ಉಡುಪಿ: ಮಾಂಸದಂಗಡಿಗಳು ಮಾತ್ರವಲ್ಲ, ಮನೆಯಲ್ಲಿಯೂ ಮಕ್ಕಳ ಎದುರು ಪ್ರಾಣಿವಧೆ ಮಾಡಬಾರದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶಾಲಾ ಶಿಕ್ಷಣದಲ್ಲಿ ಮೌಲ್ಯಯುತ ಶಿಕ್ಷಣ ವರ್ಧನೆಯ ಕುರಿತು ಬೆಂಗಳೂರಿನಲ್ಲಿ ಈಚೆಗೆ ನಡೆದ ಧರ್ಮ ಗುರುಗಳ ಸಭೆಯಲ್ಲಿ ನೀಡಿದ್ದ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ರಕ್ತ ಚಿಮ್ಮುವಂತೆ, ಜೋತಾಡುವ ಸ್ಥಿತಿಯಲ್ಲಿ ಪ್ರಾಣಿಗಳನ್ನು ಮಾರ್ಗದ ಬದಿ ನೇತು ಹಾಕುವುದು ಸರಿಯಲ್ಲ ಎಂದರು.
ಮಾಂಸದಂಗಡಿಗಳಲ್ಲಿ ವಧೆ ಮಾಡಿದ ಪ್ರಾಣಿಗಳನ್ನು ನೋಡಿದರೆ ಮಕ್ಕಳ ಮನಸ್ಸು ವಿಕಾರವಾಗುವ ಆತಂಕಗಳು ಇರುತ್ತವೆ. ಕ್ರೌರ್ಯ, ಮಾಂಸ, ಗಾಯ, ಹೊಡೆತ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದರು.
ಮಕ್ಕಳು ಸಾತ್ವಿಕ ಆಹಾರ ತಿನ್ನಬೇಕು ಎಂದು ಹೇಳಿದ್ದೇನೆಯೇ ಹೊರತು ಮಾಂಸಾಹಾರ ಸೇವನೆ ಬೇಡ ಎಂದು ಹೇಳಿಲ್ಲ. ಸಸ್ಯಹಾರ ಮತ್ತು ಮಾಂಸಹಾರ ಎರಡರಲ್ಲೂ ಸಾತ್ವಿಕ ಹಾಗೂ ತಮಸ ಗುಣಗಳಿವೆ. ಮನಸ್ಸನ್ನು ಉದ್ವಿಗ್ನಗೊಳಿಸುವ ಥಾಮಸ ಆಹಾರ ಮಕ್ಕಳಿಗೆ ಸೂಕ್ತವಲ್ಲ. ಒಳ್ಳೆಯ ಭಾವನೆ ಮೂಡುವಂತಹ ಸಾತ್ವಿಕ ಆಹಾರ ನೀಡಬೇಕು ಎಂದರು.
ಮಕ್ಕಳು ಇಷ್ಟಪಡುವ ಕಾರ್ಟೂನ್‌ಗಳ ಮೂಲಕ ನೈತಿಕ ಮೌಲ್ಯಗಳನ್ನು ತಿಳಿಸಬೇಕು. ಶಾಲೆಗಳಲ್ಲಿ ಮೌಲ್ಯಯತ ದೃಶ್ಯಗಳಲ್ಲಿ ಮಕ್ಕಳು ಅಭಿನಯಿಸಲು ವೇದಿಕೆ ಕಲ್ಪಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.