ADVERTISEMENT

ಪಡುಬಿದ್ರಿ | ಪತ್ರಕರ್ತರು ಸಮಾಜಮುಖಿ ಚಿಂತನೆ ಹೊಂದಿರಬೇಕು: ವೈ.ಎನ್.ಶೆಟ್ಟಿ

ಪಡುಬಿದ್ರಿ: ಪತ್ರಿಕಾ ದಿನಾಚರಣೆ, ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿನಿಧಿ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:17 IST
Last Updated 25 ಜುಲೈ 2024, 14:17 IST
ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಚರಣೆ, ಪತ್ರಕರ್ತ ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ ನಡೆಯಿತು
ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಚರಣೆ, ಪತ್ರಕರ್ತ ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ ನಡೆಯಿತು   

ಪಡುಬಿದ್ರಿ: ಪತ್ರಕರ್ತರು ನಿರ್ಭೀತ ವರದಿ ಮಾಡುವ ಎದೆಗಾರಿಕೆ, ನ್ಯಾಯ ನಿಷ್ಠುರವಾಗಿ ಸಮಾಜಮುಖಿ ಚಿಂತನೆಗಳನ್ನು ಮಂಡಿಸುವ ಗುಣ ಹೊಂದಿರಬೇಕು ಎಂದು ತುಳು ಜಾನಪದ ಸಂಶೋಧಕ ವೈ.ಎನ್.ಶೆಟ್ಟಿ ಹೇಳಿದರು.

ಅವರು ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಚರಣೆ, ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ–ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಿ ಉಪನ್ಯಾಸ ನೀಡಿದರು.

ಪತ್ರಕರ್ತರಲ್ಲಿ ಹಲವು ಆದರ್ಶ ವ್ಯಕ್ತಿತ್ವಗಳಿದ್ದಾರೆ. ಅವರ ಪೈಕಿ ಪತ್ರಕರ್ತ ದಿ.ಜಯಂತ್ ಅವರನ್ನು ಪರಿಗಣಿಸಬಹುದು ಎಂದರು.

ADVERTISEMENT

ಪತ್ರಕರ್ತ ರಾಮಚಂದ್ರ ಆಚಾರ್ಯ ಮಾತನಾಡಿ, ಈಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಆಧುನಿಕತೆಗೆ ತಕ್ಕಂತೆ ವಿವಿಧ ರೂಪಗಳನ್ನು ಪಡೆದುಕೊಂಡಿದೆ. ಮಾಧ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ  ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ದಿ.ಜಯಂತ್ ಪಡುಬಿದ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಸಾಪ ಪ್ರಕಟಿಸಿದ ಕಸಪಾ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ನೀಡಿದ್ದ 120 ಕೃತಿಗಳನ್ನು, ದಿನಪತ್ರಿಕೆಗಳನ್ನು ವಿತರಿಸಲಾಯಿತು. 12 ವಿದ್ಯಾರ್ಥಿಗಳಿಗೆ ಪತ್ರಕರ್ತ ಜಯಂತ್ ಪಡುಬಿದ್ರಿ ದತ್ತಿನಿಯನ್ನು ವಿತರಿಸಲಾಯಿತು.

ಪ್ರಭಾರ ಪ್ರಾಂಶುಪಾಲ ಅಜಯ್ ಕುಮಾರ್ ಎಸ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗೀತಾ ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ ಇದ್ದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಸ್ವಾಗತಿಸಿದರು. ಪತ್ರಕರ್ತ ಪುಂಡಲೀಕ ಮರಾಠೆ ನಿರೂಪಿಸಿದರು. ಪೂರ್ವಾಧ್ಯಕ್ಷ ರಾಕೇಶ್ ಕುಂಜೂರು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.