ಉಡುಪಿ: ಹಿರಿಯ ಸಾಹಿತಿ, ರಂಗಕರ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯ (80) ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಗೀತ ನಾಟಕ, ನೃತ್ಯ ರೂಪಕ ಹಾಗೂ ಸಣ್ಣ ಕಥೆಗಳ ಮೂಲಕ ಪ್ರಸಿದ್ಧರಾಗಿದ್ದ ಮಾಧವ ಆಚಾರ್ಯರು ಮಾರ್ಚ್ 25, 1941ರಲ್ಲಿ ಬ್ರಹ್ಮಾವರದ ಉಪ್ಪೂರಿನಲ್ಲಿ ಜನಿಸಿದರು. ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
‘ಬಾಗಿದ ಮರ’, ‘ಹಾಡಿ’, ‘ಭಾಗದೊಡ್ಡಮ್ಮನ ಕಥೆ’, ‘ಸೀಳುಬಿದಿರಿನ ಸಿಳ್ಳು’ ಅವರ ಪ್ರಮುಖ ಕಥಾ ಸಂಕಲನಗಳು. ಅವರ ‘ಶಬರಿ’ ನೃತ್ಯ ರೂಪಕ ಭಾರಿ ಪ್ರಸಿದ್ಧಿ ಪಡೆದಿತ್ತು. ‘ಸಮೂಹ’ ಎಂಬ ನೃತ್ಯ ರೂಪಕ ಸಂಸ್ಥೆ ಕಟ್ಟಿ ನೂರಾರು ಕಲಾವಿದರನ್ನು ಬೆಳೆಸಿದ ಹಿರಿಮೆ ಉದ್ಯಾವರ ಮಾಧವ ಆಚಾರ್ಯರದ್ದು.
ಚಂದ್ರಶೇಖರ ಕೆದ್ಲಾಯ, ಗುರುರಾಜ ಮಾರ್ಪಳ್ಳಿ ಅವರಂಥಹ ಪ್ರಸಿದ್ಧ ಸಂಗೀತ ನಿರ್ದೇಶಕರು ಇವರ ಗರಡಿಯಲ್ಲಿ ಬೆಳೆದವರು. ಪುತ್ರಿ ಹಾಗೂ ಭರತನಾಟ್ಯ ಕಲಾವಿದೆ ಭ್ರಮರಿ ಶಿವಪ್ರಕಾಶ್ ತಂದೆಯ ಹಾದಿಯಲ್ಲಿ ಸಾಗಿದ್ದು ನೃತ್ಯ ರೂಪಕಗಳ ಪ್ರಯೋಗದಲ್ಲಿ ನಿರತರಾಗಿದ್ದಾರೆ.
ಈಚೆಗೆ ಕೋವಿಡ್‌ಗೆ ತುತ್ತಾಗಿ ಗುಣಮುಖರಾಗಿದ್ದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರಿಗೆ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.