ಉಡುಪಿ: ಕೋವಿಡ್ ಲಾಕ್‌ಡೌನ್ ಜಾರಿಯಾದ ಬಳಿಕ ಉಡುಪಿಯಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಕುಡಿತ, ವ್ಯಸನ ಹಾಗೂ ಅನಾರೋಗ್ಯದ ಕಾರಣಕ್ಕೆ ಬೀದಿಗೆ ಬೀಳುವವರ ಸಂಖ್ಯೆ ಹೆಚ್ಚಾಗಿತ್ತು. ಸೋಂಕಿನ ಭಯದಿಂದ ಸಾರ್ವಜನಿಕರು ರಸ್ತೆಯಲ್ಲಿ ಬಿದ್ದವರನ್ನು ಮುಟ್ಟಲು ಭಯಪಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಶಕ್ತರ ನೆರವಿಗೆ ಧಾವಿಸಿದ್ದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು.
ಅನಾಥವಾಗಿ ರಸ್ತೆಯಲ್ಲಿ ಬಿದ್ದಿದ್ದವರನ್ನು ಹುಡುಕಿ ಆಂಬುಲೆನ್ಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸಂಘ ಸಂಸ್ಥೆಗಳ ನೆರವಿನಿಂದ ಆಹಾರದ ಕಿಟ್‌ಗಳನ್ನು ಹಂಚಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕ್ಷೌರದಂಗಡಿಗಳು ಮುಚ್ಚಿದ್ದರಿಂದ ನೂರಾರು ಶೇವಿಂಗ್ ಕಿಟ್‌ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಒಳಕಾಡು.
ಲಾಕ್‌ಡೌನ್ ಅವಧಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟು ಬೀದಿಗೆ ಬಿದ್ದ ಅನಾಥ ಶವಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ಸೋಂಕು ಇಲ್ಲದಿರುವುದು ಖಚಿತವಾಗುತ್ತಿದ್ದಂತೆ ಖುದ್ದು ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಾಲ್ಕೈದು ತಿಂಗಳಲ್ಲಿ ಅವರು ಅಂತ್ಯಸಂಸ್ಕಾರ ನಡೆಸಿದ ಅನಾಥ ಶವಗಳ ಸಂಖ್ಯೆ ಬರೊಬ್ಬರಿ 104.
20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ನಿತ್ಯಾನಂದ ಒಳಕಾಡು ‘ಅನಾಥ ಶವಗಳ ಮುಕ್ತಿದಾತ’ ಎಂದೇ ಉಡುಪಿಯಲ್ಲಿ ಚಿರಪರಿಚಿತ. ಜೀವನದಲ್ಲಿ ಜಿಗುಪ್ಸೆ, ಖಿನ್ನತೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ ಗೌರವಯುತ ಅಂತ್ಯಸಂಸ್ಕಾರದ ಮೂಲಕ ಮುಕ್ತಿ ನೀಡಿದ್ದಾರೆ. ಈ ಕಾರ್ಯಕ್ಕೆ ಪ್ರತಿಯಾಗಿ ಅವರು ಚಿಕ್ಕಾಸು ಕೂಡ ಪಡೆಯುವುದಿಲ್ಲ. ನಗರದ ಕೆಲವರು ಉದ್ಯಮಿಗಳು, ಸಂಘ ಸಂಸ್ಥೆಗಳು ಒಳಕಾಡು ಅವರ ಬೆನ್ನಿಗೆ ನಿಂತಿದ್ದು, ಆರ್ಥಿಕ ನೆರವು ನೀಡಿ ಸಮಾಜಪರ ಕಾರ್ಯವನ್ನು ಪೋಷಿಸುತ್ತಿವೆ.
ಸಮಾಜಸೇವೆ ಮಾಡುವಾಗಲೇ ಕೋವಿಡ್‌ಗೆ ತುತ್ತಾಗಿ ಅವರ ಆರೋಗ್ಯ ಸ್ಥಿತಿ ಗಂಭೀರ ಪರಿಸ್ಥಿತಿ ತಲುಪಿತ್ತು. ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ನಿತ್ಯಾನಂದ ಒಳಕಾಡು ಎಂದಿನಂತೆ ಮತ್ತೆ ಸಮಾಜಸೇವೆ ಮುಂದುವರಿಸಿದ್ದಾರೆ. ಅವರ ಆಂಬುಲೆನ್ಸ್ ಬೀದಿಗೆ ಬಿದ್ದ ಅನಾಥರನ್ನು ಆಸ್ಪತ್ರೆಗೆ ತಂದು ಸೇರಿಸುತ್ತಲೇ ಇದೆ. ಇಂತಹ ಕಾರ್ಯದಿಂದ ನಿಮಗೆ ಸಿಗುವುದು ಏನು ಎಂದು ಪ್ರಶ್ನಿಸಿದಾಗ ‘ಆತ್ಮತೃಪ್ತಿ’ ಎಂಬುದು ಅವರ ಉತ್ತರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.