ಬೈಂದೂರು: ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆ, ತಾಲ್ಲೂಕು ಆಡಳಿತ ಸಹಭಾಗಿತ್ವದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಸಾಂಸ್ಕೃತಿಕ ಸಂಭ್ರಮ ‘ಬೈಂದೂರು ಉತ್ಸವ’ ನವೆಂಬರ್ 1, 2 ಹಾಗೂ 3ರಂದು ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
100ಕ್ಕೂ ಅಧಿಕ ಸ್ಟಾಲ್‌ಗಳು, ಆಟಿಕೆಯ ಅಮ್ಯೂಸ್‌ಮೆಂಟ್ ಪಾರ್ಕ್, 20,000 ಚದರ ಅಡಿಯ ಟೆಂಟ್, 6 ಸಾವಿರಕ್ಕೂ ಅಧಿಕ ಜನರು ಕೂರಬಹುದಾದ ಆಸನಗಳು, ಬೃಹತ್ ವೇದಿಕೆ, ಧ್ವನಿ, ಬೆಳಕು ವ್ಯವಸ್ಥೆ ಸಿದ್ಧಗೊಂಡಿದೆ.
ಜಿಲ್ಲೆಯ ತುತ್ತ ತುದಿಯಲ್ಲಿ ವಿಶಾಲ ವ್ಯಾಪ್ತಿ ಹೊಂದಿರುವ ಬೈಂದೂರು ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆ ಮೂಲಕ ಅಭಿವೃದ್ಧಿ ಪರಿಕಲ್ಪನೆಯ ಉದ್ದೇಶದಿಂದ, ಜಾಗತಿಕ ಮಟ್ಟದಲ್ಲಿ ಕ್ಷೇತ್ರದವರನ್ನು ಒಗ್ಗೂಡಿಸುವ ಚಿಂತನೆಯಲ್ಲಿ ಉತ್ಸವ ಆಯೋಜಿಸಲಾಗಿದೆ. ಇಲ್ಲಿನ ಪ್ರವಾಸೋದ್ಯಮ ಅವಕಾಶಗಳನ್ನು ಪರಿಚಯಿಸುವುದು ಆ ಮೂಲಕ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಬೈಂದೂರಿಗೆ ಕರೆತರುವುದು, ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ನೀಡುವುದು ಮೂಲ ಉದ್ದೇಶ. ಉದ್ಯೋಗ, ಆರೋಗ್ಯ, ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರ, ಶಿಕ್ಷಣ ಕ್ರಾಂತಿ, ನೆಲಮೂಲ ಆಚರಣೆ ಇದರ ಆಶಯವಾಗಿದೆ.
1ರಂದು ಬೆಳಿಗ್ಗೆ ತಲ್ಲೂರಿನಿಂದ ಬೈಂದೂರಿಗೆ ಟ್ಯಾಬ್ಲೊ ಜಾಥಾ ಹೊರಡಲಿದೆ. ಉಪ್ಪುಂದದಿಂದ ಬೈಂದೂರಿಗೆ ಭಜನಾ ಜಾಥಾ ನಡೆಯಲಿದೆ. ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿ, ಧಾರ್ಮಿಕ ಕೇಂದ್ರಗಳಿಂದ ಟ್ಯಾಬ್ಲೊ ಸಿದ್ದಗೊಂಡಿವೆ. ಧಾರ್ಮಿಕ ಗೋಷ್ಠಿ, ಸಿನಿ ತಾರೆಯರ ಸಂಗಮ, ಬೀಚ್ ಉತ್ಸವ, ಮೇಘನಾದ, ಸಾಂಸ್ಕೃತಿಕ ವೈಭವ, ಕಂಬಳ, ಗೊಂಬೆಯಾಟ, ಯಕ್ಷಗಾನ, ಆರೋಗ್ಯ ಮೇಳ, ರಂಗಗೀತೆ, ನೃತ್ಯೋತ್ಸವ, ಗಾನಲೋಕ, ಲೈವ್ ಸಂಗೀತ ಹಬ್ಬ, ಜಾದೂ ಲೋಕ, ಯೋಗ, ಭರತನಾಟ್ಯ, ಗೆಜ್ಜೆನಾದ, ಜಾಂಬೂರಿ, ದೇಹದಾರ್ಢ್ಯ ಪ್ರದರ್ಶನ, ನಾದ ನೂಪುರ, ಮೀನುಗಾರಿಕೆ, ಕೃಷಿ, ವೈದ್ಯರು, ವಕೀಲರು, ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಗೋಷ್ಠಿ ನಡೆಯಲಿವೆ. ಜನಪದ ಹಬ್ಬ, ಗೋಪೂಜೆ, ದೀಪ ವೈಭವ, ಸ್ಕೂಬಾ ಡೈವ್, ಆಹಾರ ಮೇಳ, ಕಾರ್ಟೂನ್ ಹಬ್ಬ, ಮನರಂಜನಾ ಪಾರ್ಕ್, ಕರಕುಶಲ ಮೇಳ, ವಿಜ್ಞಾನ ಮೇಳ, ಶಿಕ್ಷಣ ಮೇಳ ಇರಲಿವೆ. ರಥಬೀದಿ, ಕಾಲೇಜು ರಸ್ತೆ ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದೆ. ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಮೀನುಗಾರಿಕೆ ಸಚಿವ ಎಸ್. ಮಂಕಾಳ ವೈದ್ಯ, ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗ್ಡೆ ಕಾಗೇರಿ, ಕ್ಯಾ.ಬೃಜೇಶ್ ಚೌಟ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಕೆ. ಪ್ರತಾಪಚಂದ್ರ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ, ಬಿ.ಎಂ. ಸುಕುಮಾರ ಶೆಟ್ಟಿ ಮೊದಲಾದವರು ಭಾಗವಹಿಸುವರು.
ಕ್ಷೇತ್ರದ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಜನರ ಸಹಕಾರದೊಂದಿಗೆ ‘ಬೈಂದೂರು ಉತ್ಸವ’ ಆಯೋಜಿಸಲಾಗಿದೆ. ಭಾಗವಹಿಸಲು ಪ್ರವೇಶ ಶುಲ್ಕವಿದೆ ಎಂಬ ಸುದ್ದಿ ಹರಡುತ್ತಿದೆ. ಎಲ್ಲಾ ಕಾರ್ಯಕ್ರಮಗಳು ಉಚಿತವಾಗಿದ್ದು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.–ಗುರುರಾಜ ಗಂಟಿಹೊಳೆ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.