ADVERTISEMENT

ಪುರಸಭೆಯಲ್ಲಿ ಬಿಜೆಪಿ– ಕಾಂಗ್ರೆಸ್ ವಾಕ್ಸಮರ

ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಆಯ್ಕೆ ಗೊಂದಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:16 IST
Last Updated 8 ನವೆಂಬರ್ 2024, 4:16 IST
ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ ಆಯ್ಕೆ ಸಂಬಂಧಿಸಿ  ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.
ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ ಆಯ್ಕೆ ಸಂಬಂಧಿಸಿ  ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.   

ಕಾಪು (ಪಡುಬಿದ್ರಿ): ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ ಆಯ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ವಾಕ್ಸಮರ ನಡೆಯಿತು.

ಹಿಂದಿನಿಂದ ನಡೆದುಬಂದಂತೆ, ಆಡಳಿತ ಪಕ್ಷದ ಸದಸ್ಯರಿಗೆ 7 ಹಾಗೂ ವಿಪಕ್ಷಕ್ಕೆ 4 ಸ್ಥಾನವನ್ನು ಆಯ್ಕೆ ಮಾಡಬೇಕು ಎಂದು ವಿಪಕ್ಷ ಸದಸ್ಯ ಅರುಣ್ ಶೆಟ್ಟಿ ಪಾದೂರು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮೀರ್ ಕಾಪು, ‘ಜೆಡಿಎಸ್ ಹಾಗೂ ಎಸ್‌ಡಿಪಿಐ ಸದಸ್ಯರು ಇರುವುದರಿಂದ ಕಾಂಗ್ರೆಸ್‌ಗೆ 4 ಸ್ಥಾನ, ಜೆಡಿಎಸ್ ಹಾಗೂ ಎಸ್‌ಡಿಪಿಐಗೆ ತಲಾ 1 ಸ್ಥಾನ ಹಾಗೂ ಬಿಜೆಪಿಗೆ 5 ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿಯೇ ಆಡಳಿತ ಪಕ್ಷಕ್ಕೆ 7, ವಿರೋಧ ಪಕ್ಷಕ್ಕೆ 4 ಸ್ಥಾನ ಆಯ್ಕೆ ಮಾಡಲಾಗುತ್ತಿತ್ತು ಎಂದರು. ಈ ವಿಷಯ ಎರಡು ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ADVERTISEMENT

ಈ ನಡುವೆ ಆಡಳಿತ ಪಕ್ಷ ಬಿಜೆಪಿಯು, ಜೆಡಿಎಸ್ ಪಕ್ಷದ ಒಬ್ಬ ಸದಸ್ಯರು ಸೇರಿ ಒಟ್ಟು 7 ಮಂದಿಯನ್ನು ಸೂಚಿಸಿ ಅನುಮೋದನೆ ಮಾಡಿತು. ಕಾಂಗ್ರೆಸ್ ತನ್ನ ನಾಲ್ವರು ಸದಸ್ಯರನ್ನು ಸೂಚಿಸಿ ಅನುಮೋದಿಸಿತು. ಆದರೆ, ಎಸ್‌ಡಿಪಿಐ ಇಬ್ಬರು ಸದಸ್ಯರಿದ್ದು, ನೂರುದ್ದೀನ್ ಅವರನ್ನು ಸೂಚಿಸಲಾಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಎಸ್‌ಡಿಪಿಐ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಗೆ ಸೇರ್ಪಡೆಗೊಳಿಸಲು ಸಾಧ್ಯವಾಗುವುದಾದರೆ ಎಸ್‌ಡಿಪಿಐ ಸದಸ್ಯರನ್ನು ಅನುಮೋದನೆ ಮಾಡಲು ಏಕೆ ಸಾಧ್ಯವಿಲ್ಲ ಎಂದರು.

ಈ ಮಾತು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮತ್ತೊಮ್ಮೆ ವಾಗ್ವಾದಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಬೇರೆ ಕಡೆ ಹೊಂದಾಣಿಕೆ ಮಾಡಿಕೊಂಡಿದೆ ಎಂದರು. ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಪ್ರತಿಕ್ರಿಯಿಸಿದರು.

ಅಂತಿಮವಾಗಿ ಅನಿಲ್ ಕುಮಾರ್, ನಿತಿನ್ ಕುಮಾರ್, ಮೋಹಿನಿ ಶೆಟ್ಟಿ, ನಾಗೇಶ್, ಉಮೇಶ್ ಕರ್ಕೇರ, ಲತಾ ದೇವಾಡಿಗ, ಸುರೇಶ್ ದೇವಾಡಿಗ, ಕಾಂಗ್ರೆಸ್‌ನಿಂದ ಫರ್ಝಾನ, ಸತೀಶ್‌ಚಂದ್ರ, ಶೋಭಾ ಬಂಗೇರಾ, ಮುಹಮ್ಮದ್ ಆಸೀಫ್ ಅವರನ್ನು ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಘೋಷಿಸಿದರು.

ನೀರು ಪೈಪ್‌ಲೈನ್ ಅಳವಡಿಕೆಗೆ ಎಲ್ಲೆಂದರಲ್ಲಿ ರಸ್ತೆ ಅಗೆತದಿಂದ ತೊಂದರೆಯಾಗುತ್ತಿರುವ ಬಗ್ಗೆ ಜಲಮಂಡಳಿ ಎಂಜಿನಿಯರ್‌ಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ದೂರಿದರಲ್ಲದೆ, ಸಮಜಾಯಿಷಿ ನೀಡಲು ಬಂದ ಎಂಜಿನಿಯರ್ ಸೋಮಶೇಖರ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

ರಸ್ತೆ ಅಗೆತದಿಂದ ಆಗಿರುವ ಸಮಸ್ಯೆ ಪರಿಹರಿಸದೇ ಹೊಸ ಕಾಮಗಾರಿ ನಡೆಸದಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಧಿಕಾರಿಗಳು ತಾಕೀತು ಮಾಡಿದರು. ವಾರದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಎಂಜಿನಿಯರ್ ಭರವಸೆ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆಗೆ, ಪುರಸಭೆ ಹಣ ಖರ್ಚು ಮಾಡುವ ಬಗ್ಗೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ತಾಲ್ಲೂಕು ಆಡಳಿತವೇ ಇದರ ಮುತುವರ್ಜಿ ವಹಿಸಿ ಕಾರ್ಯಕ್ರಮ ನಡೆಸಬೇಕು. ಪುರಸಭೆಗೆ ಗೌರವವೂ ಸಿಗುತ್ತಿಲ್ಲ. ನಾವು ಕೇವಲ ಲಡ್ಡು ತಿನ್ನುವುದಕ್ಕಾಗಿ ಇಷ್ಟು ಖರ್ಚು ಮಾಡಬೇಕೇ, ಮುಂದಿನ ದಿನಗಳಲ್ಲಿ ನಾವು ಖರ್ಚು ಮಾಡುವ ಅಗತ್ಯವಿಲ್ಲ. ಮುಂದೆ ನಾವು ಖರ್ಚಿಗೆ ಹಣ ಕೊಡುವುದಿಲ್ಲ ಎಂದು ನಿರ್ಣಯ ಮಾಡುವಂತೆ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದರು.

ಪುರಸಭಾ ಮುಖ್ಯಾಧಿಕಾರಿ ನಾಗರಾಜ್ ಮಾತನಾಡಿ, ‘ಕಾಪು ಪ್ರವಾಸೋದ್ಯಮ ತಾಣವಾದ ಬೀಚ್ ನಿರ್ವಹಣೆಗೆ ಪ್ರವಾಸೋದ್ಯಮ ಇಲಾಖೆ ಟೆಂಡರ್ ನೀಡಿದೆ. ಅದರ ಪೂರ್ಣ ಮೊತ್ತವನ್ನು ಪ್ರವಾಸೋದ್ಯಮ ಇಲಾಖೆಗೆ ಪಾವತಿಸಲಾಗುತ್ತದೆ. ಅಲ್ಲಿರುವ ಹೈಮಾಸ್ಟ್‌, ಶೌಚಾಲಯವನ್ನು ಪುರಸಭೆಯ ಅನುದಾನದಿಂದ ನಿರ್ಮಿಸಲಾಗಿದೆ. ಅದರ ಖರ್ಚು, ದುರಸ್ತಿ ನಿರ್ವಹಣೆ ಪುರಸಭೆ ಭರಿಸಬೇಕಾಗಿದೆ. ಇಲ್ಲಿರುವ ಹೈಮಾಸ್ಟ್‌ ದೀಪ ಕೆಟ್ಟು ಹೋಗಿದ್ದು, ಹೊಸದಾಗಿ ಅಳವಡಿಸಲು ₹5 ಲಕ್ಷ ಖರ್ಚಾಗುತ್ತಿದೆ. ಇದರಿಂದ ಪುರಸಭೆಗೆ ನಷ್ಟ ಉಂಟಾಗುತ್ತಿದೆ’ ಎಂದು ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳನ್ನು ಕರೆದು ಮಾತುಕತೆ ನಡೆಸುವುದಾಗಿ ಹೇಳಿದರು. ಉಪಾಧ್ಯಕ್ಷೆ ಸರಿತಾ ಶಿವಾನಂದ ಇದ್ದರು.

ಪಡಿತರ ಚೀಟಿ ರದ್ದು ಗೊಂದಲ

ಪುರಸಭೆ ವ್ಯಾಪ್ತಿಯಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಕುರಿತಾದ ಗೊಂದಲ ಬಗೆಹರಿಸುವಂತೆ ಸದಸ್ಯ ಅರುಣ್ ಶೆಟ್ಟಿ ಪಾದೂರು ಒತ್ತಾಯಿಸಿದರು. ಆಹಾರ ನಿರೀಕ್ಷಕ ಲೀಲಾನಂದ್ ಉತ್ತರಿಸಿ ‘₹1.20 ಲಕ್ಷಕ್ಕಿಂತ ಹೆಚ್ಚುವರಿ ಆದಾಯ ಮತ್ತು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಾಗಿರುವ 110 ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಲಾಗಿದೆ. ಪಡಿತರ ಅಂಗಡಿಗಳ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.