ಪಡುಬಿದ್ರಿ: ಅದಾನಿ ಫೌಂಡೇಷನ್‌ನ ಸಿಎಸ್‌ಆರ್ ಯೋಜನೆಯಡಿ ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹16 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮೂರು ಕಾಮಗಾರಿ ಉದ್ಘಾಟಿಸಲಾಯಿತು.
ಸಿಎಸ್‌ಆರ್ ಅನುದಾನದಡಿಯಲ್ಲಿ ಶ್ರೀಧರ್ಮ ಜಾರಂದಾಯ ದೈವಸ್ಥಾನದ ಬಳಿಯಿರುವ ಜಾರಂದಾಯ ಕೆರೆ ಅಭಿವೃದ್ಧಿ, ಪಣಿಯೂರು ಗ್ರಾಮದಲ್ಲಿ ನಾಲಾಗೆ ತಡೆಗೋಡೆ, ಕೊರಗ ಸಮುದಾಯದ ಶ್ರೀಬ್ರಹ್ಮಗುಡಿಯ ಆವರಣಕ್ಕೆ ಆವರಣ ಗೋಡೆ ಕಾಮಗಾರಿಗಳನ್ನು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ, ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕಿಶೋರ್ ಆಳ್ವ ಮಾತನಾಡಿ, ‘ಅದಾನಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ನೆರೆ ಗ್ರಾಮಗಳಲ್ಲಿ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯದ ಅಭಿವೃದ್ಧಿ, ಗ್ರಾಮೀಣ ಕ್ರೀಡೆ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನೆ ನೀಡುವ ಕೆಲಸಗಳನ್ನು ಅನುಷ್ಠಾನಗೊಳಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿಯೇ ₹23 ಕೋಟಿ ಅನುದಾನ ಈ ಹಿಂದೆ ಘೋಷಿಸಿದ್ದು, ಅದರಡಿ ಇದುವರೆಗೆ ₹13 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿದೆ. ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ₹3 ಕೋಟಿ ಅನುದಾನ ಘೋಷಿಸಿದ್ದು, ಇವರೆಗೆ ₹1.75 ಕೋಟಿಯಷ್ಟು ಅಭಿವೃದ್ಧಿ ಕೆಲಸ ಪೂರ್ಣಗೊಳಿಸಿದೆ’ ಎಂದರು.
ಬೆಳಪು ಗ್ರಾಮ ಪಂಚಾಯಿತಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ‘ಅದಾನಿ ಸಿಎಸ್‌ಆರ್ ಯೋಜನೆಯಡಿ ಹಲವು ಸವಲತ್ತುಗಳನ್ನು ಗ್ರಾಮಸ್ಥರಿಗೆ ತಲುಪಿಸುತ್ತಿರುವುದು ಸ್ವಾಗತಾರ್ಹ ಎಂದರು.
ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಭಟ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶೇಖಬ್ಬ, ಗ್ರಾಮ ಪಂಚಾಯಿತಿ ಸದಸ್ಯರಾದ ಶರತ್‌ಕುಮಾರ್, ಪ್ರಕಾಶ್ ಭಟ್, ಅನಿತಾ, ಸೌಮ್ಯ, ಉಷಾ, ಸುಲೈಮಾನ್, ಗುತ್ತಿಗೆದಾರರಾದ ಪ್ರಜ್ವಲ್ ಶೆಟ್ಟಿ, ಅದಾನಿ ಸಂಸ್ಥೆಯ ಏಜಿಎಂ ರವಿ ಆರ್. ಜೇರೆ, ಅದಾನಿ ಪೌಂಡೇಷನ್‌ನ ಅನುದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.