ಕಾಪು (ಪಡುಬಿದ್ರಿ): ಇಲ್ಲಿನ ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ನೇತೃತ್ವದಲ್ಲಿ ಸ್ವರ್ಣ ಜುವೆಲರ್ಸ್ನ ಪ್ರಬಂಧಕ ಲಕ್ಷ್ಮಿನಾರಾಯಣ್ ಮತ್ತು ಸುನಿಲ್ ಜಿ. ಅವರಿಗೆ ಗುರುವಾರ ಚಿನ್ನ ಮತ್ತು ಬೆಳ್ಳಿ ಹಸ್ತಾಂತರಿಸಲಾಯಿತು.
ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ನೇತೃತ್ವದಲ್ಲಿ ಭಕ್ತಾದಿಗಳಿಂದ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಸ್ವರ್ಣ ಸಮರ್ಪಣೆಗೆ ಜೂನ್ 25ರಂದು ಚಾಲನೆ ನೀಡಿದ್ದು, ಅ. 3ರಂದು ಮುಹೂರ್ತ ನೆರವೇರಿಸಲಾಗಿತ್ತು. ಸಮಿತಿ ನಿರೀಕ್ಷೆಯಂತೆ ಭಕ್ತರು ಈಗಲೂ ಚಿನ್ನ ಮತ್ತು ಬೆಳ್ಳಿ ನೀಡುತ್ತಿದ್ದು, ಅ. 29ರವರೆಗೆ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಅವಕಾಶವಿದ್ದು, ಸ್ವರ್ಣ ಗದ್ದುಗೆ ಕೆಲಸ ಪ್ರಗತಿಯಲ್ಲಿದೆ.
‘20 ಕೆ.ಜಿ ಚಿನ್ನ, 180 ಕೆ.ಜಿ ಬೆಳ್ಳಿಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸ್ವರ್ಣ ಗದ್ದುಗೆಗೆ ಭಕ್ತರಿಂದ ಈಗಾಗಲೇ 11 ಕೆ.ಜಿ ಚಿನ್ನ, 36 ಕೆ.ಜಿ ಬೆಳ್ಳಿ ಸಮರ್ಪಣೆಯಾಗಿದೆ. ಪ್ರಪಂಚದಾದ್ಯಂತ ಇರುವ ಭಕ್ತರಿಂದ ಮತ್ತಷ್ಟು ಚಿನ್ನ ಸಮರ್ಪಣೆಗೊಳ್ಳುವ ನಿರೀಕ್ಷೆಯಿದ್ದು, ಭಕ್ತರು ಆದಷ್ಟು ಶೀಘ್ರದಲ್ಲಿ ಸ್ವರ್ಣ ಮತ್ತು ಬೆಳ್ಳಿ ಸಮರ್ಪಿಸಬಹುದಾಗಿದೆ’ ಎಂದು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಅಧ್ಯಕ್ಷ ರವಿಸುಂದರ್ ಶೆಟ್ಟಿ ಮುಂಬೈ ತಿಳಿಸಿದರು.
ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ ಹಾಗೂ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರಶೇಖರ್ ಅಮೀನ್, ಪ್ರಚಾರ ಸಮಿತಿ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರಿ, ನವದುರ್ಗಾ ಲೇಖನ ಯಜ್ಞ ಸಮಿತಿ ಸಂಚಾಲಕ ದಾಮೋದರ ಶರ್ಮಾ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.