ADVERTISEMENT

ಹೆಚ್ಚುವರಿ ಪೌರಕಾರ್ಮಿಕರ ನೇಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ: ಪ್ರಿಯಾಂಕ ಮೇರಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 13:18 IST
Last Updated 30 ಸೆಪ್ಟೆಂಬರ್ 2018, 13:18 IST
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪೌರಕಾರ್ಮಿಕರನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸನ್ಮಾನಿಸಿದರು.ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪೌರಕಾರ್ಮಿಕರನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸನ್ಮಾನಿಸಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಪ್ರವಾಸಿ ತಾಣವಾದ ಎಂಬ ಹಿನ್ನೆಲೆಯಲ್ಲಿ ಉಡುಪಿ ನಗರ ಸಭೆಗೆ ಹೆಚ್ಚುವರಿ ಪೌರಕಾರ್ಮಿಕರ ಹುದ್ದೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಉಡುಪಿ ಜಿಲ್ಲಾ ಪೌರ ಕಾರ್ಮಿಕರ ಸಂಘಟನೆ ಭಾನುವಾರ ಆದಿ ಉಡುಪಿ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

2011ರ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಪೌರ ಕಾರ್ಮಿಕರ ಕಾಯಂ ಹುದ್ದೆ ನೇಮಕಾತಿಗೆ ಆದೇಶವನ್ನು ನೀಡಿದೆ. ಆದರೆ ಉಡುಪಿ ನಗರ ಸಭೆ ಹಾಗೂ ಕುಂದಾಪುರ ಪುರಸಭೆಯಲ್ಲಿ 2011ರ ಜನಸಂಖ್ಯೆ ಅನುಗುಣವಾಗಿ ಆ ಪ್ರದೇಶದಲ್ಲಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿರುವುದು ಕಂಡುಬಂದಿದ್ದೆ. ಆದರಿಂದ ಕೆಲವು ಪೌರ ಕಾರ್ಮಿಕರನ್ನು ನೇಮಕಾತಿಪಟ್ಟಿಯಿಂದ ತೆಗೆಯಲಾಗಿದೆ. ಆದರೆ ಕುಂದಾಪುರ ಪುರಸಭೆ ಈ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿದ್ದು, ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಬಾಕಿ ಉಳಿದ ಕಾರ್ಮಿಕರನ್ನು ಗುತ್ತಿಗೆ ಆಧಾರ ಮೇಲೆ ಡ್ರೈವರ್‌ ಸೇರಿದಂತೆ ವಿವಿಧಗಳಿಗೆ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ತಯಾರಿಸಿದ ವಿಸ್ತೃತ ಯೋಜನಾ ವರದಿಗೆ ಇನ್ನೂ ಅನುಮೋದನೆ ದೊರಕಿಲ್ಲ. ಕಾಯಂ ನೇಮಕಾತಿ ಸಂದರ್ಭದಲ್ಲಿ ಕೈ ಬಿಟ್ಟವರು ನ್ಯಾಯಾಲಯ ಮೆಟ್ಟಿಲು ಏರಿದ್ದಾರೆ. ಆ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೆಲವೊಂದು ಪುರಸಭೆಯಲ್ಲಿ ಪೌರ ಕಾರ್ಮಿಕರ ಹುದ್ದೆ ಖಾಲಿಯಿದ್ದರೂ ನೇಮಕವಾಗುತ್ತಿಲ್ಲ. ಸರ್ಕಾದಿಂದ ಪ್ರತ್ಯೇಕ ನೇಮಕಾತಿ ಆದೇಶ ಬರಬೇಕಾಗಿದೆ ಎಂದರು.

ತಳ ಸಮುದಾಯ ಅಧ್ಯಯನ ಕೇಂದ್ರದ ಸಂಶೋಧಕ ಡಾ. ಆರ್‌.ವಿ. ಚಂದ್ರಶೇಖರ್‌ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಹಕ್ಕು ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕು. ನಗರ, ಗ್ರಾಮೀಣ ಪ್ರದೇಶದಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರ ಮಕ್ಕಳಿಗೆ ಎಲ್‌.ಕೆ.ಜಿಯಿಂದ ಉನ್ನತ ಶಿಕ್ಷಣದ ತನಕ ಉಚಿತ ಶಿಕ್ಷಣ ಕ್ರಮ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಅಚ್ಚಿತ, ಲಲಿತ, ರಾಘು, ವಿಶ್ವನಾಥ, ಗಣೇಶ ಇಂದಿರಾ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ, ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್‌, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಭುಜಬಲಿ, ಜಿಲ್ಲಾ ಕಾರ್ಮಿಕ ನಿರೀಕ್ಷಕ ಎಸ್‌.ಎಸ್‌. ರಾಮಮೂರ್ತಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪಿ ಶಂಕರ್‌ ಸ್ವಾಗತಿಸಿದರು, ಸುಶೀಲ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.