ADVERTISEMENT

ಉಡುಪಿ: ಹುಲಿಗಳ ಹೆಜ್ಜೆಗಾಗಿ ಹದಗೊಳ್ಳುತ್ತಿದೆ ತಾಸೆ

ಭರದಿಂದ ನಡೆಯುತ್ತಿದೆ ಸಾಂಪ್ರದಾಯಿಕ ವಾದ್ಯೋಪಕರಣಗಳ ತಯಾರಿ

ನವೀನ್‌ಕುಮಾರ್‌ ಜಿ.
Published 13 ಆಗಸ್ಟ್ 2024, 6:12 IST
Last Updated 13 ಆಗಸ್ಟ್ 2024, 6:12 IST
<div class="paragraphs"><p>ತಾಸೆ ತಯಾರಿಯಲ್ಲಿ ನಿರತರಾಗಿರುವುದು</p></div>

ತಾಸೆ ತಯಾರಿಯಲ್ಲಿ ನಿರತರಾಗಿರುವುದು

   

ಉಡುಪಿ: ಹುಲಿ ವೇಷವಿರಲಿ, ಭೂತಕೋಲವಿರಲಿ ತಾಸೆಯ ಸದ್ದಿಲ್ಲದೆ ತುಳುನಾಡಿನಲ್ಲಿ ಯಾವುದೇ ಉತ್ಸವಗಳು ರಂಗೇರುವುದಿಲ್ಲ.

ಕರಾವಳಿಯಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಹುಲಿವೇಷವು ಅತ್ಯಂತ ಮಹತ್ವದ ಕಲಾಪ್ರಕಾರ. ಇವುಗಳ ಅಬ್ಬರದ ಲಯಬದ್ಧ ಕುಣಿತಕ್ಕೆ ತಾಸೆ ಮತ್ತು ಡೋಲುಗಳ ಬಡಿತ ಇರಲೇ ಬೇಕು.

ADVERTISEMENT

ಈ ವಾದ್ಯೋಪಕರಣಗಳ ಬಡಿತದ ಸದ್ದು ಕೇಳಿದರೆ ಇಲ್ಲಿನ ಜನರ ಮೈನವಿರೇಳುತ್ತದೆ. ಅಂತಹ ಮೋಡಿ ಮಾಡುವ ಶಕ್ತಿ ಅದಕ್ಕಿದೆ. ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆ ಹುಲಿವೇಷದ ತಂಡಗಳು ಸಿದ್ಧತೆ ನಡೆಸುವುದರ ಜೊತೆಗೆ ತಾಸೆ, ಡೋಲುಗಳನ್ನು ತಯಾರಿಸುವವರಿಗೂ ಬಿಡುವಿಲ್ಲದ ಕೆಲಸ ಇರುತ್ತದೆ.

ಅಷ್ಟಮಿಗೆ ಎರಡು ತಿಂಗಳುಗಳಿರುವಾಗಲೇ ತಾಸೆ ಮತ್ತು ಡೋಲುಗಳ ತಯಾರಿ ಕಾರ್ಯ ಚುರುಕುಗೊಳ್ಳುತ್ತದೆ. ಉಡುಪಿಯಲ್ಲಿ ಕಲ್ಮಾಡಿ, ಅಲೆವೂರು ಮೊದಲಾದೆಡೆ ಇವುಗಳ ತಯಾರಿ ಕಾರ್ಯ ಗರಿಗೆದರುತ್ತದೆ. ಅಷ್ಟಮಿಯ ನಂತರ ಹಬ್ಬಗಳು ಸಾಲು ಸಾಲಾಗಿ ಬರುತ್ತಿದ್ದಂತೆ ತಾಸೆ, ಡೋಲು ಬಡಿಯುವವರಿಗೂ ಎಲ್ಲಿಲ್ಲದ ಬೇಡಿಕೆ ಕುದುರುತ್ತದೆ.

ಉಡುಪಿಯ ಕಷ್ಣ ಮಠದಲ್ಲೂ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿರುವ ಕಾರಣ ಈ ಸಂದರ್ಭದಲ್ಲಿ ಹುಲಿವೇಷದ ತಂಡಗಳು ಸಕ್ರಿಯವಾಗುತ್ತವೆ.

ಮಲ್ಪೆಯ ಕಲ್ಮಾಡಿಯ ಬಗ್ಗು ಪಂಜುರ್ಲಿ ದೈವಸ್ಥಾನದಲ್ಲಿ ತಂಡವೊಂದು ತಾಸೆ, ಡೋಲು ನಿರ್ಮಾಣ ಕಾರ್ಯದಲ್ಲಿ ತಲ್ಲೀನವಾಗಿದೆ. ಈ ತಂಡವು ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರಿನಿಂದ ತಾಸೆಗೆ ಬೇಕಾದ ಫೈಬರ್‌ ಹೊದಿಕೆಯನ್ನು ಮತ್ತು ಮೂಡುಬಿದಿರೆಯಿಂದ ತಾಮ್ರದ ಕಲಶವನ್ನು ತರಿಸಿಕೊಂಡು ಡೋಲು, ತಾಸೆ ತಯಾರಿಸುತ್ತಿವೆ.

‘ಒಂದು ತಾಸೆಯನ್ನು ಸಿದ್ಧಪಡಿಸಿದ ಬಳಿಕ ಅದರ ಮೇಲ್ಭಾದ ಸುತ್ತಲಿನ ಹೊದಿಕೆ ಒಣಗಲು 20 ದಿವಸ ಬೇಕು. ಹುಲಿವೇಷದ ತಂಡಗಳ ಬೇಡಿಕೆಗೆ ಅನುಗುಣವಾಗಿ ನಾವು ತಾಸೆ, ಡೋಲು ತಯಾರಿಸಿ ಕೊಡುತ್ತೇವೆ’ ಎನ್ನುತ್ತಾರೆ ತಾಸೆ ತಯಾರಕ ಅಲೆವೂರಿನ ಸುನಿಲ್‌ ಸೇರಿಗಾರ್.

‘ಒಂದು ತಾಸೆಗೆ ₹13 ಸಾವಿರ, ಡೋಲನ್ನು ₹8 ಸಾವಿರಕ್ಕೆ ಮಾರಾಟ ಮಾಡುತ್ತೇವೆ. ಅಷ್ಟಮಿಗೂ ಮೊದಲಿನ ಎರಡು ತಿಂಗಳು ನಮಗೆ ಕೈತುಂಬ ಕೆಲಸ ಇರುತ್ತದೆ. ಒಂದು ಹುಲಿವೇಷದ ತಂಡದಲ್ಲಿ ಕನಿಷ್ಠ 4 ತಾಸೆ ಮತ್ತು ಎರಡು ಡೋಲುಗಳಿರುತ್ತವೆ. ಹುಲಿವೇಷದ ಸಂಖ್ಯೆ ಹೆಚ್ಚಾದಂತೆ ತಾಸೆಯ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಅವರು ತಿಳಿಸುಸುತ್ತಾರೆ.

ಭೂತಕೋಲಗಳಲ್ಲೂ ತಾಸೆಯು ಮುಖ್ಯ ವಾದ್ಯೋಪಕರಣವಾಗಿರುವುದರಿಂದ ಇವುಗಳನ್ನು ತಯಾರಿಸುವವರಿಗೆ ಮಳೆಗಾಲ ಹೊರತು ಪಡಿಸಿ ಉಳಿದ ಅವಧಿಯಲ್ಲಿ ಸದಾ ಬೇಡಿಕೆ ಇರುತ್ತದೆ. ದೇವಸ್ಥಾನಗಳ ಜಾತ್ರೆ, ನಾಗಮಂಡಲಗಳಲ್ಲೂ ತಾಸೆ ಮೇಳವನ್ನು ಬಳಸಲಾಗುತ್ತದೆ.

ಸಿದ್ಧಗೊಂಡಿರುವ ತಾಸೆ
ತಾಸೆಗಾಗಿ ಫೈಬರ್‌ ಹೊದಿಕೆ ಸಿದ್ಧಪಡಿಸುತ್ತಿರುವುದು
ಅಷ್ಟಮಿ ನಂತರ ನಮಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಮಳೆಗಾಲದ ಎರಡು ತಿಂಗಳು ಈ ವಾದ್ಯೋಪಕರಣಗಳ ತಯಾರಿಯಲ್ಲಿ ತೊಡಗುತ್ತೇವೆ
–ನವೀನ್‌ ಸೇರಿಗಾರ್ ಕಲ್ಮಾಡಿ, ತಾಸೆ ತಯಾರಕ
ತುಳುನಾಡಿನ ಸಾಂಪ್ರದಾಯಿಕ ವಾದ್ಯೋಪಕರಣವನ್ನು ಯಾವುದೇ ಕಂಪನಿಗಳು ತಯಾರಿಸುತ್ತಿಲ್ಲ. ಫೈಬರ್‌ ಹೊದಿಕೆ ಮತ್ತು ತಾಮ್ರದ ಕಲಶ ಬಳಸಿ ಹದವಾಗಿ ಹಗ್ಗ ಬಿಗಿದು ನಾವೇ ತಯಾರಿಸುತ್ತೇವೆ
–ಸುನಿಲ್‌ ಸೇರಿಗಾರ್ ಅಲೆವೂರು, ತಾಸೆ ತಯಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.