ADVERTISEMENT

ಯಕ್ಷಗಾನದಿಂದ ಪುರಾಣ ಕಥೆಗಳು ಜನಜನಿತ: ಪುತ್ತಿಗೆ ಶ್ರೀ ಅಭಿಮತ

ಯಕ್ಷಶಿಕ್ಷಣ–2024ರ ಉದ್ಘಾಟನಾ ಸಮಾರಂಭದಲ್ಲಿ ಪುತ್ತಿಗೆ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:55 IST
Last Updated 11 ಜುಲೈ 2024, 15:55 IST
ಯಕ್ಷಶಿಕ್ಷಣ-2024 ಅನ್ನು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು
ಯಕ್ಷಶಿಕ್ಷಣ-2024 ಅನ್ನು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು   

ಉಡುಪಿ: ಯಕ್ಷಗಾನ ನಮ್ಮ ಸಂಸ್ಕತಿಯನ್ನು ಬಿಂಬಿಸುವ ಕಲೆಯಾಗಿದ್ದು, ಪುರಾಣ ಕಥೆಗಳು ಇದರಿಂದಾಗಿಯೇ ಜನಜನಿತವಾಗಿವೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠ, ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯಕ್ಷಶಿಕ್ಷಣ–2024ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಯಕ್ಷಗಾನವು ಕೃಷ್ಣ ಮಠದ ರಾಜಾಂಗಣದಿಂದಲೇ ಆರಂಭವಾದ ಕಲೆ. ಮತ್ತೆ ಇಲ್ಲಿಂದಲೇ ನಾಡಿನಾದ್ಯಂತ ಹಬ್ಬುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.

800 ವರ್ಷಗಳ ಹಿಂದೆ ಅದಮಾರು ಮಠದ ಮೂಲಗುರುಗಳಾದ ನರಹರಿ ತೀರ್ಥರಿಂದ ‘ದಶಾವತಾರ’ ಎಂಬುದಾಗಿ ಪ್ರಾರಂಭವಾಗಿ ಇವತ್ತು ಅದು ಯಕ್ಷಗಾನದ ರೂಪದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಕಲೆಯು ಕೃಷ್ಣಮಠದಿಂದಲೇ ಆರಂಭವಾಗಿದೆ ಎನ್ನುವುದಕ್ಕೆ ದಾಖಲೆಗಳಿವೆ ಎಂದರು.

ದೇವಸ್ಥಾನಗಳು ಕಲೆ, ಶಿಕ್ಷಣದ ಮೂಲ ಸ್ಥಾನವಾಗಿವೆ. ಅದರಲ್ಲೂ ಶ್ರೀಕೃಷ್ಣಮಠವು ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಯಕ್ಷಗಾನವು ಕೇವಲ ಮನರಂಜನೆಯ ಕಲೆಯಲ್ಲ. ನಮ್ಮ ಸಾಂಸ್ಕೃತಿಕ ಸಂಸ್ಕೃತಿಯ ರೂವಾರಿಯಾಗಿ ನೆಲೆ ನಿಂತಿದೆ. ಅಂತಹ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಮಹತ್ವದ ಸೇವೆ ಸಲ್ಲಿಸುತ್ತಿದೆ. ಯಕ್ಷಗಾನದ ಬಗೆಗಿನ ಅಭಿಮಾನ ಬಡಿದೆಬ್ಬಿಸುವಲ್ಲಿ ಅವಿರತ ಶ್ರಮಿಸುತ್ತಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.

ADVERTISEMENT

ಯಕ್ಷಶಿಕ್ಷಣ ಟ್ರಸ್ಟ್ ಯಕ್ಷಗಾನ ಕಲೆಯನ್ನು ಪ್ರಚುರಪಡಿಸಿರುವ ರೀತಿಯನ್ನು ಮಾದರಿಯಾಗಿಟ್ಟುಕೊಂಡು ನೃತ್ಯ ಸೇರಿದಂತೆ ಉಳಿದ ಕಲೆಗಳನ್ನೂ ಪ್ರಚುರಪಡಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಘಪತಿ ಭಟ್ ಮಾತನಾಡಿ, ರಾಜ್ಯದ ಒಂದು ಕ್ಷೇತ್ರದಲ್ಲಿ ಆರಂಭವಾದ ಯಕ್ಷಗಾನ ಕಲೆಯನ್ನು ಬೆಳೆಸುವ ಕೆಲಸ ಇಂದು ಮೂರು ಕ್ಷೇತ್ರಗಳಿಗೆ ಹಬ್ಬಿದೆ. ಸರ್ಕಾರದ ಅನುದಾನ ಇಲ್ಲದಿದ್ದರೂ ಜನಪ್ರತಿನಿಧಿಗಳು, ಮಠ ಹಾಗೂ ಸಂಘಟನೆಯ ಸಹಭಾಗಿತ್ವದಲ್ಲಿ ಈ ಕಾರ್ಯ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ನಾಡಿನ ಕಲೆಯಾದ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದರು.

ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೋಡ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಬನಾ ಅಂಜುಮ್‌, ಯಲ್ಲಮ್ಮ, ಶೋಭಾ ಶೆಟ್ಟಿ, ಟ್ರಸ್ಟ್ ಅಧ್ಯಕ್ಷ ವಿಜಯ ಬಲ್ಲಾಳ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌ ಇದ್ದರು. ಮುರಲಿ ಕಡೆಕಾರ್‌ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.