ADVERTISEMENT

ಕಲ್ಮತ್ ಮಸೀದಿ ಜಾಗ ವಶಕ್ಕೆ ಪಡೆದಿರುವುದು ಅನ್ಯಾಯ: ಪಾಪ್ಯುಲರ್ ಫ್ರಂಟ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 16:10 IST
Last Updated 25 ಜೂನ್ 2021, 16:10 IST

ಉಡುಪಿ: ಕಲ್ಮತ್ ಮಸೀದಿಗೆ ಮಂಜೂರಾಗಿದ್ದ ಜಾಗವನ್ನು ಸರ್ಕಾರ ಮರಳಿ ವಶಕ್ಕೆ ಪಡೆದಿರುವುದು ಅನ್ಯಾಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ನಝೀರ್ ಅಹ್ಮದ್ ದೂರಿದ್ದಾರೆ.

‘ಕೊಡವೂರು ಗ್ರಾಮದ ಐತಿಹಾಸಿಕ ಕಲ್ಮತ್ ಮಸೀದಿ 1908ರಿಂದಲೇ ಸರ್ಕಾರದಿಂದ ತಸ್ತಿಕ್‌ ಪಡೆಯುತ್ತಿದ್ದು ಈಗಲೂ ಮುಂದುವರಿದಿದೆ. 1993ರಲ್ಲಿ ಜಾಗವು ವಕ್ಫ್ ಬೋರ್ಡ್‌ನಲ್ಲಿ ನೋಂದಣಿಯಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲೇ ಕಾನೂನಾತ್ಮಕ ಪುರಾವೆಗಳ ಆಧಾರದಲ್ಲಿ ಗೆಜೆಟ್ ನೋಟಿಫಿಕೇಷನ್ ಆಗಿದೆ’.

‘ಸೂಕ್ತ ದಾಖಲೆಗಳಿದ್ದರೂ ಮಸೀದಿ ಜಾಗವನ್ನು ಮರಳಿ ಪಡೆದಿರುವ ಸರ್ಕಾರದ ಕ್ರಮ ಸರಿಯಲ್ಲ. ಇದರಿಂದ ಧಾರ್ಮಿಕ ಅಲ್ಪಸಂಖ್ಯಾತರ ಇತರ ಆರಾಧನಾಲಯಗಳ ಮೇಲೆ ಹಕ್ಕು ಸ್ಥಾಪಿಸಲು ಮತ್ತು ಇಲ್ಲಿನ ಸೌಹಾರ್ದ ಕೆಡಿಸಲು ಸ್ಥಾಪಿತ ಹಿತಾಸಕ್ತಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಸಂಘಪರಿವಾರ ಕಾನೂನು ವ್ಯವಸ್ಥೆಯನ್ನು ಧಿಕ್ಕರಿಸಿ ನಿರಂತರವಾಗಿ ಶಾಂತಿ ಕದಡಲು ಯತ್ನಿಸುತ್ತಿದೆ. ಆಡಳಿತ ವ್ಯವಸ್ಥೆಯು ಸಂಘಪರಿವಾರದ ಮರ್ಜಿಗೆ ಮಣಿಯುತ್ತಿದೆ. ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಕಾನೂನುಬಾಹಿರವಾಗಿ ಮಸೀದಿ ಜಾಗವನ್ನು ಮರಳಿ ಪಡೆದಿದ್ದು, ಇಂತಹ ದುರುದ್ದೇಶಪೂರಿತ ಕ್ರಮಗಳು ಮುಸ್ಲಿಂ ಸಮುದಾಯ ಮತ್ತು ಆರಾಧನಾಲಯಗಳನ್ನು ಅಭದ್ರತೆ ತಳ್ಳಲಿದೆ. ಪಾಪ್ಯುಲರ್ ಫ್ರಂಟ್ ಮಸೀದಿ ಜಾಗಕ್ಕೆ ಸಂಬಂಧಿಸಿದ ಕಾನೂನು ಹೋರಾಟವನ್ನು ಬೆಂಬಲಿಸುತ್ತದೆ’ ಎಂದು ನಝೀರ್ ಅಹ್ಮದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.