ಪಡುಬಿದ್ರಿ: ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್‌ನಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಬೀಚ್‌ನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಯೋಜನೆ ತಯಾರಿಸುವಂತೆ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸೂಚಿಸಿದರು.
ಅವರು ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ನಡೆದ ಬ್ಲೂ ಫ್ಲಾಗ್ ಬೀಚ್ ನಿರ್ವಹಣಾ ಸಮಿತಿ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾತನಾಡಿದರು.
ಬ್ಲೂ ಫ್ಲಾಗ್ ಬೀಚ್‌ನ ಪೂರ್ವದಲ್ಲಿರುವ ದ್ವೀಪಕ್ಕೆ ತೂಗು ಸೇತುವೆ ನಿರ್ಮಾಣ, ವಾಕಿಂಗ್ ಟ್ರಾಕ್ ನಿರ್ಮಾಣ, ಸಮುದ್ರದಲ್ಲಿ ಜಲ ಕ್ರೀಡೆ, ಅಳಿವೆ ಬಾವಿಯಲ್ಲಿ ಸೀವಾಕ್ ನಿರ್ಮಾಣಕ್ಕೆ ಯೋಜನೆ ತಯಾರಿಸಲು ಸೂಚಿಸಲಾಯಿತು. ಹಾಗೇ ಬೀಚ್‌ನಲ್ಲಿ ಕಸ ವಿಲೇವಾರಿ, ಸ್ವಚ್ಛತೆ, ಮೂಲಸೌಕರ್ಯ ಅಭಿವೃದ್ಧಿ, ಸಮರ್ಪಕವಾದ ಶುಲ್ಕ ವಸೂಲಾತಿ ಬಗ್ಗೆ ಹಾಗೂ ಸಿಬ್ಬಂದಿ ಭದ್ರತೆಯ ಬಗ್ಗೆ ಚರ್ಚಿಸಲಾಯಿತು.
ಬೀಚ್‌ಗೆ ರಸ್ತೆ ಸಂಪರ್ಕ ಕಿರಿದಾಗಿರುವುದರಿಂದ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಮಹಾಲಿಂಗೇಶ್ವರ ದೇವಸ್ಥಾನದಿಂದ ಬೀಚ್‌ವರೆಗೆ 2.8 ಕಿ.ಮೀ. ಹಾಗೂ ಬೀಚ್‌ನಿಂದ ಎರ್ಮಾಳು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ 2.2 ಕಿ.ಮೀ. ರಸ್ತೆ ಅಭಿವೃದ್ಧಿಗೆ ತನ್ನ ಅನುದಾನದಿಂದ ನಿರ್ಮಿಸುವುದಾಗಿ ಶಾಸಕ ಗುರ್ಮೆ ಗುರ್ಮೆ ಸುರೇಶ ಶೆಟ್ಟಿ ಭರವಸೆ ನೀಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ್ ಶೆಟ್ಟಿ, ಕಾರ್ಯದರ್ಶಿ ಗೌರವ ಶೇಣವ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಪಿಡಿಒ ಮಂಜುನಾಥ್ ಶೆಟ್ಟಿ, ಪಡುಬಿದ್ರಿ ಎಸ್‌ಐ ಪ್ರಸನ್ನ ಕುಮಾರ್, ಹೆಜಮಾಡಿ ಕರಾವಳಿ ಕಾವಲು ಪಡೆ ಎಸ್‌ಐ ಪುಷ್ಪಾ, ಕೃಷಿ ಉಪನಿರ್ದೇಶಕ ಚಂದ್ರಶೇಖರ್, ಸುಕುಮಾರ್ ಶ್ರೀನಿಯಾನ್, ಕಾಡಿಪಟ್ಣ ಮೊಗವೀರ ಸಂಘದ ಅಧ್ಯಕ್ಷರು ಅಶೋಕ್ ಸಾಲ್ಯಾನ್, ಯತಿನ್ ಬಂಗೇರ, ಬ್ಲೂ ಫ್ಲಾಗ್ ಬೀಚ್‌ನ ಮ್ಯಾನೇಜರ್ ವಿಜಯ ಶೆಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.