ಉಡುಪಿ: ಜಿಲ್ಲೆಯಾದ್ಯಂತ ಭತ್ತ ಕಟಾವು ಯಂತ್ರಗಳಿಗೆ ಗಂಟೆಗೆ ₹2,400ಕ್ಕೂ ಹೆಚ್ಚು ದರ ವಸೂಲಿ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿ ಕೂಡಲೇ ಮಧ್ಯಪ್ರವೇಶ ಮಾಡಿ ಗಂಟೆಗೆ ವೈಜ್ಞಾನಿಕವಾಗಿ ಗರಿಷ್ಠ ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘವು ಒಂದು ತಿಂಗಳ ಹಿಂದೆ ಸಮಸ್ಯೆ ಬಗೆಹರಿಸಲು ಮನವಿ ನೀಡಿದರೂ ರೈತರಿಂದ ಹೆಚ್ಚುವರಿ ದರ ವಸೂಲಿ ಮಾಡುವ ಯಂತ್ರದ ಮಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ಕೃಷಿ ಕೇಂದ್ರಗಳ ಮೂಲಕ ಭತ್ತ ಕಟಾವು ಯಂತ್ರ ಒದಗಿಸಬೇಕು, ಭತ್ತ ಖರೀದಿ ಕೇಂದ್ರವನ್ನು ತಕ್ಷಣವೇ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ತೆರೆಯಬೇಕು ಮತ್ತು ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಚಂದ್ರಶೇಖರ್ ವಿ., ಅನಿಲ್ ಬಾರ್ಕೂರು, ಗಣೇಶ್ ಬಾರ್ಕೂರು, ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ, ಕೆ. ಶಂಕರ್, ಚಿಕ್ಕ ಮೊಗವೀರ, ಶಶಿಧರ್ ಗೊಲ್, ಬಲ್ಕಿಸ್, ಸುಭಾಷ್ ಪಾಲ್ಗೊಂಡಿದ್ದರು. ಪ್ರತಿಭಟನೆಯ ನಂತರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.