ADVERTISEMENT

ಉಡುಪಿ: ರಾಜ್ಯದ ಕರಾವಳಿ ಪ್ರವಾಸೋದ್ಯಮದ ಪ್ರಚಾರ

ಈಶಾನ್ಯ ರಾಜ್ಯಗಳ ಪ್ರವಾಸ ಹೊರಟ ಸಚಿನ್, ಅಭಿಷೇಕ್ 

ಹಮೀದ್ ಪಡುಬಿದ್ರಿ
Published 6 ಅಕ್ಟೋಬರ್ 2024, 5:15 IST
Last Updated 6 ಅಕ್ಟೋಬರ್ 2024, 5:15 IST
ಈಶಾನ್ಯ ರಾಜ್ಯಗಳ ಅಧ್ಯಯನಕ್ಕಾಗಿ ಹೊರಟ ಕಾಪುವಿನ ಸಚಿನ್ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿ 
ಈಶಾನ್ಯ ರಾಜ್ಯಗಳ ಅಧ್ಯಯನಕ್ಕಾಗಿ ಹೊರಟ ಕಾಪುವಿನ ಸಚಿನ್ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿ    

ಕಾಪು (ಪಡುಬಿದ್ರಿ): 17 ರಾಜ್ಯಗಳು, 45 ದಿನಗಳು, 14,000 ಕಿ.ಮೀ. ಈಶಾನ್ಯ ರಾಜ್ಯವನ್ನು ಕಾಪುವಿನ ಸಚಿನ್ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿ ಸುಜುಕಿ ಸಂಸ್ಥೆಯ ಜಿಮ್ನಿ ವಾಹನದಲ್ಲಿ ಪ್ರವಾಸ ಹೊರಟಿದ್ದಾರೆ.

ಕರ್ನಾಟಕ ಕರಾವಳಿಯ ಪ್ರವಾಸೋದ್ಯಮದ ಪ್ರಚುರ ಪಡಿಸಲು ಹಾಗೂ ಸ್ಥಳೀಯ ಜನರ ಬದುಕು, ಅಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಮೂಲಕ ಜನರಿಗೆ ವಿವಿಧ ರಾಜ್ಯಗಳ ಮಾಹಿತಿ ನೀಡುವರು. 

ಶನಿವಾರ ಬೆಳಿಗ್ಗೆ ಕಾಪು ಹೊಸಮಾರಿಗುಡಿಯಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಹೊಸಮಾರಿಗುಡಿಯಿಂದ ಹೊರಟ ಇವರು ಮಂಗಳೂರು ಮೂಲಕ ಶಿವಮೊಗ್ಗ ಮಾರ್ಗವಾಗಿ ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುವರು. ಇಂದು ಆಂಧ್ರ ಪ್ರದೇಶನ್ನು ತಲುಪಿ ಅಲ್ಲಿ ತಂಗಲಿದ್ದಾರೆ.

ADVERTISEMENT

ಕರ್ನಾಟಕ, ಆಂಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರ, ಮಿಜೋರಾಂ, ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಮಾರ್ಗವಾಗಿ ಕರ್ನಾಟಕ ತಲುಪಲಿದ್ದಾರೆ.

ಸಚಿನ್ ಶೆಟ್ಟಿ ಮಾತನಾಡಿ, ‘ಈ ಮೊದಲು ಬೈಕ್‌ನಲ್ಲಿ ವಿವಿಧ ರಾಜ್ಯಗಳನ್ನು ಸಂಚರಿಸಿ ಅಲ್ಲಿನ ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಬಾರಿ ರಾಜ್ಯದ ಕರಾವಳಿಯ ಪ್ರವಾಸೋದ್ಯಮದ ಬಗ್ಗೆ ಸಂಚರಿಸಲಿರುವ ಎಲ್ಲ ರಾಜ್ಯಗಳಲ್ಲೂ ಪ್ರಚಾರ ಮಾಡಲಿದ್ದೇವೆ. ಅದರೊಂದಿಗೆ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪುವಿನ ಹೊಸಮಾರಿಗುಡಿ ದೇವಸ್ಥಾನದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು. ಈ ಬಾರಿ ಸುಜುಕಿ ಅವರ ಹೊಸ ಜಿಮ್ನಿ ವಾಹನದಲ್ಲಿ ಸಂಚರಿಸಿಲಿದ್ದೇವೆ. ಬೇಕಾದ ಎಲ್ಲ ವ್ಯವಸ್ಥೆಗಳನ್ನು ವಿಶೇಷ ರೀತಿಯಲ್ಲಿ ವಾಹನವನ್ನು ಸಜ್ಜುಗೊಳಿಸಿದ್ದೇವೆ. ಡಿಕ್ಕಿಯಲ್ಲಿ ಅಡುಗೆಗೆ ಬೇಕಾದ ವಸ್ತು ಜೋಡಿಸಲಾಗಿದ್ದು, ವಾಹನದ ಮೇಲೆ ಟೆಂಡ್ ಅಳವಡಿಸಲಾಗಿದೆ’ ಎಂದರು.

ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ‘ಸಚಿನ್ ಶೆಟ್ಟಿ ಛಾಯಾಗ್ರಾಹಕನಾಗಿದ್ದು, ಈ ಹಿಂದೆ ಬೈಕ್ ಯಾತ್ರೆ ಕೈಗೊಂಡಿದ್ದರು. ನವರಾತ್ರಿ ಸಡಗರದ ಉತ್ಸವದ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳ ಪ್ರವಾಸ ಹೊರಟಿದ್ದಾರೆ. ಕಾಪು ಮಾರಿಯಮ್ಮರಲ್ಲಿ ಪ್ರಾರ್ಥಿಸಿದ್ದೇವೆ. ಅವರ ಪ್ರವಾಸ ಯಶಸ್ವಿಯಾಗಲಿದೆ. ಪ್ರಯಾಣದ ವೇಳೆ ದೇಗುಲದ ಬಗ್ಗೆ ಪ್ರಚುರಪಡಿಸಬೇಕು. ಈ ಸನ್ನಿಧಾನಕ್ಕೆ ದೇಶದ ವಿವಿಧ ರಾಜ್ಯಗಳು ಜನರು ಬರುವಂತಾಗಬೇಕು’ ಎಂದರು.

ಕಾರ್ಯದರ್ಶಿ ರಮೇಶ್ ಹೆಗ್ಡೆ, ರಘುರಾಮ ಶೆಟ್ಟಿ, ಗೌರವ್ ಶೇಣವ, ವಿಲ್ಮಾ ಸಚಿನ್, ಪೋಷಕರು, ಹಿತೈಷಿಗಳು ಇದ್ದರು.

ಬೈಕ್ ರೈಡ್‌ ನಡೆಸಿ ಯಶಸ್ವಿಯಾಗಿದ್ದ ಸಚಿನ್, ಈ ಬಾರಿ ಜಿಮ್ನಿ ಕಾರಿನ ಮೂಲಕ ಯಾತ್ರೆ ಆರಂಭಿಸಿದ್ದಾರೆ. ತನ್ನ ಬಾಲ್ಯ ಸ್ನೇಹಿತ ಅಭಿಷೇಕ್ ಶೆಟ್ಟಿ ಸಾತ್ ನೀಡಲಿದ್ದಾರೆ. ಪ್ರತಿದಿನ ಚಿತ್ರೀಕರಣ ನಡೆಸಲಿದ್ದು, ಯಾತ್ರೆಯ ಮಾಹಿತಿಯನ್ನು ಶಟರ್‌ ಬಾಕ್ಸ್ ಫಿಲಂಸ್‌ನಲ್ಲಿ ಮಾಹಿತಿ ನೀಡುವರು. ತಮ್ಮ ಸಂಚಾರಕ್ಕಾಗಿ ಕಾರನ್ನು ವಿನೂತನ ಶೈಲಿಗೆ ಮಾರ್ಪಾಡು ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.