ADVERTISEMENT

ಉಡುಪಿ: ಪುತ್ತಿಗೆ ಶ್ರೀಗಳ ಅದ್ಧೂರಿ ಪುರಪ್ರವೇಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 14:45 IST
Last Updated 8 ಜನವರಿ 2024, 14:45 IST
   

ಉಡುಪಿ: ಪುತ್ತಿಗೆ ಮಠದ ಯತಿಗಳಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರ ಪುರಪ್ರವೇಶ ಸೋಮವಾರ ಅದ್ಧೂರಿಯಾಗಿ ನೆರವೇರಿತು.

ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳ ದರ್ಶನ ಮುಗಿಸಿ ಉಡುಪಿಯ ಜೋಡುಕಟ್ಟೆಗೆ ಆಗಮಿಸಿದ ಉಭಯ ಯತಿಗಳಿಗೆ ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ಸ್ವಾಗತ ಕೋರಿದರು. ಬಳಿಕ ಜೋಡುಕಟ್ಟೆಯ ಮಂದಿರದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಯತಿಗಳು ಪುರಪ್ರವೇಶ ಮೆರವಣಿಗೆಯ ವೈಭವವನ್ನು ವೀಕ್ಷಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಸ್‌ಪಿ ಡಾ.ಕೆ.ಅರುಣ್‌, ಪೌರಾಯುಕ್ತ ರಾಯಪ್ಪ, ಜನಪ್ರತಿನಿಧಿಗಳು ಹಾಗೂ ಗಣ್ಯರು ಸ್ವಾಮೀಜಿಗೆ ಹೂಮಾಲೆ ಹಾಕಿ ಸ್ವಾಗತ ಕೋರಿದರು.

ADVERTISEMENT

ಬಳಿಕ ಹಂಸ ಅಲಂಕೃತ ವಾಹನದಲ್ಲಿ ಕುಳಿತ ಉಭಯ ಯತಿಗಳನ್ನು ಮೆರವಣಿಗೆ ಮೂಲಕ ಕೃಷ್ಣಮಠದ ರಥಬೀದಿಗೆ ಕರೆತರಲಾಯಿತು. ವಿವಿಧ ಸಮುದಾಯಗಳು, ಸಂಘ ಸಂಸ್ಥೆಗಳು, ಭಜನಾ ಮಂಡಳಿಗಳು, ಚಂಡೆ, ಮದ್ದಲೆ, ಡೋಲು, ಕಹಳೆ, ನಾಸಿಕ್ ಬ್ಯಾಂಡ್‌, ಕೀಲುಕುದುರೆ, ಸ್ಥಬ್ಧಚಿತ್ರ, ಹುಲಿ ಕುಣಿತ, ವೇಷದಾರಿಗಳು ಸೇರಿದಂತೆ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ಅಂದ ಹೆಚ್ಚಿಸಿತ್ತು.

ರಥಬೀದಿಯ ಪ್ರವೇಶಿಸುತ್ತಿದ್ದಂತೆ ಉಭಯ ಯತಿಗಳು ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ, ಬಳಿಕ ಅನಂತೇಶ್ವರ, ಚಂದ್ರಮೌಳೇಶ್ವರ, ಕೃಷ್ಣಮುಖ್ಯಪ್ರಾಣ ದೇವರ ದರ್ಶನ ಪಡೆದು ಪುತ್ತಿಗೆ ಮಠ ಪ್ರವೇಶಿಸಿದರು.

ರಾತ್ರಿ ರಥಬೀದಿಯ ಆನಂದ ತೀರ್ಥ ಮಂಟಪದಲ್ಲಿ ಶ್ರೀಗಳಿಗೆ ಪೌರ ಸನ್ಮಾನ ನಡೆಯಿತು. ಜ.18ರಂದು ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯಲಿದ್ದುಅಂದಿನಿಂದ ಮುಂದಿನ 2 ವರ್ಷಗಳ ಅವಧಿಗೆ ಪುತ್ತಿಗೆ ಮಠದ ಪರ್ಯಾಯ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.