ADVERTISEMENT

ಕರಾವಳಿ ರೈತರ ಗೋಳು ಕೇಳದ ಸರ್ಕಾರ: ದರ ಕುಸಿತ ಭೀತಿ

ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭ: ದರ ಕುಸಿತ ಭೀತಿಯಲ್ಲಿ ರೈತರು

ಬಾಲಚಂದ್ರ ಎಚ್.
Published 14 ಅಕ್ಟೋಬರ್ 2022, 23:30 IST
Last Updated 14 ಅಕ್ಟೋಬರ್ 2022, 23:30 IST
ಭತ್ತ ಕಟಾವು
ಭತ್ತ ಕಟಾವು   

ಉಡುಪಿ: ಕರಾವಳಿಯ ಭತ್ತ ಬೆಳೆಯುವ ರೈತರ ಮೇಲಿನ ಸರ್ಕಾರದ ನಿರ್ಲಕ್ಷ್ಯ ಈ ವರ್ಷವೂ ಮುಂದುವರಿದಿದೆ. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರು, ಒಬ್ಬರು ರಾಜ್ಯ ಸಚಿವರು ಹಾಗೂ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರಿದ್ದರೂ ಪ್ರತಿವರ್ಷ ಭತ್ತ ಬೆಳೆಯುವ ರೈತರು ಸಮಸ್ಯೆ ಎದುರಿಸುವುದು ತಪ್ಪಿಲ್ಲ.

ಆರಂಭವಾದ ಭತ್ತ ಕಟಾವು:

ADVERTISEMENT

ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 37,000 ಹೆಕ್ಟೇರ್‌ನಲ್ಲಿ ಭತ್ತದ ಕೃಷಿ ನಡೆದಿದ್ದು ಕಟಾವು ಪ್ರಕ್ರಿಯೆಗೆ ಚಾಲನೆ ದೊರೆತಿದೆ. 15 ದಿನಗಳಲ್ಲಿ ಕೊಯ್ಲು ಬಿರುಸು ಪಡೆದುಕೊಳ್ಳಲಿದ್ದು ನವೆಂಬರ್‌ ಅಂತ್ಯದೊಳಗೆ ಬಹುತೇಕ ಮುಕ್ತಾಯವಾಗಲಿದೆ.

ಜಿಲ್ಲೆಯಲ್ಲಿ ತುರ್ತಾಗಿ ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯದಿದ್ದರೆ ರೈತರು ಕಷ್ಟಪಟ್ಟು ಬೆಳೆದ ಭತ್ತಕ್ಕೆ ಉತ್ತಮ ದರ ಸಿಗುವುದಿಲ್ಲ. ಹವಾಮಾನ ವೈಪರೀತ್ಯ, ಸಾಲದ ಶೂಲ, ಬೆಳೆದ ಭತ್ತ ದಾಸ್ತಾನು ಮಾಡಲು ಗೋದಾಮುಗಳು ಕೊರತೆಯ ಕಾರಣದಿಂದ ದಲ್ಲಾಳಿಗಳು ಕೇಳಿದ ದರಕ್ಕೆ ರೈತರು ಭತ್ತವನ್ನು ಮಾರಾಟ ಮಾಡಿ ಕೈತೊಳೆದುಕೊಳ್ಳಬೇಕು.

ಸದ್ಯ ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ದರ ಇದ್ದರೂ, ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯಲು ವಿಳಂಬ ಮಾಡಿದರೆ ದರ ಕುಸಿತವಾಗಲಿದೆ. ಭತ್ತ ಬೆಳೆಯಲು ಖರ್ಚು ಮಾಡಿದ ಹಣವೂ ರೈತರ ಕೈಸೇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕುಂದಾಪುರದ ರೈತ ಪ್ರಭಾಕರ್ ಶೆಟ್ಟಿ.

ಸರ್ಕಾರ ಪ್ರತಿವರ್ಷ ಜಿಲ್ಲೆಯಲ್ಲಿ ಶೇ 90ರಷ್ಟು ಕಟಾವು ಮುಗಿದ ಬಳಿಕ ಖರೀದಿ ಕೇಂದ್ರಗಳನ್ನು ತೆರೆಯುತ್ತದೆ. ಈ ಹೊತ್ತಿಗೆ ರೈತರು ಬೆಳೆದ ಭತ್ತ ಮಿಲ್ ಮಾಲೀಕರ ಹಾಗೂ ಮಧ್ಯವರ್ತಿಗಳ ಗೋದಾಮು ಸೇರಿರುತ್ತದೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯ ಸಂಪೂರ್ಣ ಲಾಭ ದಲ್ಲಾಳಿಗಳ ಪಾಲಾಗುತ್ತದೆ. ದಶಕಗಳಿಂದ ಈ ಸಮಸ್ಯೆಯ ಅರಿವಿದ್ದರೂ ಕರಾವಳಿಯ ಜನಪ್ರತಿನಿಧಿಗಳು ಜಾಣ ಕಿವುಡು, ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರೈತರು.

ಹಿಂದೆ ಭತ್ತದ ಕೊಯ್ಲು ಎರಡು ತಿಂಗಳು ನಡೆಯುತ್ತಿತ್ತು. ಕೃಷಿ ಕಾರ್ಮಿಕರ ಕೊರತೆ ಹಾಗೂ ಯಾಂತ್ರೀಕೃತ ಕೃಷಿ ಹೆಚ್ಚಾದ ಬಳಿಕ ಕೊಯ್ಲು ಬೇಗ ಮುಗಿಯುತ್ತಿದೆ. ಹವಾಮಾನ ವೈಪರೀತ್ಯ ಹಾಗೂ ಗೋದಾಮುಗಳ ಕೊರತೆಯ ಕಾರಣದಿಂದ ರೈತರು ಭತ್ತವನ್ನು ದಾಸ್ತಾನು ಮಾಡಿಕೊಳ್ಳಲಾಗದೆ ದಲ್ಲಾಳಿಗಳು ಕೇಳಿದ ದರಕ್ಕೆ ಮಾರಾಟ ಮಾಡುತ್ತಾರೆ. ಕೊಯ್ಲು ಶುರುವಾಗುವ ಮುನ್ನವೇ ಭತ್ತದ ಖರೀದಿ ಕೇಂದ್ರಗಳನ್ನು ತೆರೆದರೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿ ಸ್ಥಿರತೆ ಕಾಣಲಿದೆ ಎನ್ನುತ್ತಾರೆ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು.

‘ಕರಾವಳಿ ರೈತರ ದಿವ್ಯ ನಿರ್ಲಕ್ಷ್ಯ’

ರಾಜ್ಯ ಸರ್ಕಾರಕ್ಕೆ ಪ್ರತಿವರ್ಷವೂ ಅ.1ರಿಂದಲೇ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾ ಕೃಷಿಕ ಸಂಘದಿಂದ ಮನವಿ ಸಲ್ಲಿಸುತ್ತಲೇ ಬರುತ್ತಿದ್ದು, ಸ್ಪಂದನ ದೊರೆತಿಲ್ಲ.ಕರಾವಳಿಯ ಭತ್ತ ಬೆಳೆಯುವ ರೈತರನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ತೆರೆದರೆ ರೈತರು ಬೆಳೆದ ಭತ್ತವನ್ನೆಲ್ಲ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡುವುದಿಲ್ಲ. ಆದರೆ ಸರ್ಕಾರದ ಘೋಷಣೆ ಹೊರಬಿದ್ದರೆ ಮಾರುಕಟ್ಟೆಯಲ್ಲಿ ಭತ್ತದ ದರ ಹೆಚ್ಚಾಗಲಿದೆ. ಇದರಿಂದ ನಷ್ಟ ಅನುಭವಿಸುವುದು ತಪ್ಪಲಿದೆ ಎನ್ನುತ್ತಾರೆ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು.

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ

ಕೃಷಿ ಇಲಾಖೆ, ಎಪಿಎಸಿ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತದ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ರೈತರಿಂದ ಕುಚಲಕ್ಕಿ ಭತ್ತ ಖರೀದಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಸರ್ಕಾರದಿಂದ ಒಪ್ಪಿಗೆ ಸಿಗುವ ಸಾದ್ಯತೆಗಳಿವೆ.

–ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.