ಕುಂದಾಪುರ: ನಿರ್ದಿಷ್ಟ ಕಾರಣಗಳಿಗಾಗಿ ಭಗವಂತ ಭೂಮಿಯಲ್ಲಿ ಅವತಾರ ಎತ್ತುತ್ತಲೇ ಇರುತ್ತಾನೆ. ಒಮ್ಮೆ ಬಂದ ಅವತಾರ ಪುನರಾವರ್ತನೆ ಆಗುವುದಿಲ್ಲ. ದೇಗುಲವೆಂದರೆ ದೇವರ ಶರೀರ ಇದ್ದಂತೆ, ಅದರ ಕಾರ್ಯ ಉತ್ತಮ ದ್ರವ್ಯಗಳಿಂದ ನಿರ್ಮಾಣವಾಗಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಹಟ್ಟಿಯಂಗಡಿಯ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ, ನೂತನ ಗುಡಿ ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಆಶೀರ್ವಚನ ನೀಡಿದರು.
ಹಟ್ಟಿಯಂಗಡಿ ಕ್ಷೇತ್ರದಲ್ಲಿ ವಿನಾಯಕನ ಮಂದಿರದ ಶಾಶ್ವತ ದರ್ಶನ ಮಂದಿರ ನಿರ್ಮಾಣವಾಗಿದೆ. ವಿಶಿಷ್ಟ ಸ್ವರೂಪದ ವಿನಾಯಕ ವಿಘ್ನಕಾರಕ, ನಿವಾರಕ ಆಗಿದ್ದಾನೆ. ಮಾತನಾಡುವ ಗಣಪತಿ ಎನ್ನುವ ಸಿದ್ಧಿನಾಮ ಪಡೆದುಕೊಂಡಿರುವ ಸಿದ್ಧಿವಿನಾಯಕ ತನ್ನಲ್ಲಿಗೆ ಬಂದ ಭಕ್ತರಿಗೆ ಅನುಗ್ರಹ ನೀಡುತ್ತಿದ್ದಾನೆ ಎಂದರು.
ನಿವೃತ್ತ ಉಪನ್ಯಾಸಕ ನಾರಾಯಣ ಸ್ವಾಮಿ ಸ್ವಾಗತಿಸಿದರು. ದೇವಸ್ಥಾನ ಧರ್ಮದರ್ಶಿ ಎಚ್. ಬಾಲಚಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ಭಟ್ ನಿರೂಪಿಸಿದರು.
ಎರಡು ಹೋಮ ಕುಂಡಗಳಲ್ಲಿ ನಡೆದಿರುವ 2016 ಗಣಹೋಮ ಕಲ್ಪನೆಗೂ ಮೀರಿದ್ದು. ಹಟ್ಟಿಯಂಗಡಿ ಕ್ಷೇತ್ರದಲ್ಲಿ ನಡೆದಿರುವ ಶ್ರದ್ಧೆಯ ಧಾರ್ಮಿಕ ಕೈಂಕರ್ಯಗಳಿಂದ ಇಲ್ಲಿ ಮೊದಲಿಗಿಂತಲೂ ಅಧಿಕ ಹಾಗೂ ಸಾನಿಧ್ಯ ಬಂದಿದೆ.-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.