ADVERTISEMENT

ಕಂಚಿನಡ್ಕ ಟೋಲ್‌ಗೇಟ್ ತಾತ್ಕಾಲಿಕ ರದ್ದು: ಲೋಕೋಪಯೋಗಿ ಸಚಿವರ ಆದೇಶ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 2:18 IST
Last Updated 24 ಆಗಸ್ಟ್ 2024, 2:18 IST
ಕಂಚಿನಡ್ಕ ಟೋಲ್‌ಗೇಟ್‌ಗೆ ತಾತ್ಕಾಲಿಕ ತಡೆ ಆದೇಶವಾದ ಪ್ರಯುಕ್ತ ಪಡುಬಿದ್ರಿ ಜಂಕ್ಷನ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು
ಕಂಚಿನಡ್ಕ ಟೋಲ್‌ಗೇಟ್‌ಗೆ ತಾತ್ಕಾಲಿಕ ತಡೆ ಆದೇಶವಾದ ಪ್ರಯುಕ್ತ ಪಡುಬಿದ್ರಿ ಜಂಕ್ಷನ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು   

ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕದ ಪ್ರಸ್ತಾವಿತ ಟೋಲ್‌ಗೇಟ್ ತಾತ್ಕಾಲಿಕ ರದ್ದುಗೊಳಿಸಲು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆದೇಶಿಸಿದ್ದಾರೆ.

ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಕಂಚಿನಡ್ಕದಲ್ಲಿ ಟೋಲ್‌ಗೇಟ್ ರದ್ದು ಮಾಡಬೇಕೆಂದು ಆಗ್ರಹಿಸಿ ಕಳೆದ ಬುಧವಾರ ಪ್ರತಿಭಟನಾ ಸಭೆ ನಡೆಸಿ, ಗುರುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ನಿಯೋಗದವರು ಬೆಂಗಳೂರಿನಲ್ಲಿ ಭೇಟಿಯಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ತಿಳಿಸಿದ್ದರು.

ಸಾರ್ವಜನಿಕ ಹಿತದೃಷ್ಟಿಯಿಂದ, ಕಂಚಿನಡ್ಕ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈಗ ನೀಡಲಾಗಿರುವ ಕಾರ್ಯಾದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದು, ಕಂಚಿನಡ್ಕ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಸಂಭ್ರಮಾಚರಣೆ: ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿಯ ಪಡುಬಿದ್ರಿ ಜಂಕ್ಷನ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.  ವಿನಯಕುಮಾರ್ ಸೊರಕೆ ಹಾಗೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿ ಜಯಘೋಷ ಕೂಗಿದಿರು.

ಈ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಧನ್ಯವಾದ ಸಲ್ಲಿಸಿದೆ.

ವಿಜಯೋತ್ಸವ: ಟೋಲ್ ಗೇಟ್ ತಾತ್ಕಾಲಿಕ ರದ್ದತಿ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ್ದು, ಶನಿವಾರ ಸಂಜೆ ಪಡುಬಿದ್ರಿ ಪೇಟೆಯಲ್ಲಿ ಸಿಹಿತಿಂಡಿ ಹಂಚಿ ವಿಜಯೋತ್ಸವ ಆಚರಿಸಲಾಗುವುದು ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಮಾಹಿತಿ ನೀಡಿದ್ದಾರೆ.

ಇಂದು ಕಂಚಿನಡ್ಕದಲ್ಲಿ ಹೋರಾಟ

ಉದ್ದೇಶಿತ ಕಂಚಿನಡ್ಕ ಟೋಲ್ ಕೇಂದ್ರ ತಾತ್ಕಾಲಿಕವಾಗಿ ರದ್ದಾಗಿದ್ದು ಈ ರಸ್ತೆಯಲ್ಲಿ ಟೋಲ್ ಶಾಶ್ವತ ರದ್ದಾಗಬೇಕು. ಈ ನಿಟ್ಟಿನಲ್ಲಿ ಶನಿವಾರ ಹೋರಾಟ ನಡೆಯಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಬೆಳಿಗ್ಗೆ 9.30ಕ್ಕೆ ಕಂಚಿನಡ್ಕದಲ್ಲಿ ಜನರು ಸೇರಲಿದ್ದಾರೆ. ಎಲ್ಲ ರಿಕ್ಷಾ ಕಾರು ಟೆಂಪೋ ಲಾರಿ ಬಸ್ ಮಾಲೀಕರು ವ್ಯಾಪಾರಸ್ಥರು ರಾಜಕೀಯ ಪಕ್ಷಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ ಎಂದು ಪಡುಬಿದ್ರಿ- ಬೆಳ್ಮಣ್- ಕಾರ್ಕಳ ಟೋಲ್ ವಿರೋಧಿ ಹೋರಾಟ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.