ADVERTISEMENT

ಹೆಬ್ರಿ: ಹಡಿಲು ಕೃಷಿ ಭೂಮಿಯಲ್ಲಿ ಭತ್ತನಾಟಿ

ಸುಕುಮಾರ್ ಮುನಿಯಾಲ್
Published 15 ಜುಲೈ 2024, 7:47 IST
Last Updated 15 ಜುಲೈ 2024, 7:47 IST
ಶಾಂತಿನಿಕೇತನ ಯುವವೃಂದವರು ಹಡಿಲು ಭೂಮಿ ಕೃಷಿ ಮಾಡಲು ಸಿದ್ಧತೆ ನಡೆಸಿರುವುದು
ಶಾಂತಿನಿಕೇತನ ಯುವವೃಂದವರು ಹಡಿಲು ಭೂಮಿ ಕೃಷಿ ಮಾಡಲು ಸಿದ್ಧತೆ ನಡೆಸಿರುವುದು   

ಹೆಬ್ರಿ: ತುಂಡುಭೂಮಿ, ನೆರೆ, ಕಾಡು ಪ್ರಾಣಿಗಳ ಹಾವಳಿ, ದನ ಕರುಗಳ ಕಾಟ, ಆದಾಯಕ್ಕಿಂತ ಖರ್ಚು ಜಾಸ್ತಿ, ನೀರಿನ ಸಮಸ್ಯೆ ಹೀಗೆ ಹಲವು ಸಮಸ್ಯೆಯಿಂದಾಗಿ ಕುಡಿಬೈಲು ಪರಿಸರದಲ್ಲಿ ಹಡಿಲು ಬಿಟ್ಟಿದ್ದ ಹತ್ತಾರು ರೈತರ ಭೂಮಿಯನ್ನು ಕೃಷಿ ಉಳಿಸುವ ಉದ್ದೇಶದಿಂದ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವವೃಂದದ ಸದಸ್ಯರು ಕೃಷಿ ಮಾಡಲು ಮುಂದಾಗಿದ್ದಾರೆ.

ಸಂಘದ ಎಲ್ಲಾ ಯುವ ಸದಸ್ಯರು ಸೇರಿಕೊಂಡು ಈ ಯೋಜನೆಗೆ ಕೈ ಹಾಕಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಹಡಿಲು ಭೂಮಿ ಕೃಷಿ ಮಾಡಿದಾಗ ಬಹಳ ನಷ್ಟ ಉಂಟಾಗಿತ್ತು. ಸದಸ್ಯರೆಲ್ಲರೂ ಸೇರಿ ನಷ್ಟ ಭರಿಸಿದ್ದರು. ಆದರೂ ಕೆಲವು ರೈತರು ವಿವಿಧ ಸಮಸ್ಯೆಯಿಂದ ಹಡಿಲು ಬಿಟ್ಟಾಗ ಕೃಷಿ ಉಳಿಸಿ ಬೆಳೆಸುವ ಉದ್ದೇಶದಿಂದ ಹಡಿಲು ಭೂಮಿ ಕೃಷಿಗೆ ಮತ್ತೆ ಕೈ ಹಾಕಿದ್ದಾರೆ.

ಸಂಘದ ಸದಸ್ಯರ ಸಹಕಾರ: ಈ ವರ್ಷ ಬೃಹತ್ ಪ್ರಮಾಣದಲ್ಲಿ ಕೃಷಿ ಮಾಡುತ್ತಿರುವುದರಿಂದ ಸಂಘದ ಸದಸ್ಯರು ಎಲ್ಲ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಕೃಷಿ ಕೂಲಿ ಆಳುಗಳಿಂದ ಕೆಲಸ ಮಾಡಿಸಿದರೆ ಮತ್ತಷ್ಟು ಖರ್ಚು ಬರುವುದರಿಂದ, ಸದಸ್ಯರೇ ಎಲ್ಲ ಕೆಲಸಗಳನ್ನು ಉಚಿತವಾಗಿ ಮಾಡುತ್ತಾರೆ. ಗದ್ದೆಯಲ್ಲಿ ಉಳುಮೆಯಿಂದ ಕೊಯ್ಲು ತನಕ ಸಂಪೂರ್ಣ ಸಾವಯವ ಕೃಷಿ ಪ್ರಕ್ರಿಯೆಗಳು ನಡೆಯುತ್ತವೆ. ರಾಸಾಯನಿಕ ಗೊಬ್ಬರ ಬಳಸದೆ, ಸ್ಥಳೀಯ ಸಂಘ ಸದಸ್ಯರು, ರೈತರ ಮನೆಯ ದನದ ಗೊಬ್ಬರ ಬಳಸಲಾಗುತ್ತದೆ.

ADVERTISEMENT

ನೆರೆ, ಕಾಡುಪ್ರಾಣಿಗಳ ಭೀತಿ: ಸದ್ಯಕ್ಕೆ 300 ಮೀಟರ್ ಬೇಲಿ ಹಾಕಲಾಗಿದೆ. ಜೋರಾಗಿ ಮಳೆ ಬರುವುದರಿಂದ ನೆರೆ ಭೀತಿ ಇದೆ. ಬೀಡಾಡಿ ದನಗಳು ನಿರಂತರವಾಗಿ ಗದ್ದೆಗಳಿಗೆ ಬಂದು ಲೂಟಿ ಮಾಡುತ್ತವೆ. ನವಿಲು, ಜಿಂಕೆ, ಹಂದಿಗಳ ಹಾವಳಿ ತಪ್ಪಿಸಿ ಕೃಷಿ ಮಾಡಿದರೆ ಒಂದಷ್ಟು ಮಟ್ಟಿಗೆ ಬೆಳೆ ಕೈಗೆ ಸಿಗಬಹುದು. ಬಯಲು ಗದ್ದೆ ಆಗಿರುವುದರಿಂದ ಹುಲ್ಲು ಸಿಗುವುದು ಕಷ್ಟ. ನೀರಾವರಿ ಸಮಸ್ಯೆ ಕಾಡಬಹುದು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ಕೃಷಿ ಅಧಿಕಾರಿ ಉಮೇಶ್, ಯಂತ್ರಶ್ರೀ ಯೋಧ ಕೃಷ್ಣ ನಾಯ್ಕ್ ಬೆಳ್ವೆ ಅವರ ಸಹಕಾರದೊಂದಿಗೆ ಕೆಲಸ ನಡೆಯಲಿದೆ. ಸಂಘಕ್ಕೆ ವಿಶೇಷ ದರದಲ್ಲಿ ಮ್ಯಾಟ್ ನೇಜಿ ದೊರಕಲಿದೆ ಎಂದು ನರೇಂದ್ರ ಎಸ್‌. ಮರಸಣಿಗೆ ಮಾಹಿತಿ ನೀಡಿದರು.

ಕಜೆ ಬ್ರ್ಯಾಂಡ್‌ಗೆ ಡಿಮಾಂಡ್: ಲಾಕ್‌ಡೌನ್‌ ಸಮಯದಲ್ಲಿ ಕೆಲಸ ಇಲ್ಲದಿದ್ದಾಗ ಯುವಕರೆಲ್ಲ ಹಡಿಲು ಭೂಮಿ ಕೃಷಿ ಮಾಡುವ ಯೋಜನೆಗೆ ಕೈ ಹಾಕಿದ್ದರು. ನಷ್ಟವಾದರೂ ಒಂದೆರಡು ವರ್ಷ ಮಾಡಿದ್ದರು. ಸಂಪೂರ್ಣ ಸಾವಯುವ ಕೃಷಿ ಆದ್ದರಿಂದ ಶಾಂತಿನಿಕೇತನ ಕಜೆ ಬ್ರಾಂಡಿಗೆ ಹೆಬ್ರಿಯಲ್ಲೆಲ್ಲ ಬಹಳಷ್ಟು ಬೇಡಿಕೆ ಇತ್ತು. ಪ್ರತಿ ವರ್ಷ ಬಳಕೆದಾರರು ಕಜೆ ಅಕ್ಕಿ ನೀಡಿ ಎಂದು ಕೇಳುತ್ತಿದ್ದಾರೆ ಎಂದು ಶಾಂತಿನಿಕೇತನ ಯುವವೃಂದದ ಅಧ್ಯಕ್ಷ ದೀಕ್ಷಿತ್ ನಾಯಕ್ ‍ತಿಳಿಸಿದರು.

ಹಡಿಲು ಬಿಟ್ಟಿದ್ದ ಗದ್ದೆಯಲ್ಲಿ ನಾವು ಕೃಷಿ ಮಾಡಿದಾಗ ಕೆಲವು ರೈತರು ಸುಗ್ಗಿ ಬೆಳೆ ನಾವು ಮಾಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಸಂಘದ ಪ್ರೇರಣೆಯಿಂದ ರೈತರು ಉತ್ಸುಕರಾಗಿ ಮುಂದೆ ಬಂದಿರುವುದು ನಮ್ಮ ಕೆಲಸದ ಬಗ್ಗೆ ಹೆಮ್ಮೆಯಾಗುತ್ತದೆ
ದೀಕ್ಷಿತ್ ನಾಯಕ್ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ
‘ಕೃಷಿ ಉಳಿವು–ದೇಶ ಸೇವೆ’ ‌
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿ ಬಿಟ್ಟು ಬೇರೆಡೆ ಮುಖ ಮಾಡಿರುವುದು ವಿಷಾದನೀಯ. ಕೃಷಿಯಿಂದ ಸ್ವಾಲಂಬನೆ ಬದುಕು ಸಾಧ್ಯ. ನಮ್ಮಲ್ಲಿರುವ ಭೂಮಿಯಲ್ಲಿ ಕೃಷಿ ಮಾಡಿದರೆ ದೇಶ ಸೇವೆಯಾಗುತ್ತದೆ. ಈ ನಿಟ್ಟಿನಲ್ಲಿ ಶಾಂತಿನಿಕೇತನ ಸಂಸ್ಥೆಯವರು ಸಾಮಾಜಿಕ ಚಿಂತನೆ ಮಾಡಿಕೊಂಡು ಕೃಷಿ ಉಳಿವಿನ ಬಗ್ಗೆ ಯೋಚಿಸಿ ಹಡಿಲು ಭೂಮಿ ಕೃಷಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅದಮಾರು‍‍ಶ್ರೀ ಪ್ರೇರಣೆ
ದೇಶದಲ್ಲಿ ಕೃಷಿಗೆ ಪೂರಕ ವಾತಾವರಣ ಇಲ್ಲ. ಇದರಿಂದ ದೇಶ ಹಿಂದೆಂದೂ ಕಂಡಿರದ ಪ್ರಪಾತಕ್ಕೆ ತಲುಪಬಹುದು. ಸರ್ಕಾರ ವೋಟ್ ಬ್ಯಾಂಕ್‌ ಗುರಿಯಾಗಿರಿಸಿಕೊಳ್ಳುವ ಕಾರ್ಯಕ್ರಮ ಕೈಬಿಟ್ಟು ಉಚಿತ ಗೊಬ್ಬರ ಕೀಟನಾಶಕ ರೋಗಮುಕ್ತ ಬೀಜ ವಿತರಿಸಬೇಕು. ಉಪಕರಣಗಳ ಬೆಲೆ ಇಳಿಕೆ ಮಾಡಬೇಕು. ಅದಮಾರು ಮಠದ ಶ್ರೀಗಳು ನಮ್ಮ ಸಂಸ್ಥೆಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಕೆಲಸ–ಕಾರ್ಯಗಳಿಗೆ ನಿರಂತರವಾಗಿ ಹುರಿದುಂಬಿಸುತ್ತಾರೆ. ಲಾಕ್‌ಡೌನ್‌ ಸಮಯದಲ್ಲಿ ಹಡಿಲು ಭೂಮಿ ಕೃಷಿ ಮಾಡಲು ಪ್ರೇರೇಪಿಸಿದ್ದರು. ಇಂದು ಮತ್ತೊಮ್ಮೆ ಆಶೀರ್ವದಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ನಮ್ಮ ಸಂಘದ ಸದಸ್ಯರು ಎಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ನಡೆಯುತ್ತಿದೆ ಎಂದು ಶಾಂತಿನಿಕೇತನ ಯುವ ವೃಂದದ ಸಂಸ್ಥಾಪಕ ರಾಜೇಶ್ ನಾಯ್ಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.