ADVERTISEMENT

ಅನೀತಿ ವಿರುದ್ಧ ಸಿಡಿದೇಳುತ್ತಿದ್ದ ಪಟ್ಟಾಭಿರಾಮ: ಸಾಹಿತಿ ಚ.ಸರ್ವಮಂಗಳ

ಪಟ್ಟಾಭಿರಾಮ ಸೋಮಯಾಜಿ ಸ್ಮರಣೆ ಕಾರ್ಯಕ್ರಮದಲ್ಲಿ ಚ.ಸರ್ವಮಂಗಳ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 6:24 IST
Last Updated 6 ಜುಲೈ 2024, 6:24 IST
ಕಾರ್ಯಕ್ರಮದಲ್ಲಿ ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು
ಕಾರ್ಯಕ್ರಮದಲ್ಲಿ ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು   

ಉಡುಪಿ: ಅನೀತಿ ಕಂಡರೆ ಸಿಡಿದೆದ್ದು ಪ್ರತಿಭಟಿಸುತ್ತಿದ್ದ ಪಟ್ಟಾಭಿರಾಮ ಸೋಮಯಾಜಿ ಅವರು ಏಕಾಂಗಿಯಾಗಿಯೇ ಸಾಮಾಜಿಕ ಜವಾಬ್ದಾರಿಯನ್ನು ಹೆಗಲಲ್ಲಿ ಹೊತ್ತುಕೊಳ್ಳುತ್ತಿದ್ದರು ಎಂದು ಸಾಹಿತಿ ಚ.ಸರ್ವಮಂಗಳ ಹೇಳಿದರು.

ಅಪರಾಜಿತೆ ಪ್ರಕಾಶನ ಮೈಸೂರು ಹಾಗೂ ಪಟ್ಟಾಭಿರಾಮ ಸೋಮಯಾಜಿ ಅವರ ಸ್ನೇಹಿತರ ಬಳಗದ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನ ‌‘ಆ್ಯನ್‌ ಆಲ್ಫಾಬೆಟಿಕಲ್ ಆಲ್ಟರ್ಕೇಶನ್’ ಬಿಡುಗಡೆ ಹಾಗೂ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೀತಿಯ ವಿರುದ್ಧ ಹೋರಾಡಿದ್ದಕ್ಕೆ ಅವರನ್ನು ನಕ್ಸಲ್‌, ಅರ್ಬನ್‌ ನಕ್ಸಲ್‌ ಎಂದು ಕರೆದರು. ಸದಾ ಹಿಂಸೆಯನ್ನು ವಿರೋಧಿಸುತ್ತಿದ್ದ ಅವರು ನಕ್ಸಲ್ ಆಗಲು ಸಾಧ್ಯವಿಲ್ಲ ಎಂದರು.

ADVERTISEMENT

ಪಟ್ಟಾಭಿರಾಮ ಅವರು ಎಲ್ಲರ ಜೊತೆ ಸೈದ್ಧಾಂತಿಕವಾಗಿ ಹತ್ತಿರವಾಗುತ್ತಿದ್ದರು. ಆದರೆ ಇಸಂಗಳು, ಜಾತಿ ಪರ ಒಲವು ಇರುವವರು ಬಂದಾಗ ಅವರಿಂದ ದೂರವಿರುತ್ತಿದ್ದರು ಮತ್ತು ಸದಾ ಒಳಮುಖವಾಗಿಯೇ ಇರುತ್ತಿದ್ದರು ಎಂದು ಹೇಳಿದರು.

ಎಲ್ಲೆಲ್ಲಿ ಆಡಳಿತದ ಕಪಿಮುಷ್ಟಿ ಇತ್ತೊ ಅಲ್ಲಿ ಪಟ್ಟಾಭಿರಾಮ ಅವರು ನಾಗರ ಹಾವಿನಂತೆ ಬುಸ್‌, ಬುಸ್‌ ಎನ್ನುತ್ತಿದ್ದರು. ಆದರೆ ಯಾರಿಗೂ ಕೆಡುಕು ಮಾಡಿದ ವ್ಯಕ್ತಿಯಲ್ಲ ಎಂದು ಬಣ್ಣಿಸಿದರು.

ಜಾತಿಯ ಗೋಡೆ ಕಟ್ಟುತ್ತಿದ್ದವರನ್ನು ಕಂಡರೆ ಸದಾ ಸಿಡಿದೇಳುತ್ತಿದ್ದ ಪಟ್ಟಾಭಿರಾಮ ಅವರು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಕೈಯಿಂದ ಹಣ ಹಾಕಿ ಹಮ್ಮಿಕೊಳ್ಳುತ್ತಿದ್ದರು. ಸಾಯುವ ತನಕ ಅವರು ತಮ್ಮ ಬುದ್ಧಿಯನ್ನು ಭ್ರಷ್ಟವಾಗಲು ಬಿಟ್ಟಿಲ್ಲ ಎಂದು ಪ್ರತಿಪಾದಿಸಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಮಾತನಾಡಿ, ಪಟ್ಟಾಭಿರಾಮ ಅವರಿಗೂ ಎಂಜಿಎಂ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ. ಅವರು ಇಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು. ಅವರ ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದೂ ತಿಳಿಸಿದರು.

ಮೀನಾ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಾಥ ಹೊಸೂರು ಉಪಸ್ಥಿತರಿದ್ದರು. ಹಯವದನ ಮೂಡುಸಗ್ರಿ ವಂದಿಸಿದರು. ಶಿವಸ್ವಾಮಿ ರಂಗಗೀತೆ ಹಾಡಿದರು.

ಪಟ್ಟಾಭಿರಾಮ ಸೋಮಯಾಜಿ ಅವರ ಕವನಗಳಲ್ಲಿ ಬರುವ ವಿಡಂಬನೆಯ ಹಿಂದೆ ವಿಮರ್ಶನಾತ್ಮಕ ದೃಷ್ಟಿಕೋನವೂ ಇದೆ. ಅಲ್ಲಿ ವ್ಯಾಕರಣ ಮುಖ್ಯವಾಗಲ್ಲ. ಪ್ರಾಸದ ಹಂಗೂ ಇಲ್ಲ
ಕಮಲಾಕರ ಕಡವೆ ಅನುವಾದಕ ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.