ಉಡುಪಿ: ಮಳೆ, ಗಾಳಿ, ಚಳಿ ಲೆಕ್ಕಿಸದೆ ಪ್ರತಿದಿನ ತಪ್ಪದೇ ಓದುಗರ ಮನೆಗಳಿಗೆ ದಿನ ಪತ್ರಿಕೆಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವ ಪತ್ರಿಕೆ ಹಂಚಿಕೆ ಮಾಡುವವರನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಪತ್ರಿಕೆ ಹಂಚಿಕೆ ಮಾಡುವವರನ್ನು ಬೀದಿ ಬದಿ ವ್ಯಾಪಾರಿಗಳು ಎಂದು ಪರಿಗಣಿಸಿ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಲಾಗಿದ್ದು ಅರ್ಹರು ಪ್ರಯೋಜನ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆಗೆ ಬಳಸಿಕೊಳ್ಳಬಹುದು ಎನ್ನುತ್ತಾರೆ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ.
ಯೋಜನೆಯ ಲಾಭ ಪಡೆಯುವುದು ಹೇಗೆ?
ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಮೂಲಕ ಪಿಎಂ ಸ್ವನಿಧಿ ಯೋಜನೆಯ ಲಾಭವನ್ನು ಪತ್ರಿಕೆ ಹಂಚಿಕೆ ಮಾಡುವವರು ಪಡೆದುಕೊಳ್ಳಬಹುದು. ಸ್ಥಳೀಯಾಡಳಿತ ಕಚೇರಿಗಳಿಗೆ ತೆರಳಿ ಪತ್ರಿಕೆ ಹಂಚಿಕೆ ಮಾಡುತ್ತಿರುವುದಕ್ಕೆ ಸೂಕ್ತ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿ ಅಧಿಕಾರಿಗಳಿಂದ ಶಿಫಾರಸು ಪ್ರಮಾಣಪತ್ರ (ಲೆಟರ್ ಆಫ್ ರೆಕಮಂಡೇಶನ್) ಪಡೆದುಕೊಳ್ಳಬೇಕು.
ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪತ್ರಿಕೆ ಹಂಚಿಕೆದಾರರ ಸಮೀಕ್ಷೆ ನಡೆಸಿ ಅರ್ಹರನ್ನು ಗುರುತಿಸಿ ಪಟ್ಟಿ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗಷ್ಟೆ ಸೀಮಿತವಾಗಿದ್ದ ಪಿ.ಎಂ ಸ್ವನಿಧಿ ಯೋಜನೆ ಪತ್ರಿಕೆ ಹಂಚಿಕೆ ಮಾಡುವವರಿಗೆ ದೊರೆಯಲಿದೆ.ಪಿಂಜಾರ, ಲೀಡ್ ಬ್ಯಾಂಕ್ ಮ್ಯಾನೇಜರ್
ಬಳಿಕ ಸ್ಥಳೀಯಾಡಳಿತದ ಮೂಲಕವೇ ಶಿಫಾರಸು ಪ್ರಮಾಣಪತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಗಳು ಫಲಾನುಭವಿಗಳು ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ರವಾನೆಯಾಗಲಿದ್ದು ನಿರ್ಧಿಷ್ಟ ಅವಧಿಯಲ್ಲಿ ಇತ್ಯರ್ಥಗೊಂಡು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಾಲದ ಹಣ ಜಮೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಎಷ್ಟು ಸಾಲ ಸಿಗಲಿದೆ?
ಪಿಎಂ ಸ್ವನಿಧಿ ಯೋಜನೆಯಡಿ ಮೊದಲ ಬಾರಿಗೆ ₹ 10,000, ಎರಡನೇ ಬಾರಿಗೆ ₹ 20,000 ಮೂರನೇ ಬಾರಿಗೆ ₹ 50,000ದವರೆಗೆ ಸಾಲ ಪಡೆಯಬಹುದು. ಬ್ಯಾಂಕ್‌ಗಳು ನಿರ್ಧಿಷ್ಟ ಪ್ರಮಾಣದ ಬಡ್ಡಿ ವಿಧಿಸಿದರೂ ಸರ್ಕಾರ ಶೇ 7ರಷ್ಟು ಬಡ್ಡಿ ಮರುಪಾವತಿ ಮಾಡುವುದರಿಂದ ಬಹುತೇಕ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗಲಿದೆ.
ಮೊದಲ ಸಲ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ ಎರಡನೇ ಸಲ ಸಾಲ ಸಿಗಲಿದೆ. ಎರಡನೇ ಸಲ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡಿದರೆ ಮೂರನೇ ಬಾರಿ ಸಾಲ ದೊರೆಯಲಿದೆ. ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆಗೆ ಯೋಜನೆ ಸಹಕಾರಿಯಾಗಲಿದೆ ಎನ್ನುತ್ತಾರೆ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ.
ಉಡುಪಿ ಮುಂಚೂಣಿ
ಸ್ವನಿಧಿ ಯೋಜನೆ ಅನುಷ್ಠಾನದಲ್ಲಿ ಉಡುಪಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಪ್ರಸಕ್ತ ವರ್ಷ ಮೊದಲ ಬಾರಿ ಸಾಲ ನೀಡಲು ನಿಗದಿಪಡಿಸಲಾಗಿದ್ದ 2,819 ಗುರಿಗೆ ಪ್ರತಿಯಾಗಿ 4237 ಮಂದಿಗೆ ತಲಾ 10,000 ಸಾಲ ಮಂಜೂರು ಮಾಡಲಾಗಿದ್ದು ಶೇ 150ರಷ್ಟು ಗುರಿ ಸಾಧನೆಯಾಗುವ ಮೂಲಕ ರಾಜ್ಯದಲ್ಲಿ ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ.
ಎರಡನೇ ಬಾರಿ (₹ 20,000) ಸಾಲ ನೀಡಲು ನಿಗದಿಯಾಗಿದ್ದ 2,101 ಗುರಿಗೆ ಪ್ರತಿಯಾಗಿ 2059 ಮಂದಿಗೆ ಸಾಲ ನೀಡಲಾಗಿದ್ದು ಶೇ 91.50ರಷ್ಟು ಗುರಿ ಮುಟ್ಟಿದ್ದು ರಾಜ್ಯದಲ್ಲಿ 10ನೇ ಸ್ಥಾನದಲ್ಲಿದೆ. ಮೂರನೇ ಬಾರಿ ಸಾಲ ನೀಡಲು (₹ 50,000) ನಿಗದಿಪಡಿಸಲಾಗಿದ್ದ 419 ಗುರಿಗೆ ಪ್ರತಿಯಾಗಿ 285 ಮಂದಿಗೆ ಸಾಲ ಮಂಜೂರಾಗಿದ್ದು ಶೇ 68 ಸಾಧನೆಯ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ 19ನೇ ಸ್ಥಾನದಲ್ಲಿದೆ.
ಸ್ವನಿಧಿ ಸಾಲದ ವಿವರ
ಮೊದಲ ಸಲದ ಸಾಲ – ₹10000
ಎರಡನೇ ಸಲದ ಸಾಲ – ₹20000
ಮೂರನೇ ಸಲದ ಸಾಲ – ₹50000
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.