ADVERTISEMENT

ಕಾರ್ಕಳ | ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:13 IST
Last Updated 30 ಜೂನ್ 2024, 15:13 IST
ಕಾರ್ಕಳ ಬಸ್ ನಿಲ್ದಾಣದಲ್ಲಿ ಶನಿವಾರ ಕಾರ್ಕಳ ಮಂಡಲ ಬಿಜೆಪಿ ವತಿಯಿಂದ ರಾಜ್ಯದಲ್ಲಿ ಅಗತ್ಯ ವಸ್ತುಗಳ ಅನಿಯಮಿತ ಬೆಲೆ ಏರಿಕೆ, ಹಾಲಿನ ದರ ಏರಿಕೆ ವಿರೋಧಿಸಿ ಹಾಲು ರಹಿತ ಟೀ ವಿತರಿಸಿ ಪ್ರತಿಭಟನೆ ನಡೆಸಲಾಯಿತು
ಕಾರ್ಕಳ ಬಸ್ ನಿಲ್ದಾಣದಲ್ಲಿ ಶನಿವಾರ ಕಾರ್ಕಳ ಮಂಡಲ ಬಿಜೆಪಿ ವತಿಯಿಂದ ರಾಜ್ಯದಲ್ಲಿ ಅಗತ್ಯ ವಸ್ತುಗಳ ಅನಿಯಮಿತ ಬೆಲೆ ಏರಿಕೆ, ಹಾಲಿನ ದರ ಏರಿಕೆ ವಿರೋಧಿಸಿ ಹಾಲು ರಹಿತ ಟೀ ವಿತರಿಸಿ ಪ್ರತಿಭಟನೆ ನಡೆಸಲಾಯಿತು   

ಕಾರ್ಕಳ: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಅನಿಯಮಿತ ಬೆಲೆ ಏರಿಕೆ ಮಾಡಿರುವುದಲ್ಲದೆ, ಹಾಲಿನ ದರವನ್ನೂ ಏರಿಸಿದೆ ಎಂದು ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಬಸ್ ನಿಲ್ದಾಣದಲ್ಲಿ ಶನಿವಾರ ಬಿಜೆಪಿ ಮಂಡಲದ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ಘೋಷಿಸಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಹಣ ಹೊಂದಿಸಲು ಹೆಣಗಾಡುತ್ತಿದೆ  ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ‌ಆಗಿದ್ದಾಗ ಹೈನುಗಾರರಿಗೆ ₹2 ಸಬ್ಸಿಡಿ ನೀಡಿದ್ದರು. ನಂತರ ಬೊಮ್ಮಾಯಿ ಅವರ ಅವಧಿಯಲ್ಲೂ ಸಬ್ಸಿಡಿ ದರ ₹5ಕ್ಕೆ ಏರಿಸಲಾಗಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ₹1,100 ಕೋಟಿ ಸಬ್ಸಿಡಿ ಬಾಕಿ ಇರಿಸಿಕೊಂಡಿದೆ. ಸರ್ಕಾರದ ಹತ್ತಿರ ಹಣವಿಲ್ಲ, ರಾಜ್ಯದಲ್ಲಿ ಅಭಿವೃದ್ಧಿಗೂ ಹಣವಿಲ್ಲ. ಜುಲೈ 3ರಂದು ಬೆಲೆ ಏರಿಕೆ ವಿರೋಧಿಸಿ ರಾಜ್ಯದ ಎಲ್ಲ ಬಿಜೆಪಿ ಶಾಸಕರು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದರು.

ADVERTISEMENT

ಮಂಡಲಾಧ್ಯಕ್ಷ ನವೀನ್ ನಾಯಕ್, ಮುಖಂಡರಾದ ಮಹಾವೀರ ಹೆಗ್ಡೆ, ಎಸ್. ನಿತ್ಯಾನಂದ ಪೈ, ವಕ್ತಾರ ರವೀಂದ್ರ ಮೊಯಿಲಿ, ಸತೀಶ್ ಪೂಜಾರಿ ಬೋಳ, ಸುಹಾಸ್ ಶೆಟ್ಟಿ, ಪ್ರಕಾಶ್ ರಾವ್, ಅವಿನಾಶ್ ಶೆಟ್ಟಿ, ಪ್ರಭಾವತಿ ಇದ್ದರು. ಪ್ರತಿಭಟನೆಯಲ್ಲಿ ಹಾಲು ರಹಿತ ಚಹಾ ತಯಾರಿಸಿ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.