ADVERTISEMENT

ಆನ್‌ಲೈನ್ ವಂಚನೆ: ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಪ್ರಕರಣಗಳು

ಸುಶಿಕ್ಷಿತರೇ ಹೆಚ್ಚು ಮೋಸಕ್ಕೊಳಗಾಗುವವರು: ಉತ್ತರ ಭಾರತದಲ್ಲಿ ಹಬ್ಬಿಕೊಂಡಿರುವ ವಂಚಕರ ಜಾಲ

ನವೀನ್‌ಕುಮಾರ್ ಜಿ
Published 17 ಜುಲೈ 2024, 5:25 IST
Last Updated 17 ಜುಲೈ 2024, 5:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ನಿಮಗೆ ಕೊರಿಯರ್ ಬಂದಿದೆ ಅದರಲ್ಲಿ ಇರಾನ್‌ ದೇಶದ ಪಾಸ್ ಪೋರ್ಟ್‌ಗಳಿವೆ, ಜೊತೆಗೆ ಮಾದಕ ವಸ್ತು ಕೂಡ ಇದೆ. ಮುಂಬೈ ಪೊಲೀಸರ ತನಿಖೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ... ಇಷ್ಟು ಹಣ ನೀಡಿದರೆ ಪ್ರಕರಣದಿಂದ ನಿಮ್ಮನ್ನು ರಕ್ಷಿಸುತ್ತೇವೆ...

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮಗೆ ಅತೀ ಹೆಚ್ಚಿನ ಲಾಭ ತಂದು ಕೊಡುತ್ತೇವೆ. ನಮ್ಮ ಖಾತೆಗೆ ಹಣ ವರ್ಗಾಯಿಸಿ...

ಇದು ಈಚೆಗೆ ನಗರದ ಕೆಲವರಿಂದ ಹಣ ದೋಚಿರುವ ಆನ್‌ಲೈನ್ ವಂಚಕರ ಆಮಿಷದ ನುಡಿಗಳು. ಇವರ ಮಾತು ಕೇಳಿದ ಹಲವರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ನಗರದ ಸೆನ್ (ಸೈಬರ್, ಎಕನಾಮಿಕ್, ನಾರ್ಕೋಟಿಕ್ಸ್) ಅಪರಾಧ ಠಾಣೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ತಿಳಿಯುತ್ತದೆ.

ಆನ್‌ಲೈನ್ ವಂಚನೆಗೆ ಸಂಬಂಧಿಸಿ ಈ ವರ್ಷದ ಜನವರಿಯಿಂದ ಜುಲೈ 16ರವರೆಗೆ ಉಡುಪಿಯ ಸೆನ್ ಠಾಣೆಯಲ್ಲಿ 39 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಜಿಲ್ಲೆಯಲ್ಲಿ 940 ಪ್ರಕರಣಗಳು ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ ಮೂಲಕ ದಾಖಲಾಗಿವೆ.

ನಕಲಿ ಗುರುತಿನ ಚೀಟಿ, ನಕಲಿ ವಿಳಾಸ ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿರುವ ವಂಚಕರನ್ನು ಸೆರೆಹಿಡಿಯಲು ಪೊಲೀಸರಿಗೂ ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಗುಜರಾತ್ ಮೊದಲಾದ ರಾಜ್ಯಗಳಲ್ಲಿದ್ದಕೊಂಡೇ ವಂಚಕರು ಬಲೆ ಬೀಸುತ್ತಾರೆ.

ಉತ್ತರ ಭಾರತದ ಕೆಲವೆಡೆ ಬೀದಿ ಬದಿ ಮಲಗುವ ಭಿಕ್ಷುಕರ ಫೋಟೊ ಮತ್ತು ನಕಲಿ ವಿಳಾಸ ಬಳಸಿ ವಂಚಕರು ಬ್ಯಾಂಕ್ ಖಾತೆ ತೆರೆಯುತ್ತಿರುವುದರಿಂದ ತನಿಖೆ ನಡೆಸಿ ಮುನ್ನಡೆಯುವಾಗ ಭಿಕ್ಷುಕರ ಬಳಿ ತಲುಪುತ್ತೇವೆ ಎನ್ನುತ್ತಾರೆ ಪೊಲೀಸರು.

ವೈದ್ಯರು, ಎಂಜಿನಿಯರ್, ಪ್ರಾಧ್ಯಾಪಕರು ಸೇರಿದಂತೆ ಸುಶಿಕ್ಷಿತರು ಕೂಡ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಸೆನ್ ಪೊಲೀಸ್ ಠಾಣೆಯ ಪೊಲೀಸರು ಆನ್‌ಲೈನ್ ವಂಚನೆ ಕುರಿತು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದರೂ ವಂಚನೆಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಹಲವು ವಿಧ: ಆನ್‌ಲೈನ್ ಮೂಲಕ ನಡೆಯುವ ವಂಚನೆಗಳಲ್ಲಿ ಹಲವು ವಿಧಗಳಿವೆ. ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಗ್ರೂಪ್‌ಗಳನ್ನು ರಚಿಸಿ, ಅದಕ್ಕೆ ಜನರನ್ನು ಸೇರಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಾರೆ. ಬಳಿಕ ಹಣವನ್ನು ಮರಳಿಸದೆ ವಂಚಿಸುತ್ತಿದ್ದಾರೆ.

‘ಡಿಜಿಟಲ್‌ ಅರೆಸ್ಟ್‌’ (ಪೊಲೀಸರ ಸೋಗಿನಲ್ಲಿ ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸುವುದು) ಈಗ ಹೆಚ್ಚಾಗಿ ನಡೆಯುತ್ತಿರುವ ವಂಚನೆ ಎನ್ನುತ್ತಾರೆ ಪೊಲೀಸರು. ಜನರಿಗೆ ಪಾರ್ಸೆಲ್‌ ಬಂದಿದೆ ಎಂದು ಫೋನ್‌ ಮಾಡಿ, ಅದರಲ್ಲಿ ಡ್ರಗ್ಸ್‌ ಪತ್ತೆಯಾಗಿದೆ. ಮುಂಬೈ ಪೊಲೀಸರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಾರೆ ಎಂದು ಬೆದರಿಕೆಯೊಡ್ಡಿ ಹಣ ಪಡೆದುಕೊಳ್ಳಲಾಗುತ್ತಿದೆ.

ಉದ್ಯೋಗಾರ್ಥಿಗಳಿಗೂ ಪಾರ್ಟ್ ಟೈಂ ಕೆಲಸದ ಆಮಿಷವೊಡ್ಡಿ ವಂಚನೆ ಮಾಡಲಾಗುತ್ತಿದೆ. ಆನ್‌ಲೈನ್‌ ಲೋನ್ ಆ್ಯಪ್‌ ಬಳಸುವವರೂ ಇಂತಹ ವಂಚನೆಗೆ ಒಳಗಾಗುತ್ತಿದ್ದಾರೆ. ವಿದ್ಯುತ್‌ ಬಿಲ್‌ ಪಾವತಿಸಲು ಬಾಕಿ ಇದೆ ಎಂದು ಕ್ಯು ಆರ್‌ ಕೋಡ್‌ಗಳನ್ನು ಕಳುಹಿಸಿಯೂ ಹಣ ಲಪಟಾಯಿಸಿರುವ ಪ್ರಕರಣಗಳು ನಡೆದಿವೆ. ಮೀಶೊ ಮೊದಲಾದ ಆನ್‌ಲೈನ್‌ ಶಾಂಪಿಂಗ್‌ ವೇದಿಕೆಗಳ ಗಿಫ್ಟ್‌ ಕಾರ್ಡ್‌ಗಳ ಹೆಸರಿನಲ್ಲೂ ವಂಚನೆ ನಡೆಯುತ್ತಿದೆ ಎನ್ನುತ್ತಾರೆ ಪೊಲೀಸರು.

ಸೆನ್‌ ಪೋಲಿಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್‌ ಅವರು ಸೈಬರ್‌ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ನೋಡಲ್‌ ಅಧಿಕಾರಿಯೂ ಹೌದು. ಸೈಬರ್‌ ಅಪರಾಧಕ್ಕೆ ಒಳಗಾದಲ್ಲಿ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. www.cybercrime.gov.in ಆನ್‌ಲೈನ್‌ ಪೋರ್ಟಲ್‌ನಲ್ಲೂ ದೂರು ದಾಖಲಿಸಬಹುದು.

ಜಾಗೃತಿ ಮೂಡಿಸುತ್ತಿದ್ದೇವೆ: ಡಾ.ಅರುಣ್

ಆನ್‌ಲೈನ್‌ ವಂಚನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್‌ ಇಲಾಖೆ ಎಲ್ಲಾ ಕಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಲ್ಲೂ ಅರಿವು ಮೂಡಿಸಲಾಗುತ್ತಿದೆ. ಕರಪತ್ರಗಳನ್ನೂ ಹಂಚಲಾಗುತ್ತಿದೆ. ಸುಶಿಕ್ಷಿತರೇ ಹೆಚ್ಚಾಗಿ ವಂಚನೆಗೊಳಗಾಗುತ್ತಿರುವುದು ವಿಪರ್ಯಾಸ. ಕೆಲವರು ಅತಿಯಾಸೆಯಿಂದ ಹೆಚ್ಚು ಹಣ ಸಿಗಲಿದೆ ಎಂದು ವರ್ಷಾನುಗಟ್ಟಲೆ ಹಂತ ಹಂತವಾಗಿ ಲಕ್ಷಾಂತರ ಹಣ ಪಾವತಿಸುತ್ತಾರೆ. ಕೊನೆಗೆ ಆ ಹಣ ಮರಳಿ ಸಿಗದಾಗ ವಂಚನೆಗೆ ಒಳಗಾಗಿರುವುದು ಅವರ ಅರಿವಿಗೆ ಬರುತ್ತದೆ. ಈಗ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.