ADVERTISEMENT

ಕರಾವಳಿಯಲ್ಲಿ ಚುರುಕುಗೊಂಡ ಭತ್ತ ಕಟಾವು ಕಾರ್ಯ

ಗದ್ದೆಗಳಲ್ಲಿ ಬೆಳೆದು ನಿಂತ ಬಲಿತ ಭತ್ತದ ಪೈರು, ಯಂತ್ರಗಳಿಂದ ಕಟಾವು

ಪ್ರಕಾಶ ಸುವರ್ಣ ಕಟಪಾಡಿ
Published 29 ಅಕ್ಟೋಬರ್ 2024, 6:49 IST
Last Updated 29 ಅಕ್ಟೋಬರ್ 2024, 6:49 IST
ಭತ್ತ ಕಟಾವು ಯಂತ್ರದ ಮೂಲಕ ಕಟಾವು ಮಾಡುತ್ತಿರುವುದು
ಭತ್ತ ಕಟಾವು ಯಂತ್ರದ ಮೂಲಕ ಕಟಾವು ಮಾಡುತ್ತಿರುವುದು   

ಶಿರ್ವ: ಕರಾವಳಿಯಲ್ಲಿ ಭತ್ತದ ಕಟಾವು ಕಾರ್ಯ ಚುರುಕುಗೊಂಡಿದೆ. ಗದ್ದೆಗಳಲ್ಲಿ ಬೆಳೆದು ನಿಂತ ಬಲಿತ ಭತ್ತದ ಪೈರು, ನಿರಂತರವಾಗಿ ಸುರಿಯುತ್ತಿದ್ದ ಅಕಾಲಿಕ ಮಳೆಯಿಂದಾಗಿ ಕಂಗಾಲಾಗಿದ್ದ ರೈತರಿಗೆ ಎರಡು ಮೂರು ದಿನಗಳಿಂದ ಮಳೆಯ ಬಿಡುವುನಿಂದ ನಿಟ್ಟುಸಿರು ಬಿಡುವಂತಾಗಿದೆ. ಗದ್ದೆಗಳಲ್ಲಿ ಆಧುನಿಕ ಯಂತ್ರಗಳ ಮೂಲಕ ಬೆಳೆ ಕಟಾವು ಮಾಡುವ ಕೆಲಸ ಭಾರದಿಂದ ಸಾಗುತ್ತಿದೆ.

ಕಾರ್ಮಿಕರ ಕೊರತೆ, ದುಬಾರಿ ಮಜೂರಿ, ಅತಿವೃಷ್ಠಿ, ಅನಾವೃಷ್ಠಿ ಪಾಕೃತಿಕ ವಿಕೋಪಗಳಿಂದ ರೈತರು ತತ್ತರಿಸಿದ್ದು, ಪರ್ಯಾಯವಾಗಿ ಕಟಾವು ಯಂತ್ರಗಳನ್ನು ಬಳಸುವುದು ಅನಿವಾರ್ಯವಾಗಿದೆ.

ಶಿರ್ವ ಬಡಗು ಪಂಜಿಮಾರು, ದಿಂಡಿಬೆಟ್ಟು ಭಾಗದಲ್ಲಿ ಗದ್ದೆಗಳಲ್ಲಿ ಕಟಾವು ಯಂತ್ರಗಳಿಂದ ಭತ್ತದ ಕಟಾವು ಕಾರ್ಯ ಭರದಿಂದ ಸಾಗುತ್ತಿದೆ. ದಾವಣಗೆರೆ, ಶಿವಮೊಗ್ಗ ಭಾಗದಿಂದ ಬಂದ ಪೈರು ಕಟಾವು ಯಂತ್ರಗಳ ಏಜೆಂಟರು ರೈತರಿಂದ ಗಂಟೆಗೆ ₹2,600ರಂತೆ ವಸೂಲಿ ಮಾಡುತ್ತಿದ್ದಾರೆ ಅಲ್ಲದೆ, ರನ್ನಿಂಗ್ ಚಾರ್ಜ್ ಆಗಿ ಗಂಟೆಗೆ ₹200ರಿಂದ ₹500ರವರೆಗೆ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ.

ADVERTISEMENT

ಪ್ರಸ್ತುತ ತಮಿಳುನಾಡು ಭಾಗದಿಂದ ಯಂತ್ರಗಳನ್ನು ತರಿಸಿ ಸಾಮಾಜಿಕ ಕಾರ್ಯಕರ್ತ ಕಳತ್ತೂರು ಪ್ರವೀಣ್ ಗುರ್ಮೆಯವರ ನೇತೃತ್ವದಲ್ಲಿ ರೈತರಿಗೆ ಅನುಕೂಲವಾಗುವಂತೆ ಗಂಟೆಗೆ ಹೆಚ್ಚುವರಿ ದರಗಳಿಲ್ಲದೆ ₹2,500, ಹೆಚ್ಚು ಗದ್ದೆಗಳಿದ್ದಲ್ಲಿ ₹2,400ರಂತೆ ಕಟಾವು ಕಾರ್ಯ ನಡೆಯುತ್ತಿದೆ.

ಹಿರಿಯರಿಂದ ಬಳುವಳಿಯಾಗಿ ಬಂದ 2 ಎಕ್ರೆ ಭೂಮಿಯಲ್ಲಿ ಭತ್ತ ಕೃಷಿ ಮಾಡುತ್ತಿದ್ದು, 22 ವರ್ಷಗಳಿಂದ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸದೆ ಸಾವಯವ ಗೊಬ್ಬರ ಬಳಸಿ ಬಿತ್ತನೆ ಮಾದರಿಯಲ್ಲಿ ಕೃಷಿ ಮಾಡುತ್ತಿದ್ದೇನೆ. ಸಾಂಪ್ರಾದಾಯಿಕ ಪದ್ದತಿಯಲ್ಲಿ ಕಾರ್ಮಿಕರನ್ನು ಬಳಸಿ ನಾಟಿ ಮಾಡಿದರೆ ಲಾಭಾಂಶ ಏನೂ ಇಲ್ಲ. ಮಳೆ, ನೆರೆ, ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಇಳಿವರಿ ಕಡಿಮೆಯಾಗಿದೆ. ಕೊಯ್ಲಿನ ಅವಧಿಯಲ್ಲಿ ಮಳೆ ಬಂದರೆ ದನಗಳಿಗೂ ಮೇವು ಸಿಗದೆ ದೊಡ್ಡ ನಷ್ಟ ಆಗುತ್ತದೆ ಎನ್ನುತ್ತಾರೆ ಕೃಷಿಕ ಗಂಗಾಧರ ಆಚಾರ್ಯ ಪಡುಬೆಳ್ಳೆ.

ಎಲ್‌ಐಸಿಯಲ್ಲಿ ಉದ್ಯೋಗದಲ್ಲಿದ್ದು, ಹಿರಿಯರ ಕೃಷಿ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉದ್ಯೋಗ ಬಿಟ್ಟು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ನದಿ ತೀರ ಪ್ರದೇಶವಾದ್ದರಿಂದ ನೆರೆ, ಅತಿವೃಷ್ಠಿ, ಅನಾವೃಷ್ಠಿ, ಕೃಷಿ ಕಾರ್ಮಿಕರ ಕೊರತೆ, ದಿನಗೂಲಿ ದರ ಏರಿಕೆಯಾಗಿ ರೈತರಿಗೆ ಉಳಿಗಾಲವಿಲ್ಲ. ಹೈನುಗಾರಿಕೆ, ಕುರಿ, ಕೋಳಿ ಸಾಕಣೆ, ಬಾಳೆ, ತೆಂಗು, ಕಂಗು ಇತ್ಯಾದಿ ಬೆಳೆಸಿದರೂ ಆದಾಯ ಇಮ್ಮಡಿ ಎನ್ನುವುದು ಕನಸು ಮಾತ್ರ. ಹಾಲಿಗೆ ಸಿಗುವ ಸಹಾಯಧನವೂ ಸಕಾಲಕ್ಕೆ ಸಿಗದೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತರ ಸ್ಥಿತಿ ಚಿಂತಾಜನಕವಾಗಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಬೆನಡಿಕ್ಟ್ ನೊರೋನ್ಹಾ.

ಕಾಪು ಕ್ಷೇತ್ರ ಕೇಂದ್ರವಾಗಿಟ್ಟುಕೊಂಡು ಒಂದು ತಿಂಗಳ ಅವಧಿಗೆ 23 ಕಟಾವು ತಂತ್ರಗಳನ್ನು, 5 ರೋಲ್ ಯಂತ್ರಗಳನ್ನು ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ರೋಲ್ ಯಂತ್ರದಲ್ಲಿ 2 ಅಡಿ, 3 ಅಡಿ ರೋಲ್‌ಗಳಿದ್ದು, ರೋಲ್ ಒಂದಕ್ಕೆ ₹40, ₹50 ದರದಲ್ಲಿ ನೀಡಲಾಗುತ್ತದೆ. ಕಟಾವು ಯಂತ್ರಗಳಲ್ಲಿ 3 ವಿಧಗಳಿದ್ದು ಕುಬುಟೊ ಯಂತ್ರಕ್ಕೆ ಗಂಟೆಗೆ ₹2,200, ಕ್ಲಾಸ್ ಯಂತ್ರಕ್ಕೆ ₹2,300, ಕರ್ತಾರ್ ಯಂತ್ರಕ್ಕೆ ₹2,500 ದರ ವಿಧಿಸಲಾಗುತ್ತಿದೆ. ಯಾವುದೇ ಹೆಚ್ಚುವರಿ ದರ ಇಲ್ಲ, ರೈತರು ಗಮನಿಸಬೇಕು ಎಂದು ರೈತ ಮುಖಂಡ ಪ್ರವೀಣ್ ಗುರ್ಮೆ ಕಳತ್ತೂರು ತಿಳಿಸಿದ್ದಾರೆ.

ಆಧುನಿಕ ಭತ್ತ ಕಟಾವು ಯಂತ್ರ
ಆಧುನಿಕ ಭತ್ತ ಕಟಾವು ಯಂತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.