಲಾಗುತ್ತದೆ. ಬಳಿಕ ಅದನ್ನು ಮತ್ತೊಂದು ಕಾರ್ಡ್‌ನಲ್ಲಿ ಮುದ್ರಿಸಿ, ಹಣವನ್ನು ಬಿಡಿಸಿಕೊಳ್ಳಲಾಗುತ್ತದೆ. ಈ ಬಗ್ಗೆ ಗ್ರಾಹಕರು ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದರು.‌

ಆನ್‌ಲೈನ್ ವಂಚನೆ ಪ್ರಕರಣಗಳನ್ನು ಭೇದಿಸುವುದು ಕಷ್ಟ. ವಂಚಕರು ಅಜ್ಞಾತ ಸ್ಥಳದಲ್ಲಿ ಕುಳಿತು ಖಾತೆಗೆ ಕನ್ನ ಹಾಕುತ್ತಾರೆ. ವಂಚಕರ ಕರೆಯ ವಿವರ ಆಧರಿಸಿ ಹುಡುಕಿದರೂ ಪತ್ತೆ ಮಾಡುವುದು ಕಷ್ಟ. ಈಚೆಗೆ ಪ್ರಕರಣವೊಂದರ ತನಿಖೆಗಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಆರೋಪಿಗಳ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಗಳು ಅವರದ್ದಾಗಿರಲಿಲ್ಲ. ಅಪರಿಚಿತರ ಬ್ಯಾಂಕ್ ಖಾತೆಯನ್ನು ಹಣಕೊಟ್ಟು ಖರೀದಿಸಿ ವಂಚಕರು ಉಪಯೋಗಿಸುತ್ತಿದ್ದರು ಎಂದು ತನಿಖಾ ಸವಾಲುಗಳನ್ನು ತೆರದಿಟ್ಟರು.

ಶಾಪಿಂಗ್ ಮಾಡುವಾಗ ಒಂದಕ್ಕಿಂತ ಹೆಚ್ಚು ಸ್ವೈಪಿಂಗ್ ಮೆಷಿನ್‌ಗಳಿದ್ದರೆ ಎಚ್ಚರ ಅಗತ್ಯ. ಎಟಿಎಂ ಕಾರ್ಡ್‌ ಕಳೆದುಕೊಂಡರೆ ತಕ್ಷಣ ಬ್ಯಾಂಕ್‌ಗೆ ಕರೆ ಮಾಡಿ ಬ್ಲಾಕ್ ಮಾಡಿಸಿ, ಎಷ್ಟೇ ಆಪ್ತರಾಗಿದ್ದರೂ ಎಟಿಎಂ ಪಿನ್‌ ಷೇರ್ ಮಾಡಬೇಡಿ ಎಂದು ಸಲಹೆ ನೀಡುತ್ತಾರೆ ಸೀತಾರಾಮ್‌.

ಜಾಗೃತಿಯೊಂದೇ ಆನ್‌ಲೈನ್‌ ವಂಚನೆ ತಡೆಯುವ ಮದ್ದು. ಬ್ಯಾಂಕ್‌ ಹಾಗೂ ಎಟಿಎಂ ವಿವರ ಕೇಳಿಕೊಂಡು ಯಾವ ಬ್ಯಾಂಕ್‌ ಅಧಿಕಾರಿಗಳೂ ಕರೆ ಮಾಡುವುದಿಲ್ಲ. ಕರೆ ಮಾಡಿದರೆ ಅವರು ವಂಚಕರೇ ಆಗಿರುತ್ತಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.