ADVERTISEMENT

ಉಡುಪಿ | ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮೆರೆಯಲಿ: ಎಸ್.ಟಿ. ಸಿದ್ದಲಿಂಗಪ್ಪ

ಪತ್ರಿಕಾ ದಿನಾಚರಣೆಯಲ್ಲಿ ಎಎಸ್‌ಪಿ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:18 IST
Last Updated 2 ಜುಲೈ 2024, 5:18 IST
ಕಾರ್ಯಕ್ರಮದಲ್ಲಿ ಪತ್ರಕರ್ತ ಮಂಜುನಾಥ ಶೆಣೈ ಜನ್ನಾಡಿ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು
ಕಾರ್ಯಕ್ರಮದಲ್ಲಿ ಪತ್ರಕರ್ತ ಮಂಜುನಾಥ ಶೆಣೈ ಜನ್ನಾಡಿ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು   

ಉಡುಪಿ: ‘ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ದಲಿಂಗಪ್ಪ ಹೇಳಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದಲ್ಲಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ‘ಪೊಲೀಸ್ ತನಿಖೆಯಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ಉಪನ್ಯಾಸ ನೀಡಿದರು.

ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಎಸಗುವ ಲೋಪಗಳನ್ನು ಜನರ ಮುಂದೆ ಇಡುವ ಜವಾಬ್ದಾರಿ ಮಾಧ್ಯಮದ್ದು. ಕೆಲವು ಸೂಕ್ಷ್ಮ ಪ್ರಕರಣಗಳಲ್ಲಿ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿಗಳ ಚಾರಿತ್ರ್ಯಹರಣ ಮಾಡಲಾಗುತ್ತಿದೆ ಇದು ಆತಂಕಕಾರಿ ಬೆಳವಣಿಗೆ. ಅಪ್ರಾಪ್ತ ವಯಸ್ಕರು, ಬಾಲಕರ ಬಗ್ಗೆ ವರದಿ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು, ಯಾವುದೇ ಕಾರಣಕ್ಕೂ ಅವರ ಮಾಹಿತಿ ಬಹಿರಂಗಪಡಿಸುವಂತಿಲ್ಲ ಎಂದು ಸಲಹೆ ನೀಡಿದರು.

ADVERTISEMENT

ಕ್ರಿಮಿನಲ್‌, ಸಿವಿಲ್‌ ವ್ಯಾಜ್ಯಗಳು ವರ್ಷಗಟ್ಟಲೆ ನಡೆದು ನ್ಯಾಯದಾನ ವಿಳಂಬವಾಗುವುದನ್ನು ತಡೆಯುವ ಉದ್ದೇಶದಿಂದ ಹೊಸ ಕಾನೂನುಗಳು ಜಾರಿಗೆ ಬಂದಿವೆ. ಇದರ ಅನ್ವಯ ಆನ್‌ಲೈನ್‌ ಮೂಲಕವೂ ದೂರು ಸಲ್ಲಿಸಬಹುದು. ಅಪರಾಧ ಕೃತ್ಯ ನಡೆದ ಸ್ಥಳ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಪೊಲೀಸರಿಗೆ ಶೂನ್ಯ ಎಫ್‌ಐಆರ್‌ ದಾಖಲಿಸಬಹುದು. ಸಮನ್ಸ್ ವಾರಂಟ್ ಅನ್ನು ಎಸ್ಎಂಎಸ್, ವಾಟ್ಸ್ಆ್ಯಪ್‌ ಮೂಲಕವೂ ಕಳುಹಿಸಬಹುದು. ಹೊಸ ಕಾನೂನಿನಿಂದ ದೂರುದಾರರಿಗೂ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು.

ಮಣಿಪಾಲ ಎಂಐಸಿಯ ಟೆವಿಷಜನ್ ಮತ್ತು ಫಿಲ್ಮ್ ಪ್ರೊಡಕ್ಷನ್ ವಿಭಾಗದ ಪ್ರಾಧ್ಯಾಪಕ ಸತ್ಯಬೋಧ ಜೋಶಿ ಮಾತನಾಡಿ, ಪತ್ರಕರ್ತರು ದೊರೆತ ಅವಕಾಶವನ್ನು ಬಳಸಿಕೊಳ್ಳಬೇಕು. ನಮ್ಮ ಕೆಲಸದ ಜೊತೆಗೆ ಇತರರ ಸಮಸ್ಯೆಗೆ ಮಿಡಿಯುವುದು ಅತೀ ಮುಖ್ಯ ಎಂದು ಹೇಳಿದರು.

‘ಮಂಗಳೂರು ಸಮಾಚಾರ’ ಪತ್ರಿಕೆಯ ಮೂಲಪ್ರತಿ ಅನಾವರಣಗೊಳಿಸುವ ಮೂಲಕ ವಿನೂತನವಾಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮಿ, ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಉಜ್ವಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ಪತ್ರಕರ್ತ ಮಂಜುನಾಥ ಶೆಣೈ ಜನ್ನಾಡಿ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು. ನಿವೃತ್ತ ಉಪಸಂಪಾದಕ ಜಯಾನಂದ ಅವರನ್ನು ಸನ್ಮಾನಿಸಲಾಯಿತು.

ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಅರಾಡಿ ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಅವಿನಾಶ್ ಕಾಮತ್ ನಿರೂಪಿಸಿದರು. ಸಂಘದ ಕಾರ್ಯದರ್ಶಿ ರಹೀಂ ಉಜಿರೆ ಅತಿಥಿಗಳನ್ನು ಪರಿಚಯಿಸಿದರು. ಸನ್ಮಾನಿತರ ಪರಿಚಯವನ್ನು ಕುಂದಾಪುರ ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರಭಾಕರ ಆಚಾರ್ಯ ಚಿತ್ತೂರು ಮಾಡಿದರು. ವಿದ್ಯಾರ್ಥಿಗಳ ಪಟ್ಟಿಯನ್ನು ಮೈಕಲ್ ರೋಡ್ರಿಗಸ್ ವಾಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.