ADVERTISEMENT

ಪ್ರಧಾನಿ ಜೊತೆ ಸಂವಾದಕ್ಕೆ ಜಿಲ್ಲೆಯ ಇಬ್ಬರು ಆಯ್ಕೆ

ಮಾರ್ಚ್‌ 7ರಂದು ಜನೌಷಧಿ ದಿನಾಚರಣೆ: ವಿಡಿಯೋ ಸಂವಾದದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:26 IST
Last Updated 5 ಮಾರ್ಚ್ 2021, 15:26 IST

ಉಡುಪಿ: ಮಾರ್ಚ್ 7ರಂದು ನಡೆಯುವ ಜನೌಷಧಿ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉಡುಪಿ ಜಿಲ್ಲೆಯ ಇಬ್ಬರು ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿರುವ ಜನೌಷಧ ಕೇಂದ್ರದ ಮಾಲೀಕರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಹಾಗೂ ಸುಧೀರ್ ಪೂಜಾರಿ ಅವರು ಪ್ರಧಾನಿ ಜತೆ ಮಾತನಾಡಲಿದ್ದಾರೆ.

7ರಂದು ಬೆಳಿಗ್ಗೆ 10.30ಕ್ಕೆ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಮೈದಾನದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ADVERTISEMENT

ಜನೌಷಧ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 3 ವರ್ಷಗಳಿಂದ ಮಾರ್ಚ್‌ 7ರಂದು ಜನೌಷಧಿ ದಿನವನ್ನಾಗಿ ಕೇಂದ್ರ ಸರ್ಕಾರ ಆಚರಿಸುತ್ತಿದೆ. ಪ್ರತಿವರ್ಷ ಜನೌಷಧಿ ದಿನದಂದು ಪ್ರಧಾನಿ ಯೋಜನೆಯ ಫಲಾನುಭವಿಗಳ ಜತೆ ಸಂವಾದ ನಡೆಸುತ್ತಾರೆ. ಅದರಂತೆ ಈ ವರ್ಷ ಜಿಲ್ಲೆಯ ಇಬ್ಬರು ಸಂವಾದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಬ್ರಹ್ಮಾವರದಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ಸುಂದರ ಪೂಜಾರಿ ಜನೌಷಧಿ ಕೇಂದ್ರವನ್ನು ತೆರೆದಿದ್ದರು. ಈ ಕೇಂದ್ರದಲ್ಲಿ ಪ್ರತಿ ತಿಂಗಳು ₹ 4 ರಿಂದ 5 ಲಕ್ಷದಷ್ಟು ಜನೌಷಧ ಮಾರಾಟವಾಗುತ್ತಿದ್ದು, ಪ್ರತಿದಿನ ಸರಾಸರಿ 100 ಜನರು ಜನೌಷಧ ಖರೀದಿಸುತ್ತಿದ್ದಾರೆ.

ಜನೌಷಧಿ ಯೋಜನೆಯ ಫಲಾನುಭವಿ ವಿಭಾಗದಲ್ಲಿ ಆಯ್ಕೆಯಾಗಿರುವ ಕೋಟದ ಮಣೂರು ಪಡುಕರೆಯ ಅಂಗವಿಲಕ ಸುಧೀರ್ ಪೂಜಾರಿಗೆ ವೈದ್ಯರು ಏಳು ಬಗೆಯ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದರು. ತಿಂಗಳಿಗೆ ₹ 2,500 ಮಾತ್ರೆಗಳಿಗೆ ವೆಚ್ಚಾಗುತ್ತಿತ್ತು. ಇದರಿಂದ ಬೇಸತ್ತ ಸುಧೀರ್ ಪೂಜಾರಿ ಆರು ತಿಂಗಳಿನಿಂದ ಕೆಲವು ಮಾತ್ರೆಗಳನ್ನು ಜನೌಷಧಿ ಕೇಂದ್ರದಿಂದ ಖರೀದಿಸುತ್ತಿದ್ದು, ಕಡಿಮೆ ದರಕ್ಕೆ ಸಿಗುತ್ತಿದೆ.

ಡಾ. ಕಾಮತ್‌ಗೆ ಉತ್ತಮ ಚಿಕಿತ್ಸಕ ಪ್ರಶಸ್ತಿ: ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ಪ್ರಸಕ್ತ ವರ್ಷದ ‘ಉತ್ತಮ ಜನೌಷಧಿ ಚಿಕಿತ್ಸಕ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿರುವ ದೇಶದ ಬೆರಳೆಣಿಕೆ ವೈದ್ಯರ ಪೈಕಿ ಡಾ.ಪದ್ಮನಾಭ ಕಾಮತ್ ಕೂಡ ಒಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.