ಬೆಂಗಳೂರು: ಕೃಷ್ಣೈಕ್ಯರಾಗಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಪಾರ್ಥಿವ ಶರೀರಕ್ಕೆ ವಿದ್ಯಾಪೀಠದಲ್ಲಿಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ,ಸಿರಿಗೆರೆ ಮಠದ ಶ್ರೀಗಳು, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ,ಗೃಹ ಸಚಿವ ಬಸವರಾಜ ಬೊಮ್ಮಾಯಿಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು.
ಬಳಿಕ ಮಾಧ್ವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಿದವು.
ವಿಶ್ವೇಶ ತೀರ್ಥರ ಆಪ್ತ ಶಿಷ್ಯ ಮತ್ತು ವಿದ್ಯಾಪೀಠದ ಪ್ರಾಚಾರ್ಯಕೃಷ್ಣರಾಜ ಕುತ್ಪಾಡಿ ಧಾರ್ಮಿಕ ವಿಧಿಗಳ ಮಾರ್ಗದರ್ಶನ ನೀಡಿದರು.
ಇದಕ್ಕೂ ಮುನ್ನ, ಸಂಜೆ ಅನೇಕ ಗಣ್ಯರು ಸೇರಿದಂತೆನೂರಾರು ಭಕ್ತರು ನಗರದನ್ಯಾಷನಲ್ ಕಾಲೇಜು ಮೈದಾನದಲ್ಲಿ ಪೇಜಾವರ ವಿಶ್ವೇಶ ತೀರ್ಥರ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದಿದ್ದಾರೆ.
ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಮೂಲಕ ಭಕ್ತರು ಅಂತಿಮ ನಮನ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೇಜಾವರ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತುವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಅವರು ಶ್ರೀಗಳ ಪಾರ್ಥಿವ ಶರೀರಕ್ಕೆ ತುಳಸಿ ಹಾರ ಹಾಕಿ ಗೌರವ ಸಮರ್ಪಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ, ಯು.ಟಿ. ಖಾದರ್, ಎನ್.ಎ. ಹ್ಯಾರಿಸ್, ರಾಮಲಿಂಗಾರೆಡ್ಡಿ, ಸಚಿವರಾದ ವಿ.ಸೋಮಣ್ಣ, ಕೆ.ಎಸ್. ಈಶ್ವರಪ್ಪ, ಕನಕ ಗುರುಪೀಠದ ಸ್ವಾಮೀಜಿ, ಪಿಜಿಆರ್ ಸಿಂಧ್ಯ, ನಟ ಶ್ರೀನಾಥ್, ಅವಿನಾಶ್, ಮಾಳವಿಕ ಅವಿನಾಶ್ ಸೇರಿದಂತೆ ಹಲವು ಗಣ್ಯರು ಪೇಜಾವರ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.
ಸುಮಾರು 2 ಗಂಟೆ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಿಗಿ ಬಂದೋಬಸ್ತ್: ಬಂದೋಬಸ್ತ್ ಮತ್ತು ಸಂಚಾರ ನಿರ್ವಹಣೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. 460 ಸಂಚಾರ ಪೊಲೀಸ್ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ವಿದ್ಯಾಪೀಠದ ಸುತ್ತಮುತ್ತಲ 500 ಮೀಟರ್ ವ್ಯಾಪ್ತಿಯಲ್ಲಿ ಯಾವ ವಾಹನಕ್ಕೂ ಪ್ರವೇಶ ನಿರ್ಬಂಧಿಸಲಾಗಿದೆ.
ಸಂಜೆ 6 ಗಂಟೆಗೆ ವಿದ್ಯಾಪೀಠದಲ್ಲಿ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ ಎಂದು ವಿದ್ಯಾಪೀಠದ ವ್ಯವಸ್ಥಾಪಕರಾದ ಕೇಶವ ಆಚಾರ್ಯ ತಿಳಿಸಿದ್ದಾರೆ.
ಇದಕ್ಕೂ ಮುನ್ನಉಡುಪಿಯ ಅಜ್ಜರಕಾಡು ಮೈದಾನದಿಂದ ಪೇಜಾವರ ವಿಶ್ವೇಶ ತೀರ್ಥರ ಪಾರ್ಥಿವ ಶರೀರವನ್ನುವಾಯುಪಡೆಯಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಬಳಿಕ ತೆರೆದ ವಾಹನದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದನ್ಯಾಷನಲ್ ಕಾಲೇಜು ಮೈದಾನಕ್ಕೆ ತರಲಾಗಿತ್ತು.
ಸ್ವಾಮೀಜಿ ನಿಧನ: ಗೋವಿಂದ ನಾಮ ಮೊಳಗಿಸಿದ ಭಕ್ತರು
ಉಡುಪಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನರಾಗಿದ್ದಾರೆ ಎಂದು ಪೇಜಾವರ ಮಠ ಮುಂಜಾನೆ 9.20ಕ್ಕೆ ಘೋಷಣೆ ಮಾಡಿತು. ಭಕ್ತರು ‘ವಿಶ್ವೇಶ ತೀರ್ಥ ಸ್ವಾಮೀಜಿಗೆ ಗೋವಿಂದ’ ಎಂದು ಗೋವಿಂದ ನಾಮ ಮೊಳಗಿಸಿದರು.
ವಿಶ್ವೇಶ ತೀರ್ಥರ ಪಾರ್ಥಿವ ಶರೀರವನ್ನುಕೃಷ್ಣಮಠದ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಕೊನೆಯ ಬಾರಿಗೆಶ್ರೀಕೃಷ್ಣನ ದರ್ಶನ ಮಾಡಿಸಲಾಯಿತು.
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ ಆಶಯದಂತೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನ ನಿರ್ಮಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಬೆಂಗಳೂರಿಗೆ ಏರ್‌ಲಿಫ್ಟ್ ಮೂಲಕ ಸ್ವಾಮೀಜಿ ಪಾರ್ಥಿವ ಶರೀರ ತರಲಾಗುವುದು. ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಮಾಡಿದೆ.
ಅಜ್ಜರಕಾಡು ಮೈದಾನದಲ್ಲಿ ಅಂತಿಮ ದರ್ಶನ
ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಒಟ್ಟು 750 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಮೂರು ದಿನ ಶೋಕ: ಯಡಿಯೂರಪ್ಪ
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.
ಮಣಿಪಾಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದರು.
ತಮ್ಮ ಮತ್ತು ಸ್ವಾಮೀಜಿ ಒಡನಾಟ ನೆನಪಿಸಿಕೊಂಡು ಭಾವುಕರಾದ ಯಡಿಯೂರಪ್ಪ, ‘ನಾನು ಸ್ವಾಮೀಜಿ ಜೊತೆಗೆಕಳೆದ 50 ವರ್ಷಗಳಿಂದಜೊತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಅವರು ಅಯೋಧ್ಯೆಯಲ್ಲಿರಾಮನ ವಿಗ್ರಹ ಪ್ರತಿಷ್ಠಾಪನೆಗೆ ಹೋದಾಗ ಅವರ ಜೊತೆಗೆ ನಾನೂ ಇದ್ದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬ ಕನಸು ಅವರದ್ದಾಗಿತ್ತು. ಈಗ ಸುಪ್ರೀಂ ಕೋರ್ಟ್ ಸಹ ಅದೇ ತೀರ್ಪು ನೀಡಿದೆ. ಆದರೆ ರಾಮಮಂದಿರ ನೋಡಲು ಅವರಿಗೆ ಆಗಲಿಲ್ಲ’ ಎಂದು ಹೇಳಿದರು.
‘ನಮ್ಮ ದೇಶದಇತಿಹಾಸದಲ್ಲಿ ಯಾವುದೇ ಸ್ವಾಮೀಜಿ ಹೀಗೆ ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿದ್ದು ನಾನು ನೋಡಿಲ್ಲ. ಆಸ್ಪತ್ರೆ ಸೇರುವ ಎರಡು ದಿನ ಹಿಂದೆಯೂ ಪ್ರವಾಸ ಮಾಡಿದ್ದರು. ಇಂಥ ಅಪರೂಪದ ಯತಿವರೇಣ್ಯ ಸಿಗುವುದು ಕಷ್ಟ. ಅಂಥ ಮಹಾನ್ ಪೂಜ್ಯರನ್ನು ಕಳೆದುಕೊಂಡು ದೇಶ ಬಡವಾಗಿದೆ’ ಎಂದು ವಿಷಾದಿಸಿದರು.
ಕೃಷ್ಣನಲ್ಲಿ ಸೇರಿಕೊಂಡ ವಿಶ್ವೇಶ ತೀರ್ಥರು: ದೇವೇಗೌಡ
‘ಉಡುಪಿಯ ಅಷ್ಟಮಠಗಳ ಪೈಕಿ ಅತ್ಯಂತ ಪ್ರಗತಿಪರವಾಗಿದ್ದವರು ವಿಶ್ವೇಶ ತೀರ್ಥ ಸ್ವಾಮೀಜಿ. ಮಹಾನುಭಾವ ಶ್ರೀಕೃಷ್ಣನಲ್ಲಿಯೇ ಅವರು ಸೇರಿಕೊಂಡಿದ್ದಾರೆ. ಅವರ ಬಗ್ಗೆ ನನಗೆ ಅಪಾರಗೌರವವಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಮರಿಸಿಕೊಂಡರು.
‘ಸಮಾಜದಲ್ಲಿ ಅನೇಕ ಪ್ರಗತಿಶೀಲ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.ಹರಿಜನರ ಅಭಿವೃದ್ಧಿಗಾಗಿ ದುಡಿಯುತ್ತಿದ್ದರು. ಮುಸ್ಲಿಮರಿಗಾಗಿಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು. ಇಂಥ ಕೆಲಸಗಳನ್ನು ನಾವು ಮರೆಯಲು ಆಗುವುದಿಲ್ಲ’ ಎಂದು ದೇವೇಗೌಡರು ನುಡಿದರು.
‘ಉಡುಪಿಯಲ್ಲಿ ಆರು ಪರ್ಯಾಯ ಮಾಡಿದಮಹಾನುಭಾವರು ಅವರು. ನನ್ನ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು’ ಎಂದು ನೆನಪಿಸಿಕೊಂಡರು.
ಮಠದ ಆವರಣದಲ್ಲಿ ಉಡುಪಿ ಅಷ್ಟಮಠಗಳ ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ವಿಶ್ವೇಶ ತೀರ್ಥರ ಪೂರ್ವಾಶ್ರಮದ ತಂಗಿ ವಾಸಂತಿಯವರುಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ದರ್ಶನ ಪಡೆದರು.ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಪೇಜಾವರ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿ ದರ್ಶನ ಪಡೆದರು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಮಠದಲ್ಲಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಹ ಮಠದಲ್ಲಿ ಇದ್ದರೆ.
ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಇಂದು ಮುಂಜಾನೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯವಿರುವ ವಿಶೇಷ ಆಂಬುಲೆನ್ಸ್‌ನಲ್ಲಿ ಶ್ರೀಗಳನ್ನು ಮಠಕ್ಕೆ ಕರೆತರಲಾಯಿತು. ದಾರಿಯುದ್ದಕ್ಕೂ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಠದತ್ತಸಾವಿರಾರು ಭಕ್ತರು ಬರುತ್ತಿದ್ದಾರೆ. ಎಲ್ಲರನ್ನೂ ಮಾರ್ಗಮಧ್ಯೆಯೇ ತಡೆಯಲಾಗುತ್ತಿದೆ.
ಬೆಂಗಳೂರಿಗೆ ಹೊರಟ ಮಠದ ಶಿಷ್ಯರು
ಪೇಜಾವರ ಮಠದ ಪೂಜಾ ವಿಗ್ರಹಗಳೊಂದಿಗೆ ಕೆಲ ಶಿಷ್ಯರು ವಾಹನದಲ್ಲಿ ಬೆಂಗಳೂರಿಗೆ ಹೊರಟರು. ಭೀಮನಕಟ್ಟೆ ಮಠದ ರಘುವೀರ ತೀರ್ಥರು ಪೇಜಾವರ ಮಠಕ್ಕೆ ಆಗಮಿಸಿದರು.
ಪಲಿಮಾರು ಶ್ರೀಗಳ ಭೇಟಿ
ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥಶ್ರೀಗಳನ್ನು ಕಣ್ತುಂಬಿಕೊಳ್ಳಲು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ತುಳಸಿ ಹಾರದೊಂದಿಗೆ ಪೇಜಾವರ ಮಠಕ್ಕೆ ಬಂದಿದ್ದಾರೆ. ಸ್ವಾಮೀಜಿ ಭೇಟಿಯ ನಿರೀಕ್ಷೆಯಲ್ಲಿದ್ದಾರೆ.
ಇನ್ನೊಂದು ಪರ್ಯಾಯ ಮಾಡ್ತಾರೆ ಆಂತ ಆಸೆಯಿತ್ತು: ಶೋಭಾ ಕರಂದ್ಲಾಜೆ
‘ಪೇಜಾವರ ಅಧೋಕ್ಷಜ ಮಠದ ಕಿರಿಯ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥರ ಬಳಿ ಹಿರಿಯ ಶ್ರೀಗಳಾದ ವಿಶ್ವೇಶ ತೀರ್ಥರು ತಮ್ಮ ಕೊನೆಯ ಆಸೆ ತಿಳಿಸಿದ್ದರು. ಇದೀಗ ವಿಶ್ವ ಪ್ರಸನ್ನ ತೀರ್ಥರ ಸೂಚನೆಯಂತೆ ವಿಶ್ವೇಶ ತೀರ್ಥರನ್ನು ಮಠಕ್ಕೆ ಕರೆತರಲಾಗಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
‘ಚಿಕಿತ್ಸೆ ಮುಂದುವರಿಸುವುದರಿಂದ ಯಾವುದೆ ಲಾಭವಿಲ್ಲ ಎಂದು ವೈದ್ಯರು ಹೇಳಿದ್ದರು. ಆಮ್ಲಜನಕ ಸೇರಿದಂತೆ ಎಲ್ಲಜೀವರಕ್ಷಕ ಸೌಲಲಭ್ಯಗಳೊಂದಿಗೆ ಸ್ವಾಮೀಜಿಯನ್ನು ಮಠಕ್ಕೆ ಕರೆತರಲಾಗಿದೆ. ಅವರು ನೂರ್ಕಾಲ ಬಾಳಬೇಕು ಎನ್ನುವುದು ನಮ್ಮೆಲ್ಲರ ನಿರೀಕ್ಷೆ. ಶ್ರೀಕೃಷ್ಣ ಏನು ಮಾಡ್ತಾನೋ ಗೊತ್ತಿಲ್ಲ’ ಎಂದು ಶೋಭಾ ನುಡಿದರು’.
‘ಎರಡು ವರ್ಷಗಳ ಹಿಂದೆಪರ್ಯಾಯವಾದಾಗ ವಿಶ್ವೇಶ ತೀರ್ಥರು ಪಲಿಮಾರು ಮಠಕ್ಕೆ ಕೃಷ್ಣಪೂಜೆಯ ಅವಕಾಶ ಬಿಟ್ಟುಕೊಟ್ಟಿದ್ದರು.ಅವರು ಇನ್ನೊಂದು ಪರ್ಯಾಯ ಕಾಣಲಿ ಎಂದು ನಾವೆಲ್ಲರೂ ಪ್ರಾರ್ಥಿಸಿದ್ದೆವು. ಈಗ ಪರಿಸ್ಥಿತಿ ನೋಡಿದರೆ ಹೀಗಾಗಿದೆ’ ಎಂದು ಅವರು ವಿಷಾದಿಸಿದರು.
ಉಡುಪಿ ಸ್ತಬ್ಧ
ವಿಶ್ವೇಶ ತೀರ್ಥ ಸ್ವಾಮೀಜಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಉಡುಪಿ ಪಟ್ಟಣದ ಅಕ್ಷರಶಃ ಸ್ಪಬ್ಧವಾಗಿದೆ. ಕೃಷ್ಣ ದೇಗುಲದ ನಾಲ್ಕೂ ಬಾಗಿಲುಗಳನ್ನು ಮುಚ್ಚಲಾಗಿದೆ. ರಥ ಬೀದಿಯ ಅಂಗಡಿಗಳು ಬಾಗಿಲು ತೆರೆದಿಲ್ಲ. ವಿಶ್ವೇಶ ತೀರ್ಥರ ಶಿಷ್ಯೆ ಉಮಾ ಭಾರತಿ ಪೇಜಾವರ ಮಠಕ್ಕೆ ಬಂದಿದ್ದು, ಅಳುತ್ತಾ ಕುಳಿತಿದ್ದಾರೆ.
ಸಂಸ್ಥಾನ ಪೂಜೆ
’ಮಠದತ್ತ ಬರಬೇಡಿ, ನೀವಿರುವ ಸ್ಥಳದಲ್ಲಿಯೇ ಪ್ರಾರ್ಥನೆ ಮಾಡಿ’ ಎಂದು ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ವಿನಂತಿಸಿದ್ದಾರೆ. ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಪೇಜಾವರ ಮಠದಲ್ಲಿ ಸಂಸ್ಥಾನ ಪೂಜೆ ಆರಂಭಿಸಿದ್ದಾರೆ. ಪೇಜಾವರ ಮಠದ ನೂರಾರು ಭಕ್ತರು ಭಾಗಿಯಾಗಿದ್ದಾರೆ.
ಮಠಕ್ಕೆ ಸ್ಥಳಾಂತರ
ಮಣಿಪಾಲ ಆಸ್ಪತ್ರೆಯಲ್ಲಿ ನ್ಯುಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಮಿದುಳುನಿಷ್ಕ್ರಿಯವಾಗುವ ಹಂತಕ್ಕೆ ತಲುಪಿದ್ದು, ಭಾನುವಾರ ಬೆಳಿಗ್ಗೆ ಅವರನ್ನು ಜೀವರಕ್ಷಕ ಸಾಧನಗಳ ಸಮೇತ ಮಠಕ್ಕೆ ಸ್ಥಳಾಂತರಿಸಲಾಯಿತು.
ಹಲವು ದಿನಗಳಿಂದ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಶನಿವಾರ ಸಂಜೆಯ ವೇಳೆಗೆ ಚೇತರಿಸಿಕೊಳ್ಳಲಾರದಷ್ಟು ಗಂಭೀರ ಸ್ಥಿತಿ ತಲುಪಿತ್ತು.
ಈ ಕಾರಣದಿಂದ ಅವರ ಆಸೆಯಂತೆಯೇ ಕೊನೆಯ ದಿನಗಳನ್ನು ಮಠದಲ್ಲಿಯೇ ಕಳೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಪೇಜಾವರ ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನತೀರ್ಥರ ನೇತೃತ್ವದಲ್ಲಿ ಸ್ಥಳಾಂತರ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.