ಉಡುಪಿ | ಶಾಲಾ ಮಕ್ಕಳ ಸುರಕ್ಷತೆಗೆ ಇರಲಿ ಆದ್ಯತೆ: ಚಾಲಕರ ಮೇಲೆ ಬೇಕಿದೆ ನಿಗಾ
Published 18 ನವೆಂಬರ್ 2024, 7:38 IST Last Updated 18 ನವೆಂಬರ್ 2024, 7:38 IST ಉಡುಪಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನ ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ
ಉಡುಪಿ: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರು ಅನುಸರಿಸಬೇಕಾದ ಹಲವಾರು ಮಾನದಂಡಗಳಿದ್ದರೂ ನಗರದಲ್ಲಿ ಕೆಲವರು ಅವುಗಳನ್ನು ಉಲ್ಲಂಘಿಸುತ್ತಿದ್ದಾರೆಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಲೇ ಇವೆ.
ನಗರದಲ್ಲಿ ದಿನನಿತ್ಯ ನೂರಾರು ಶಾಲಾ ವಾಹನಗಳು ಓಡಾಟ ನಡೆಸುತ್ತವೆ. ಜೊತೆಗೆ ಆಟೊ, ವ್ಯಾನ್, ಟೆಂಪೊ ಟ್ರಾವೆಲರ್, ಮಿನಿ ಬಸ್‌ಗಳಲ್ಲಿಯೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಮಕ್ಕಳನ್ನು ಕರೆದೊಯ್ಯುವ ವಾಹನಗಳು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಸೂಚನೆಗಳಿದ್ದರೂ, ಇಂತಹ ವಾಹನಗಳು ಅಪಘಾತಕ್ಕೆ ಒಳಗಾದಾಗ ಮಕ್ಕಳ ಸುರಕ್ಷತೆಯ ಪ್ರಶ್ನೆಗಳು ಕಾಡುತ್ತವೆ.
ಈಚೆಗೆ ಮಣಿಪಾಲ ಸಮೀಪದ ಕೆಳ ಪರ್ಕಳದ ಬಳಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ರಿಕ್ಷಾವೊಂದು ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ಅತಿ ವೇಗದಿಂದಾಗಿ ಇಂತಹ ಅಪಘಾತಗಳು ಸಂಭವಿಸುತ್ತಿವೆ ಎಂಬ ಆರೋಪಗಳು ಕೂಡ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಲೇ ಇವೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ಚಾಲಕ ಮದ್ಯಪಾನ ಮಾಡಿರುವ ಕುರಿತೂ ಆರೋಪಗಳು ಕೇಳಿ ಬಂದಿವೆ. ಏಕಮುಖ ಸಂಚಾರವಿರುವ ರಸ್ತೆಗಳಲ್ಲೂ ವಿರುದ್ಧ ದಿಕ್ಕಿನಿಂದ ಶಾಲಾ ವಾಹನಗಳನ್ನು ಚಲಾಯಿಸಿಕೊಂಡು ಬರುವ ಪ್ರಸಂಗಗಳೂ ನಗರದ ಕೆಲವೆಡೆ ನಡೆದಿವೆ ಎನ್ನುತ್ತಾರೆ ಸಾರ್ವಜನಿಕರು.
ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಬಾರದು, ಶಾಲಾ ವಾಹನಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ, ಜಿಪಿಎಸ್ ಕಡ್ಡಾಯವಾಗಿ ಅಳವಡಿಸಬೇಕೆಂಬ ನಿಯಮವಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಮತ್ತು ಮತ್ತೆ ಮನೆಗೆ ಬಿಡುವಾಗ ಸಹಾಯಕರೊಬ್ಬರು ಇರಬೇಕು ಎಂಬ ಸೂಚನೆಗಳಿದ್ದರೂ ಕೆಲವೆಡೆ ಇವುಗಳು ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ.
ಶಾಲಾ ವಾಹನಗಳ ನೋಂದಣಿ ಪ್ರಮಾಣ ಪತ್ರದ ಜೊತೆಗೆ ಫಿಟ್‌ನೆಸ್ ಸರ್ಟಿಫಿಕೆಟ್ ಕೂಡಾ ಕಡ್ಡಾಯ. 15 ವರ್ಷ ಅವಧಿ ಮಿರಿದ ವಾಹನಗಳನ್ನು ಬಳಸಬಾರದು, ವಿಮೆ ಮಾಡಿಸಿರಬೇಕು, ಚಾಲಕರ ಹಿನ್ನೆಲೆ ಅರಿತಿರಬೇಕು ಎಂಬ ಸೂಚನೆಯೂ ಇದೆ.
ನಗರದ ಬಹುತೇಕ ರಸ್ತೆಗಳು ಹೊಂಡ ಬಿದ್ದು, ಶೋಚನೀಯ ಸ್ಥಿತಿಯಲ್ಲಿವೆ. ಇಂತಹ ರಸ್ತೆಗಳಲ್ಲಿ ಆಟೊ ರಿಕ್ಷಾಗಳು ಅತಿ ವೇಗದಿಂದ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಶಾಲಾ ಮಕ್ಕಳನ್ನು ಕರೆಯೊಯ್ಯುವ ರಿಕ್ಷಾ ಚಾಲಕರು ಸ್ವಲ್ಪ ಎಚ್ಚರಿಕೆ ತಪ್ಪಿದರೂ ಮಕ್ಕಳಿಗೆ ಅಪಾಯವುಂಟಾಗುವ ಸಾಧ್ಯತೆ ಇದೆ.
ಶಾಲಾ ಮಕ್ಕಳನ್ನು ಕರೆದೊಯ್ಯುವ ಎಲ್ಲಾ ವಾಹನಗಳನ್ನು ಸಂಬಂಧಪಟ್ಟವರು ತಪಾಸಣೆ ಮಾಡಬೇಕು. ನಿಯಮ ಮೀರಿರುವುದು ಕಂಡು ಬಂದರೆ ಅಂತಹ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ರಿಕ್ಷಾ
‘ಪ್ರಕರಣ ದಾಖಲಿಸಲಾಗುವುದು’
ಶಾಲಾ ವಾಹನಗಳನ್ನು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುವುದು ಕಂಡುಬಂದರೆ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ನಿಯಮಗಳ ಗಂಭೀರ ಉಲ್ಲಂಘನೆ ಕಂಡು ಬಂದರೆ ಚಾಲಕರ ಚಾಲನಾ ಪರವಾನಗಿ ಅಥವಾ ಆರ್‌ಸಿಯನ್ನು ಅಮಾನತುಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಶಿಫಾರಸು ಮಾಡಲಾಗುವುದು. ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಚಾಲಕರ ವಿರುದ್ಧ ಕ್ರಮ ಕೈಗೊಂಡರೆ ಆ ವಿಚಾರವನ್ನು ಸಂಬಂಧಪಟ್ಟ ಶಾಲೆಗಳ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದರು.
‘ಶಾಲೆಯವರೇ ಹೊಣೆಗಾರರು’
ಶಾಲೆಯವರ ಅಧೀನದಲ್ಲಿರುವ ಬಸ್‌ಗಳ ಚಾಲಕರು ನಿಯಮ ಮೀರಿದ್ದು ಕಂಡು ಬಂದರೆ ಶಾಲೆಯವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಶಾಲಾ ಬಸ್‌ಗಳನ್ನು ನಿಗದಿತ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಚಲಾಯಿಸಬಾರದು. ಶಾಲಾ ಬಸ್‌ಗಳಿಗೆ ಜಿಪಿಎಸ್ ಅಳವಡಿಸಿ ವಾಹನಗಳು ಚಲಿಸುವ ವೇಗದ ಬಗ್ಗೆ ಶಾಲೆಯವರು ನಿಗಾ ವಹಿಸಬೇಕು. ಆಟೊಗಳಲ್ಲೂ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಗಮನಕ್ಕೆ ಬಂದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಇನ್ನೊಮ್ಮೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.
‘ಕಾನೂನಿನ ಅರಿವು ಮೂಡಿಸಿ’
ಶಾಲಾ ಮಕ್ಕಳನ್ನು ಕರೆದೊಯ್ಯುವ ರಿಕ್ಷಾ ಚಾಲಕರು ಅತಿವೇಗದಿಂದ ಚಲಾಯಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಸಂಬಂಧಪಟ್ಟವರು ರಿಕ್ಷಾ ಚಾಲಕರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಬೇಕು. ಶಾಲಾ ಮಕ್ಕಳ ಸುರಕ್ಷತೆ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು ಒತ್ತಾಯಿಸಿದ್ದಾರೆ.
‘ಕಟ್ಟುನಿಟ್ಟಿನ ಸೂಚನೆ ’
ನಮ್ಮ ಶಾಲೆಯಲ್ಲಿ ಶಾಲಾ ಬಸ್‌ಗಳಿಲ್ಲ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಮತ್ತು ಮನೆಗೆ ಬಿಡಲು ರಿಕ್ಷಾಗಳನ್ನು ಬಳಸಲಾಗುತ್ತಿದೆ. ಅನುಭವಿ ರಿಕ್ಷಾ ಚಾಲಕರನ್ನಷ್ಟೇ ಈ ಕೆಲಸಕ್ಕೆ ನಿಯೋಜಿಸುತ್ತಿದ್ದೇವೆ. ಪ್ರತಿವರ್ಷ ರಿಕ್ಷಾ ಚಾಲಕರ ಸಭೆ ಕರೆದು ಮಕ್ಕಳ ಸುರಕ್ಷತೆ ಸಂಬಂಧಪಟ್ಟ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತೇವೆ. ನಮ್ಮಲ್ಲಿ ರಿಕ್ಷಾ ಚಾಲಕರು ಮಕ್ಕಳನ್ನು ತರಗತಿ ಕೋಣೆಯವರೆಗೂ ಕರೆದುಕೊಮಡು ಬರುತ್ತಾರೆ. ಯಾವುದೇ ಕಾರಣಕ್ಕೂ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಕೊಂಡೊಯ್ಯಲು ಬಿಡುವುದಿಲ್ಲ. ಮಕ್ಕಳ ಸಂಖ್ಯೆ ಜಾಸ್ತಿ ಇದ್ದರೆ ಎರಡು ಟ್ರಿಪ್ ಕರೆದೊಯ್ಯಲು ಸೂಚಿಸುತ್ತೇವೆ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ನಗರದ ಮುಕುಂದ ಕೃಪಾ ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಶೆಟ್ಟಿ ತಿಳಿಸಿದರು.
‘ಫಲಕ ಅಳವಡಿಸಿ’
ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ರಿಕ್ಷಾ ಸೇರಿದಂತೆ ಎಲ್ಲಾ ವಾಹನಗಳಲ್ಲೂ ‘ಶಾಲಾ ವಾಹನ’ ಎಂದು ಹಳದಿ ಬಣ್ಣದಲ್ಲಿ ಫಲಕ ಹಾಕಬೇಕು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವೇಳೆ ಚಾಲಕರು ಮದ್ಯಪಾನ ಮಾಡಿದ್ದರೆ ಅಂತಹವರ ಚಾಲನಾ ಪರವಾನಗಿ ಅಮಾನತುಗೊಳಿಸಬೇಕು. ಕುಡಿದು ವಾಹನ ಚಾಲಯಿಸಿದ ಚಾಲಕನಿಗೆ ಯಾವುದೇ ಯೂನಿಯನ್‌ನವರು ಸಹಕಾರ ನೀಡಬಾರದು. ಚಾಲಕರಿಗೆ ವರ್ಷದಲ್ಲಿ ಒಮ್ಮೆಯಾದರೂ ವೈದ್ಯಕೀಯ ತಪಾಸಣೆ ನಡೆಸಬೇಕು. ಈ ಕುರಿತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳಬೆಟ್ಟು ಒತ್ತಾಯಿಸಿದ್ದಾರೆ.