ADVERTISEMENT

ಮಾಸ್ಕ್‌ ಕಳುಹಿಸಿದ ಬಾಲಕಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅಭಿನಂದನೆ

300 ಮಾಸ್ಕ್‌ ಹೊಲಿದು ಸೈನಿಕರಿಗೆ ಕಳುಹಿಸಿದ್ದ ಇಶಿತಾ ಆಚಾರ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 20:00 IST
Last Updated 24 ಸೆಪ್ಟೆಂಬರ್ 2020, 20:00 IST
ಮಾಸ್ಕ್ ಹೊಲಿದ ಇಶಿತಾ ಆಚಾರ್
ಮಾಸ್ಕ್ ಹೊಲಿದ ಇಶಿತಾ ಆಚಾರ್   

ಉಡುಪಿ: ಲಾಕ್‌ಡೌನ್ ಅವಧಿಯಲ್ಲಿ 300 ಮಾಸ್ಕ್‌ಗಳನ್ನು ಹೊಲಿದು ಯೋಧರಿಗೆ ಕಳುಹಿಸಿಕೊಟ್ಟಿದ್ದ ಉಡುಪಿಯ ಇಶಿತಾ ಆಚಾರ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನಾ ಪತ್ರ ಕಳುಹಿಸಿದ್ದಾರೆ.ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಇಶಿತಾ ಆಚಾರ್ ರಕ್ಷಣಾ ಸಚಿವರ ಅಭಿನಂದನೆಗೆ ಪಾತ್ರವಾಗಿರುವ ವಿದ್ಯಾರ್ಥಿನಿ.

‘ಸೈನಿಕರಿಗೆ ಮಾಸ್ಕ್ ಹೊಲಿದು ಕಳುಹಿಸಿದ್ದಕ್ಕೆ ಧನ್ಯವಾದಗಳು. ಯೋಧರ ಮೇಲಿರುವ ಆಕೆಯ ಕಾಳಜಿ ಹಾಗೂ ಕೋವಿಡ್–19 ಸೋಂಕು ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪ್ರಯತ್ನ ಅಭಿನಂದನೀಯ’ ಎಂದು ರಾಜನಾಥ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

300 ಮಾಸ್ಕ್‌ ತಯಾರಿ:ಲಾಕ್‌ಡೌನ್ ಅವಧಿಯಲ್ಲಿ ಭಾರತ್‌ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ನ ಸೂಚನೆಯಂತೆ ಮಾಸ್ಕ್‌ ಬ್ಯಾಂಕ್‌ಗೆ ನೀಡಲು ಇಶಿತಾ ಆಚಾರ್ ಹೊಲಿಗೆ ಕಲಿತು ಮನೆಯಲ್ಲಿ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದಳು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಂಚಲು ತಯಾರಿ ಕೂಡ ಮಾಡಿಕೊಂಡಿದ್ದಳು.

ADVERTISEMENT

ಆದರೆ, ಬೇಡಿಕೆಗೂ ಮೀರಿ ಮಾಸ್ಕ್‌ಗಳು ಮಾಸ್ಕ್‌ ಬ್ಯಾಂಕ್‌ಗೆ ಬಂದಿದ್ದರಿಂದ ಮಾಸ್ಕ್‌ಗಳು ಉಳಿದಿದ್ದವು. ಅವುಗಳನ್ನು ದೇಶ ಕಾಯುವ ಸೈನಿಕರಿಗೆ ಕಳುಹಿಸಲು ನಿರ್ಧರಿಸಿದ ಇಶಿತ, ರಕ್ಷಣಾ ಸಚಿವರ ವಿಳಾಸ ಪಡೆದು ಕೊರಿಯರ್ ಮಾಡಿದ್ದಳು. ಒಂದೂವರೆ ತಿಂಗಳ ಬಳಿಕ ರಾಜನಾಥ್ ಸಿಂಗ್ ಅವರಿಂದ ಅಭಿನಂದನಾ ಪತ್ರ ಬಂದಿದೆ ಎಂದು ಇಶಿತಾ ಅವರ ತಾಯಿ ನಂದಿತಾ ಆಚಾರ್ ಮಾಹಿತಿ ನೀಡಿದರು.

ಮಗಳ ಸಮಾಜಪರ ಕಾರ್ಯಕ್ಕೆ ಖುದ್ದು ರಕ್ಷಣಾ ಸಚಿವರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿರುವುದು ಖುಷಿ ತಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.