ADVERTISEMENT

‘ತುಳು: ಇನ್ನಷ್ಟು ಸಂಶೋಧನೆಯಾಗಲಿ‌‌‌‌’

ಪೊಳಲಿ ಶೀನಪ್ಪ ಹೆಗ್ಗಡೆ, ಎಸ್‌. ಆರ್‌. ಹೆಗ್ಡೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:02 IST
Last Updated 23 ಜೂನ್ 2024, 5:02 IST
ಬೆನೆಟ್ ಜಿ. ಅಮ್ಮನ್ನ ಅವರಿಗೆ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್‌. ಹೆಗ್ಡೆ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು
ಬೆನೆಟ್ ಜಿ. ಅಮ್ಮನ್ನ ಅವರಿಗೆ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್‌. ಹೆಗ್ಡೆ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು   

ಉಡುಪಿ: ಎಂಟನೇ ಶತಮಾನದ ಕಾಲದಲ್ಲೇ ತುಳು ಭಾಷೆಯು ಸಮೃದ್ಧವಾಗಿತ್ತು. ಲಿಪಿಯನ್ನು ಕೆಲವರಷ್ಟೇ ಬಳಸುತ್ತಿದ್ದರು ಎನ್ನುವುದು ಸರಿಯಲ್ಲ ಈ ಕುರಿತು ಇನ್ನಷ್ಟು ಅಧ್ಯಯನವಾಗಬೇಕು ಎಂದು ಸಂಶೋಧಕ, ಮಂಗಳೂರಿನ ಥಿಯಾಲಾಜಿಕಲ್‌ ಕಾಲೇಜಿನ ಪತ್ರಾಗಾರ ವಿಭಾಗದ ನಿವೃತ್ತ ಸಹಾಯಕ ಬೆನೆಟ್ ಜಿ.ಅಮ್ಮನ್ನ ಪ್ರತಿಪಾದಿಸಿದರು.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಳಲಿ ಶೀನಪ್ಪ ಹೆಗ್ಗಡೆ, ಎಸ್.ಆರ್‌.ಹೆಗ್ಡೆ ಪ್ರಶಸ್ತಿ ಪ್ರದಾನ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ವೆಂಕಟರಾಜ ಪುಣಿಂಚಿತ್ತಾಯ ಅವರು ತುಳು ಲಿಪಿ ಬೆಳಕಿಗೆ ತರುವ ಮೂಲಕ ತುಳು ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ತುಳು ಲಿಪಿ ಎಷ್ಟೋ ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂದರು.

ADVERTISEMENT

ನಾನು ಪತ್ರಾಗಾರದಲ್ಲಿ ಕೆಲಸ ಮಾಡುತ್ತಿದ್ದಾಗ ನೂರಾರು ಸಂಶೋಧಕರು, ವಿದ್ಯಾರ್ಥಿಗಳು ನನ್ನ ಬಳಿಗೆ ಬಂದು ಸಂಶೋಧನೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರಿಂದ ಸ್ಫೂರ್ತಿಗೊಂಡು ಸಂಶೋಧನಾ ಕ್ಷೇತ್ರಕ್ಕಿಳಿದೆ, ಕೃತಿ ರಚನೆಯಲ್ಲಿ ತೊಡಗಿಸಿಕೊಂಡೆ ಎಂದು ಹೇಳಿದರು.

ಥಿಯಾಲಾಜಿಕಲ್‌ ಕಾಲೇಜಿನ ಪತ್ರಾಗಾರದಲ್ಲಿ ಕರಾವಳಿಗೆ ಸಂಬಂಧಪಟ್ಟ ಸಾಕಷ್ಟು ಹಸ್ತಪ್ರತಿಗಳಿವೆ. ಅಲ್ಲಿನ ಗ್ರಂಥಾಲಯದಲ್ಲಿ 40 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಸಂಶೋಧಕರು ಪ್ರಯೋಜನ ಪಡೆದುಕೊಳ್ಳಬೇಕು. ಹಸ್ತಪ್ರತಿ, ತಾಳೆಗರಿ, ಪ್ರಾಚೀನ ದಾಖಲೆಗಳ ಸಂರಕ್ಷಣೆ ಕಾರ್ಯ ಇನ್ನಷ್ಟು ನಡೆಯಬೇಕು ಎಂದು ಬೆನೆಟ್‌ ಹೇಳಿದರು.

ಚೇಳ್ಯಾರುಗುತ್ತು ಎಸ್‌.ಆರ್.ಹೆಗ್ಡೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷೆ ಇಂದಿರಾ ಹೆಗ್ಡೆ ಮಾತನಾಡಿ, ಸೃಜನಶೀಲ ಕವಿಗಳಿಗೆ ನೀಡುವ ಪ್ರಶಸ್ತಿಯ ಮೊತ್ತ ಏರಿಕೆಯಾಗುತ್ತ ಹೋಗುತ್ತಿದೆ. ಆದರೆ ಸಂಶೋಧಕರಿಗೆ ನೀಡುವ ಪ್ರಶಸ್ತಿಯ ಮೊತ್ತ ಏರಿಕೆಯಾಗಿಲ್ಲ. ಈ ಕಾರಣಕ್ಕೆ ಆ ಕ್ಷೇತ್ರದವರಿಗೆ ಒತ್ತು ನೀಡಿ ಈ ಪ್ರಶಸ್ತಿ ನೀಡಲಾಗಿದೆ ಎಂದರು.

ಇಂದು ಸಂಶೋಧಕರ ಪುಸ್ತಕಗಳನ್ನು ಮಾರುಕಟ್ಟೆಗೆ ತಲುಪಿಸುವವರೇ ಇಲ್ಲ. ಸಂಶೋಧಕರಿಗೆ ಬೆಂಬಲ ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು.

ಅಜ್ಜರಕಾಡು ಡಾ.ಜಿ.ಶಂಕರ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಪ್ರಾಧ್ಯಾಪಕ ರಾಮದಾಸ ಪ್ರಭು ಅವರು ‌‌‘ತುಳುನಾಡಿನ ಪ್ರಭುತ್ವ ಹಾಗೂ ಧಾರ್ಮಿಕ ಪಂಥಗಳ‌‌‌’ ಬಗ್ಗೆ ಉಪನ್ಯಾಸ ನೀಡಿದರು.

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಮುಖ್ಯಸ್ಥೆ ಸಾಯಿಗೀತ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ, ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು ಮಾತನಾಡಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಬಿ.ಜಗದೀಶ್‌ ಶೆಟ್ಟಿ ಸ್ವಾಗತಿಸಿದರು. ಪದ್ಮಾವತಿ ಭಟ್‌ ಪ್ರಾರ್ಥನೆ ಹಾಡಿದರು. ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ತುಂಗ ವಂದಿಸಿದರು.

Quote - ತುಳು ಭಾಷೆಗಾಗಿ ಮಿಷನರಿಗಳು ಅಪಾರ ಕೊಡುಗೆ ನೀಡಿದ್ದಾರೆ. ಬಾಸೆಲ್‌ ಮಿಷನ್‌ನ ಮುದ್ರಣಾಲಯದಲ್ಲಿ ಮೊದಲು ಮುದ್ರಣಗೊಂಡಿದ್ದೇ ಪಾಡ್ದನ ಬೆನೆಟ್ ಜಿ. ಅಮ್ಮನ್ನ ನಿವೃತ್ತ ಪ್ರಾಧ್ಯಾಪಕ

ಸಿರಿ ಬಗ್ಗೆ ಹೊಸ ಶೋಧ’

ಬೆನೆಟ್ ಜಿ. ಅಮ್ಮನ್ನ ಅವರು ಸಿರಿ ಬಗ್ಗೆ ಹೊಸ ಶೋಧ ನಡೆಸಿದ್ದಾರೆ. ಈ ಕುರಿತ ಕೃತಿ ಅವರ ಸಂಪಾದಕತ್ವದಲ್ಲಿ ಶೀಘ್ರ ಹೊರಬರಲಿದೆ. ಹೊಸ ಶೋಧದ ಪ್ರಕಾರ ಸಿರಿಯ ಪಯಣ ಗೇರುಸೊಪ್ಪೆಯಿಂದ ಆರಂಭವಾಗುತ್ತದೆ. ಇದುವರೆಗೆ ಸಂಗ್ರಹಿಸಿರುವ ಯಾವ ಪಾಡ್ದನದಲ್ಲೂ ಗೇರುಸೊಪ್ಪೆಯ ಉಲ್ಲೇಖವಿರಲಿಲ್ಲ. ಈ ಕುರಿತು ಶಿವಳ್ಳಿ ಬ್ರಾಹ್ಮಣರ ಭಾಷೆಯಲ್ಲಿ ಬರೆದ ಕೃತಿಯು ಲಭ್ಯವಾಗಿದೆ. ಗೇರುಸೊಪ್ಪೆ ಮತ್ತು ತುಳುನಾಡಿಗಿರುವ ಸಂಬಂಧದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುವ ಅಗತ್ಯವಿದೆ ಎಂದು ಎಂದು ಇಂದಿರಾ ಹೆಗ್ಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.