ಉಡುಪಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದುವರೆಗೂ ಜಿಲ್ಲೆಯಲ್ಲಿ 1,50,593 ರೈತರಿಗೆ ₹258.99 ಕೋಟಿ ಕೇಂದ್ರ ಸರ್ಕಾರದ ಅನುದಾನ ಹಾಗೂ ₹127.24 ಕೋಟಿ ರಾಜ್ಯ ಸರ್ಕಾರದ ಅನುದಾನ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತು ಪಡೆಯಬೇಕಾದರೆ ಇ–ಕೆವೈಸಿ ಕಡ್ಡಾಯವಾಗಿರುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇ–ಕೆವೈಸಿ ಮಾಡಿಸಿಕೊಳ್ಳದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬಿಡುಗಡೆಯಾಗುವುದಿಲ್ಲ. ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನೆರವು ಪಡೆಯುತ್ತಿರುವ ಶೇ 72ರಷ್ಟು ಅಂದರೆ 1,09,191 ರೈತರು ಮಾತ್ರ ಇ ಕೆವೈಸಿ ಮಾಡಿಸಿಕೊಂಡಿದ್ದಾರೆ.
ಶೇ 28ರಷ್ಟು 43,365 ರೈತರು ಇ ಕೆವೈಸಿ ಮಾಡಿಸಿಕೊಂಡಿರುವುದಿಲ್ಲ. ಇ ಕೆವೈಸಿ ಮಾಡಿಸಿಕೊಳ್ಳಲು ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿಸಿಕೊಂಡಿರುವ ರೈತರು https://pmkisan.gov.in ವೆಬ್‌ಸೈಟ್‌ಗೆ ಭೇಟಿನೀಡಿ ಆಧಾರ್ ನಂಬರ್ ಹಾಗೂ ಮೊಬೈಲ್ ಒಟಿಪಿ ದಾಖಲಿಸಿ ಇ ಕೆವೈಸಿ ಮಾಡಿಸಿಕೊಳ್ಳಬಹುದು.
ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿಸಿಕೊಳ್ಳದ ರೈತರು ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿನೀಡಿ ಬಯೋಮೆಟ್ರಿಕ್ ಮೂಲಕವೂ ಇಕೆವೈಸಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ರೈತರು ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿನೀಡಬಹುದು ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಅಸಂಘಟಿತ ಆಹಾರ ಸಂಸ್ಕರಣ ಉದ್ಯಮಗಳ ನಿಯಮಬದ್ಧಗೊಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಣ್ಣ ಉದ್ಯಮಿಗಳು, ವೈಯಕ್ತಿಕ ಉದ್ದಿಮೆಗಳು, ಮಾಲೀಕತ್ವದ ಸಂಸ್ಥೆಗಳು, ಪಾಲುದಾರಿಕೆ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು, ಎನ್‌ಜಿಒಗಳು, ಸ್ವಸಹಾಯಕ ಸಂಘಗಳು, ಸಹಕಾರಿ ಸಂಘಗಳು ಯೋಜನೆಯ ಲಾಭ ಪಡೆಯಬಹುದು.
ಯೋಜನೆಯ ಲಾಭ ಪಡೆದುಕೊಳ್ಳಲು ಉಡುಪಿ ಜಿಲ್ಲೆಗೆ ಹೆಚ್ಚಿನ ಅವಕಾಶವಿದ್ದು, ಆಸಕ್ತರು ತೆಂಗಿನ ಎಣ್ಣೆ ತಯಾರಿಕೆ, ಒಣ ಮೀನು ತಯಾರಿಕೆ, ಬೇಕರಿ ಉತ್ಪನ್ನಗಳ ತಯಾರಿಕೆ, ಹಪ್ಪಳ, ಸಾಗರೋತ್ಪನ್ನ ಉತ್ಪನ್ನ, ಉಪ್ಪಿನಕಾಯಿ, ಹಾಲು ಆಧಾರಿತ ಉತ್ಪನ್ನ, ಕುಕ್ಕುಟೋದ್ಯಮಕ್ಕೆ ಯೋಜನೆಯಡಿ ನೆರವು ಪಡೆಯಬಹುದು ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.