ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿ ಎಂಆರ್‌ಐ ಸೌಲಭ್ಯ ಇದೆಯೇ, ಮಕ್ಕಳಿಗೆ ಉಚಿತ ಲಸಿಕೆ ಹಾಕಲಾಗುವುದೇ, ಆಯುಷ್ಮಾನ್ ಕಾರ್ಡ್‌ಗೆ ಹೆಚ್ಚು ಹಣ ಪಡೆಯಲಾಗುತ್ತಿದೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸೇವೆ ಸಿಗುತ್ತಿಲ್ಲ..ಹೀಗೆ, ಬುಧವಾರ ಉಡುಪಿ ಕಚೇರಿಯಲ್ಲಿ ನಡೆದ ‘ಪ್ರಜಾವಾಣಿ ಫೋನ್ ಇನ್’ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಗೆ ಸಂಬಂಧಿಸಿದ ದೂರುಗಳನ್ನು ಹೇಳಿಕೊಂಡರು.
ಜಿಲ್ಲಾ ಸರ್ಜನ್ ಮಧೂಸೂದನ್ ನಾಯಕ್ ನಾಗರಿಕರ ಅಹವಾಲುಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದರು. ಜತೆಗೆ, ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುವ ಸೇವೆಗಳನ್ನು ತಿಳಿಸಿದರು.
ಹೆಬ್ರಿಯಿಂದ ಸುರೇಶ್ ಶೆಟ್ಟಿ ಕರೆಮಾಡಿ, ಆಯುಷ್ಮಾನ್ ಕಾರ್ಡ್‌ಗಳಿಗೆ ಹೆಚ್ಚು ಹಣ ಪಡೆಯಲಾಗುತ್ತಿದೆ ಎಂದು ದೂರಿದರು. ‘ಲ್ಯಾಮಿನೇಟೆಡ್ ಆಯುಷ್ಮಾನ್ ಕಾರ್ಡ್‌ಗೆ ₹ 35, ಝೆರಾಕ್ಸ್ ಪ್ರತಿಗೆ ₹ 10 ಪಡೆಯಬೇಕು ಎಂಬ ನಿಯಮವಿದೆ. ಹೆಚ್ಚಿನ ಹಣ ಪಡೆಯುತ್ತಿದ್ದರೆ, ದೂರು ನೀಡಿ ಎಂದರು.
ಕುಂದಾಪುರದ ರಮೇಶ್ ಹಾಗೂ ಕಾಪುವಿನ ಬಾಲಕೃಷ್ಣ ಮಾತನಾಡಿ, ಜಿಲ್ಲಾ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸೌಲಭ್ಯ ಸಿಗುತ್ತಿಲ್ಲ. ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರೆ ಒಳಿತು ಎಂಬ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಜನ್, ತಾಲ್ಲೂಕು ಆಸ್ಪತ್ರೆ ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿಸುವಂತೆ ಸೂಚಿಸಲಾಗಿದೆ. ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ 24 ಗಂಟೆಗಳ ಉಚಿತ ಸಿಟಿ ಸ್ಕ್ಯಾನ್ ಸೌಲಭ್ಯವಿದ್ದು, ಕಾರ್ಕಳ, ಕುಂದಾಪುರದಿಂದ ನಿತ್ಯ ರೋಗಿಗಳು ಸಿಟಿಸ್ಕ್ಯಾನ್ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಅಳವಡಿಕೆಗೆ ಕೊಠಡಿ ಸೇರಿದಂತೆ ಮೂಲಸೌಲಭ್ಯಗಳು ಸಿದ್ಧವಾಗಿದ್ದು, ಯಂತ್ರ ಪೂರೈಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರವೇ ಎಂಆರ್‌ಐ ಸೇವೆ ಆರಂಭವಾಗಲಿದೆ’ ಎಂದು ಭರವಸೆ ನೀಡಿದರು.
ಉಡುಪಿಯಿಂದ ತಾರಾನಾಥ ಮೇಸ್ತ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಅಭಾವ ಇದೆ ಎಂದು ದೂರಿದರು. ಆಸ್ಪತ್ರೆಯಲ್ಲಿ ಸದ್ಯ ರಕ್ತದ ಸಮಸ್ಯೆ ಇಲ್ಲ. ರಕ್ತದಾನ ಶಿಬಿರಗಳಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹಿಸಲಾಗುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಮದುವೆ, ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ರಕ್ತ ಸಂಗ್ರಹ ಕಡಿಮೆಯಾಗುತ್ತದೆ. ನೆಗೆಟಿವ್ ಗ್ರೂಪ್‌ನ ರಕ್ತದ ಅಲಭ್ಯತೆ ಆಗಾಗ ಕಾಣಿಸಿಕೊಳ್ಳುತ್ತದೆ ಎಂದರು.
ಹಿರಿಯಡಕದಿಂದ ಅಶೋಕ್, ಬನ್ನಂಜೆಯಿಂದ ಲಾವಣ್ಯ ಕರೆಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಹಾಕಲಾಗುವ ಲಸಿಕೆಗಳ ವಿವರ ಕೇಳಿದರು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ಹಾಕಲಾಗುವುದು. ಕಾಲಕಾಲಕ್ಕೆ ಹಾಕಬೇಕಾದ ಲಸಿಕೆಗಳ ಬಗ್ಗೆ ಮಕ್ಕಳ ವೈದ್ಯರಿಂದ ಮಾಹಿತಿ ಪಡೆದು ಹಾಕಿಸಿ ಎಂದು ಸಲಹೆ ನೀಡಿದರು.
ಕೋಟೇಶ್ವರದ ವೆಂಟಕ ರಮಣ ಐತಾಳ್ ಹಾಗೂ ಹೆಬ್ರಿಯ ಅಕ್ಷತ್ ಕರೆ ಮಾಡಿ ನರ ಸಂಬಂಧಿ ಹಾಗೂ ಮೂಳೆ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಾಗ ವೈದ್ಯರು ಸಿಗುತ್ತಿಲ್ಲ ಎಂದರು. ಎಲ್ಲ ವಿಭಾಗಕ್ಕೂ ತಲಾ ಒಬ್ಬರು ತಜ್ಞ ವೈದ್ಯರು ಇದ್ದು, ರಜೆ ಹಾಕಿದಾಗ ಸಮಸ್ಯೆಯಾಗುತ್ತದೆ. ವೈದ್ಯರ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಉಡುಪಿಯ ರಾಘವೇಂದ್ರ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಅನುಮತಿ ಇದೆಯೇ ಎಂದು ಪ್ರಶ್ನಿಸಿದರು. ಕೆಲಸದ ಅವಧಿ ಮುಗಿದ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಅವಕಾಶವಿದೆ. ಕೆಲಸದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರೆ ಕ್ರಮ ಜರುಗಿಸಬಹುದು ಎಂದರು.
ಹೆಬ್ರಿಯ ಅಭಿಷೇಕ್ ಮಾತನಾಡಿ, ಅನಂತ ಪದ್ಮನಾಭ ದೇವಸ್ಥಾನದ ಬಳಿ ಚರಂಡಿಯಲ್ಲಿ ಹೊಲಸು ತುಂಬಿದ್ದು, ಸೊಳ್ಳೆಕಾಟ ಹೆಚ್ಚಾಗಿದ್ದು ಸಾಂಕ್ರಮಿಕ ರೋಗಗಳ ಭೀತಿ ಎದುರಾಗಿದೆ ಎಂದರು. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ಸಲ್ಲಿಸಿ. ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಮಧುಸೂದನ್ ನಾಯಕ್ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ (ಹೊರರೋಗಿ ವಿಭಾಗ)
ವರ್ಷ– ರೋಗಿಗಳು
2017–1,20,137
2018–1,84,825
2019–1,86,382
2020 (ಜನವರಿ)–15447
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ (ಒಳರೋಗಿ ವಿಭಾಗ)
ವರ್ಷ– ರೋಗಿಗಳು
2017–7,384
2018–10125
2019–9661
2020(ಜನವರಿ)–849
ಶಸ್ತ್ರಚಿಕಿತ್ಸೆಯ ವಿವರ
ವರ್ಷ– ರೋಗಿಗಳು
2016–1327
2017–1716
2018–1390
2019–2019
2020(ಜನವರಿ)174
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.